ಬೀದರ್ | ತೊಗರಿ ಖರೀದಿಯ ನೋಂದಣಿ ಅವಧಿ ವಿಸ್ತರಣೆ

ಸಾಂದರ್ಭಿಕ ಚಿತ್ರ
ಬೀದರ್ : 2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಎಫ್‌ಎಕ್ಯೂ ಗುಣಮಟ್ಟದ ತೊಗರಿ ನೋಂದಣಿ ಅವಧಿಯನ್ನು ಮಾ.31 ರವರೆಗೆ ವಿಸ್ತರಿಸಿ ಸರ್ಕಾರ ಆದೇಶಿಸಿದೆ ಎಂದು ಕೃಷಿ ಮಾರಾಟ ಇಲಾಖೆಯ ಸಹಾಯಕ ನಿರ್ದೇಶಕರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ತೊಗರಿ ಖರೀದಿಗಾಗಿ ಒಟ್ಟು 112 ಕೇಂದ್ರಗಳು ತೆರೆಯಲಾಗಿದ್ದು, ಖರೀದಿ ಪ್ರಕ್ರಿಯೆ ಪ್ರಗತಿಯಲ್ಲಿದೆ. ಈಗಾಗಲೆ ತೊಗರಿ ಖರೀದಿಗಾಗಿ ನೋಂದಣಿ ಕಾಲಾವಧಿಯು ಮಾ.17 ರಂದು ಕೊನೆಗೊಳ್ಳುತ್ತಿತ್ತು. ಆದರೆ ತೊಗರಿ ನೋಂದಣಿ ತಂತ್ರಾಂಶದಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿದ್ದರಿಂದ ಹಲವು ರೈತರು ಇನ್ನೂ ನೋಂದಣಿ ಮಾಡಿಕೊಂಡಿರಲಿಲ್ಲ. ಈ ಸಮಸ್ಯೆಯನ್ನು ಪ್ರಸ್ತಾಪಿಸಿ ಜಿಲ್ಲಾ ಟಾಸ್ಕೊಫೊರ್ಸ್ ಸಮಿತಿ ಮಾ.15 ರಂದು ರಾಜ್ಯ ಸರ್ಕಾರಕ್ಕೆ ನೋಂದಣಿ ಅವಧಿ ವಿಸ್ತರಿಸಲು ಪ್ರಸ್ತಾವನೆ ಸಲ್ಲಿಸಿತ್ತು. ಇದರಿಂದಾಗಿ ನೋಂದಣಿ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬೆಂಬಲ ಬೆಲೆ ಯೋಜನೆಯಡಿ ಪ್ರತಿ ಕ್ವಿಂಟಾಲ್ ತೊಗರಿಗೆ 7,550 ರೂ. ದರದಲ್ಲಿ ಕೇಂದ್ರ ಸರ್ಕಾರ ಖರೀದಿಸುತ್ತಿದ್ದು, ಇದರ ಜೊತೆಗೆ ರಾಜ್ಯ ಸರ್ಕಾರವು ಪ್ರತಿ ಕ್ವಿಂಟಾಲ್ ಗೆ 450 ರೂ. ಪ್ರೋತ್ಸಾಹ ಧನ ಘೋಷಿಸಿದೆ. ಆದ್ದರಿಂದ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಮಾರಾಟ ಮಾಡಲು ಇಚ್ಛಿಸುವ ರೈತರು ಮಾ. 31ರ ಒಳಗಾಗಿ ತಮ್ಮ ಹೆಸರು ನೋಂದಾಯಿಸಿಕೊಂಡು ಸದರಿ ಯೋಜನೆಯ ಸದುಪಯೋಗ ಪಡೆದುಕೊಳ್ಳಬೇಕು ಎಂದು ಅವರು ತಿಳಿಸಿದ್ದಾರೆ.