ಬೀದರ್ | ವಕ್ಫ್ ತಿದ್ದುಪಡಿ ಕಾಯಿದೆಯನ್ನು ಹಿಂಪಡೆಯಲು ಒತ್ತಾಯಿಸಿ ಎಸ್ಐಒ ಪ್ರತಿಭಟನೆ

ಬೀದರ್ : ವಕ್ಫ್ ತಿದ್ದುಪಡಿ ಕಾಯಿದೆಯನ್ನು ಹಿಂತೆಗೆದುಕೊಳ್ಳುವಂತೆ ಒತ್ತಾಯಿಸಿ ಬಸವಕಲ್ಯಾಣದಲ್ಲಿ ಸ್ಪೂಡೆಂಟ್ಸ್ ಇಸ್ಲಾಮಿಕ್ ಆರ್ಗನೈಝೇಶನ್ ಆಫ್ ಇಂಡಿಯಾ (ಎಸ್ಐಒ) ಸಂಘಟನೆಯು ಪ್ರತಿಭಟನೆ ನಡೆಸಿದ್ದಾರೆ.
ಇಂದು ಬಸವಕಲ್ಯಾಣ ನಗರದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಅವರ ಮೂಲಕ ರಾಷ್ಟ್ರಪತಿ, ಸುಪ್ರೀಂ ಕೋರ್ಟ್ ಮುಖ್ಯ ನಾಯಧೀಶರು ಹಾಗೂ ಪ್ರಧಾನ ಮಂತ್ರಿಗೆ ನೀಡಿದ ಮನವಿ ಪತ್ರದಲ್ಲಿ, ವಕ್ಫ್ ತಿದ್ದುಪಡಿ ಕಾಯಿದೆಯು ವಕ್ಫ್ ಸಂಸ್ಥೆಗಳ ಸ್ವಾಯತ್ತತೆಗೆ ಧಕ್ಕೆ ತರುವಂತಹ ಅಂಶಗಳು ಒಳಗೊಂಡಿದೆ. ಹಾಗೆಯೇ ಮುಸ್ಲಿಂ ಸಮುದಾಯದ ಧಾರ್ಮಿಕ ಮತ್ತು ದತ್ತಿ ಆಸ್ತಿಗಳನ್ನು ನಿರ್ವಹಿಸುವ ಹಕ್ಕುಗಳಲ್ಲಿ ಹಸ್ತಕ್ಷೇಪ ಮಾಡುತ್ತದೆ. ಇದರಿಂದಾಗಿ ಈ ಕಾಯ್ದೆಗೆ ನಮ್ಮ ವಿರೋಧವಿದೆ ಎಂದು ತಿಳಿಸಿದ್ದಾರೆ.
ವಕ್ಫ್ ತಿದ್ದುಪಡಿ ಕಾಯಿದೆಯಲ್ಲಿ ಜಿಲ್ಲಾಧಿಕಾರಿಗಳಿಗೆ ಮಾಲಕತ್ವ ನಿರ್ಧರಿಸಲು ಅವಕಾಶ ನೀಡಲಾಗಿದೆ. ವಕ್ಫ್ ಬೋರ್ಡ್‌ಗಳಲ್ಲಿ ಮುಸ್ಲಿಮೇತರರಿಗೆ ಅನುಮತಿ ನೀಡಲಾಗುವುದು ಎನ್ನುವುದಾಗಿದೆ. ವಿವಾದಾತ್ಮಕ ಆಸ್ತಿಗಳ ತಪಾಸಣೆಯಂತೆ ನಿರ್ಧಾರ ಕೈಗೊಳ್ಳುವ ವ್ಯವಸ್ಥೆಗಳು ಇದರಲ್ಲಿದ್ದು, ಇದು ನಮ್ಮ ಸಮುದಾಯದಲ್ಲಿ ಆತಂಕ ಉಂಟುಮಾಡಿದೆ. ಹಾಗಾಗಿ ಈ ಕಾಯಿದೆ ನಮಗೆ ಸ್ವೀಕಾರಾರ್ಹವಲ್ಲ ಆಕ್ರೋಶ ವ್ಯಕ್ತಪಡಿಸಿದರು.
ಈ ಕಾಯಿದೆಯ ತಿದ್ದುಪಡಿ ಸಂಪೂರ್ಣವಾಗಿ ಸಂವಿಧಾನದ ವಿರುದ್ಧವಾಗಿದ್ದು, ವಿಶೇಷವಾಗಿ 25 ರಿಂದ 30ನೇ ವಿಧಿಯ ಅಡಿಯಲ್ಲಿ ಬರುವ ಧಾರ್ಮಿಕ, ಸಾಂಸ್ಕೃತಿಕ ಮತ್ತು ಐತಿಹಾಸಿಕ ಸಂಸ್ಥೆಯ ನಮ್ಮ ಹಕ್ಕುಗಳು ಕಸಿದುಕೊಳ್ಳಲಾಗಿದೆ. ಇಂತಹ ತಿದ್ದುಪಡಿಗಳು ಜಾರಿಗೆ ಬಂದರೆ, ಸಮುದಾಯ ಮತ್ತು ರಾಜ್ಯದ ನಡುವಿನ ನಂಬಿಕೆ ಮತ್ತು ಸೌಹಾರ್ದತೆ ಹಾಳಾಗುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ನ್ಯಾಯ, ಸಾಂವಿಧಾನಿಕ ಮೌಲ್ಯಗಳು ಮತ್ತು ಕೋಮು ಸೌಹಾರ್ದದ ಹಿತದೃಷ್ಟಿಯಿಂದ ಈ ತಿದ್ದುಪಡಿ ಸಾಂವಿಧಾನಿಕವಾಗಿ ಪರಿಶೀಲಿಸಿ, ಈ ಅಸಂವಿಧಾನಿಕ ಕಾಯಿದೆಯನ್ನು ತಕ್ಷಣವೇ ಹಿಂಪಡೆಯಬೇಕು ಎಂದು ಒತ್ತಾಯಿಸಿದ್ದಾರೆ.
ಈ ಸಂದರ್ಭದಲ್ಲಿ ಎಸ್‌ಐಒ ಸಂಘಟನೆಯ ಬಸವಕಲ್ಯಾಣ ಘಟಕದ ಅಧ್ಯಕ್ಷ ಡಾ.ಜಬಿಉಲ್ಲಾಹ್ ಖಾನ್ ವಾಸಿ, ಜಮಾತ್ ಇಸ್ಲಾಮಿ ಹಿಂದ್ ನ ಅಧ್ಯಕ್ಷ ಅಸ್ಲಾಂ ಜನಾಬ್, ಸಾಲಿಡಾರಿಟಿ ಯೂತ್ ಮೂವ್ಮೆಂಟ್ ನ ಅಧ್ಯಕ್ಷ ರಿಯಾಜ್ ಪಟೇಲ್, ಬಿಎಸ್ಪಿ ನಾಯಕ ಶಂಕರ್ ಫುಲೆ, ಗ್ರಾಮ ಕ್ರಾಂತಿ ಸೇನೆಯ ಅಧ್ಯಕ್ಷ ಸಂದೀಪ್ ಮುಕಿಂದೆ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾದ ಅಧ್ಯಕ್ಷ ಮುಜಾಹಿದ್ ಪಾಷಾ ಖುರೇಷಿ, ಮುಸ್ಲಿಂ ಬೈತುಲ್ಮಾಲ್ ನ ಮಕ್ದೂಮ್ ಮೊಹಿಯುದ್ದೀನ್, ಶೇರ್ ಸವಾರ ಬೈತುಲ್ಮಾಲ್ ನ ಸೈಯದ್ ಜಾವೀದ್ ನಿಜಾಮಿ, ಸಿಎಂಸಿ ಅಧ್ಯಕ್ಷ ಎಂ.ಡಿ ಸಗೀರುದ್ದೀನ್, ಗಫರ್ ಪೇಶ್ಮಾಮ್, ಹಫೀಜ್ ಒಮರ್, ಶಫಿಯುದ್ದೀನ್, ಹಿಸಾಮುದ್ದೀನ್ ಮುನ್ಷಿ, ಅರ್ಫತ್ ಅಹಮದ್ ಹಾಗೂ ಸೈಯದ್ ಜಾವೀದ್ ಮತೀನ್ ಸೇರಿದಂತೆ ನುರಾರು ಸಂಖ್ಯೆಯ ಜನ ಸೇರಿದ್ದರು.