ಬೀದರ್ | ಸರ್ಕಾರದಿಂದ ಸಿಗುವ ಸೌಲಭ್ಯ ಅಲೆಮಾರಿ ಜನರಿಗೆ ತಲುಪಿಸಿ : ಪಲ್ಲವಿ ಜಿ.

Update: 2025-04-19 21:18 IST
Photo of Press meet
  • whatsapp icon

ಬೀದರ್ : ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಅಲೆಮಾರಿ ಸಮುದಾಯಗಳ ಅಭಿವೃದ್ಧಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳನ್ನು ಅಲೆಮಾರಿ ಜನರಿಗೆ ತಲುಪಿಸಬೇಕು ಎಂದು ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಲೆಮಾರಿ ನಿಗಮದ ಅಧ್ಯಕ್ಷೆ ಪಲ್ಲವಿ ಅವರು ತಿಳಿಸಿದರು.

ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಕರ್ನಾಟಕ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದಿಂದ ಜಾರಿಗೊಳಿಸಿರುವ ವಿವಿಧ ಯೋಜನೆಗಳ ಪ್ರಗತಿ ಪರಿಶೀಲನೆ ಸಭೆ ಹಾಗೂ ಪತ್ರಿಕಾಗೋಷ್ಠಿ ಉದ್ದೇಶಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಪ್ರವಾಸಕೈಗೊಂಡ ಅವರು ಹುಮನಾಬಾದ್, ಬಸವಕಲ್ಯಾಣ, ಭಾಲ್ಕಿ, ಔರಾದ್ ಮತ್ತು ಬೀದರ್ ನ ಅಲೆಮಾರಿ ಸಮುದಾಯದವರು ವಾಸಿಸುವ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ನಿವಾಸಿಗಳೊಂದಿಗೆ ಮಾತನಾಡಿ ಸಮಸ್ಯೆಗಳನ್ನು ತಿಳಿದುಕೊಳ್ಳಲಾಯಿತು. ಅಲ್ಲಿನ ಅಲೆಮಾರಿ ಜನರಿಗೆ ಯಾವುದೇ ರೀತಿಯ ಮೂಲಭೂತ ಸೌಕರ್ಯವಿಲ್ಲ. ಹಾಗೆಯೇ ಬಹಳಷ್ಟು ನೈರ್ಮಲ್ಯದಿಂದ ಕೂಡಿರುವ ವಾತಾವರಣದಲ್ಲಿ ಅವರು ಜೀವನ ಮಾಡುತ್ತಿದ್ದಾರೆ. ಕೂಡಲೇ ಆ ಭಾಗದ ಪುರಸಭೆಯ ಅಧಿಕಾರಿಗಳಿಗೆ ಹಾಗೂ ತಾಲ್ಲೂಕು ಸಹಾಯಕ ನಿರ್ದೇಶಕರಿಗೆ ಸ್ವಚ್ಛಗೊಳಿಸಲು ತಿಳಿಸಿದ್ದೇನೆ ಎಂದು ಹೇಳಿದರು.

ಅಲ್ಲಿನ ಜನರು ಜಾತಿ ಪ್ರಮಾಣಪತ್ರ, ಆಧಾರ್ ಕಾರ್ಡ್, ಪಡಿತರ ಚೀಟಿ ಇಲ್ಲದೇ ಅವಕಾಶ ವಂಚಿತರಾಗಿದ್ದು ನಾನು ಮನಗಂಡಿದ್ದೇನೆ. ಎರಡು ದಿವಸದಲ್ಲಿ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ, ಸ್ಪೆಷಲ್ ಕ್ಯಾಂಪ್ ಮಾಡಿ ವರದಿ ಸಲ್ಲಿಸಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಅಲೆಮಾರಿ ಜನರಿಗೆ ಸ್ವಂತ ನಿವೇಶನಗಳಿಲ್ಲ, ವಸತಿಗಳಿಲ್ಲ. ಅಲೆಮಾರಿ ಜನರಿಗೆ ಸರಕಾರಿ ಜಮೀನನ್ನು ಗುರುತಿಸಿ, ನಿವೇಶನ ನೀಡಬೇಕು ಎಂದು 2016 ರ ಸರ್ಕಾರದ ಆದೇಶದಲ್ಲಿಯೇ ಇದೆ. ಆದರೂ ಅಲೆಮಾರಿ ಜನರಿಗೆ ಇಲ್ಲಿವರೆಗೆ ಅದು ಅವರಿಗೆ ತಲುಪಲಿಲ್ಲ. ಅವರು ಸುಮಾರು 30-40 ವರ್ಷದಿಂದ ಕೊಳಚೆ ಪ್ರದೇಶದಲ್ಲಿಯೇ ಬದುಕುತ್ತಿದ್ದಾರೆ. ಸರ್ಕಾರದ ಯೋಜನೆಗಳು ಅಲೆಮಾರಿಗಳವರೆಗೆ ತಲುಪಿಸುವುದು ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ತಿಳಿಸಿದರು.

ಜಿಲ್ಲೆಯಲ್ಲಿ ನಿವೇಶನ ಇರುವ ಮತ್ತು ಇಲ್ಲದ ಎಷ್ಟು ಅಲೆಮಾರಿಗಳ ಒಟ್ಟು ಸಂಖ್ಯೆ ಎಷ್ಟು ಇದೆ ಎನ್ನುವ ಪತ್ರಕರ್ತರ ಪ್ರಶ್ನೆಗೆ, ದಾಖಲೆಗಳಿಲ್ಲದೆ ಉತ್ತರಿಸಲು ತಡಬಡಿಸಿದ ಅವರು, ಸಭೆ ಇನ್ನು ಮುಗಿದಿಲ್ಲ. ಸಭೆಯಲ್ಲಿ ಮಾಹಿತಿ ಪಡೆದುಕೊಂಡು ತಿಳಿಸುವೆ ಎಂದರು.

ಕೆಲವು ಜಿಲ್ಲೆಗಳಲ್ಲಿ ಅಧಿಕಾರಿಗಳಿಂದ ತಪ್ಪುಗಳಾಗಿದ್ದವೆ. ಅಧಿಕಾರಿಗಳು ಅದನ್ನು ಮನಗಂಡು ಪಶ್ಚಾತಾಪವಾಗಿ ನಮ್ಮದು ತಪ್ಪಾಗಿದೆ ಎಂದು ಒಪ್ಪಿಕೊಂಡಿದ್ದಾರೆ. ಇಲ್ಲಿನ ಸಮಾಜ ಕಲ್ಯಾಣ ಉಪ ನಿರ್ದೇಶಕರು ಕೂಡ ಕಣ್ಣೀರು ಹಾಕಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದಾರೆ. ಇನ್ನು ಮುಂದಿನ ಒಂದು ವಾರದಲ್ಲಿ ಎಲ್ಲದರ ಬಗ್ಗೆ ವರದಿ ನೀಡಿ, ಪ್ರಾಮಾಣಿಕವಾಗಿ ಯೋಜನೆ ತಲುಪಿಸುವ ಕೆಲಸ ಮಾಡುತ್ತೇನೆ ಎಂದು ಉಪನಿರ್ದೇಶಕಿ ಸಿಂಧು ಅವರು ಹೇಳಿದ್ದಾರೆ. ಅದೇ ರೀತಿಯಲ್ಲಿ ಎಲ್ಲ ಜಿಲ್ಲೆಗಳಲ್ಲೂ ಅಧಿಕಾರಿಗಳು ಸ್ಪಂದಿಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.

ಈ ಸಂದರ್ಭದಲ್ಲಿ ಪಲ್ಲವಿ ಜಿ ಅವರ ಕಾರ್ಯದರ್ಶಿ ಆನಂದ್, ಅಪರ್ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ್, ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕಿ ಸಿಂಧು ರಘು ಹಚ್.ಎಸ್, ತಹಸೀಲ್ದಾರ ಟಿ.ಮೆಹತ್ ಸೇರಿದಂತೆ ಎಲ್ಲಾ ತಾಲೂಕಿನ ಸಮಾಜ ಕಲ್ಯಾಣ ಅಧಿಕಾರಿ, ಜಿಲ್ಲಾ ಅಲೆಮಾರಿ ಅನುಷ್ಠಾನ ಸಮಿತಿ ಸದಸ್ಯರು, ಅಲೆಮಾರಿ ಸಮುದಾಯದ ಮುಖಂಡರು ಸೇರಿದಂತೆ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News