ಬೀದರ್ | ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಕೂಲಿ ಕೆಲಸ ಭರದಿಂದ ಸಾಗಿದೆ : ಡಾ.ಗಿರೀಶ್ ಬದೋಲೆ

ಬೀದರ್ : ಗ್ರಾಮೀಣ ಬಡ ಕುಟುಂಬಗಳಿಗೆ ವರದಾನದಂತಿರುವ ಮಹಾತ್ಮಗಾಂಧಿ ನರೇಗಾ ಯೋಜನೆಯಡಿ ಜಿಲ್ಲೆಯಲ್ಲಿ ಕೂಲಿಕಾರರಿಗೆ ಕೆಲಸ ನೀಡಲಾಗುತ್ತಿದ್ದು, ಜಿಲ್ಲಾದ್ಯಂತ ಕೂಲಿ ಕೆಲಸ ಭರದಿಂದ ಸಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ ಅವರು ತಿಳಿಸಿದ್ದಾರೆ.
ಎಪ್ರಿಲ್ ಮೊದಲ ವಾರದಲ್ಲಿ 2025 ನೇ ಸಾಲಿನ ಮನರೇಗಾ ಯೋಜನೆಯಡಿ ಅನುಮೋದಿಸಲ್ಪಟ್ಟ ಕ್ರಿಯಾಯೋಜನೆಗಳ ಕಾಮಗಾರಿಗಳನ್ನು ಪ್ರಾರಂಭಿಸಿದ್ದು, ಎ.19 ರಂದು ಜಿಲ್ಲೆಯ 185 ಗ್ರಾಮ ಪಂಚಾಯತಿಗಳಲ್ಲಿ 143 ಗ್ರಾಮ ಪಂಚಾಯತಿಗಳಲ್ಲಿ ಕೂಲಿ ಕೆಲಸ ಪ್ರಾರಂಭವಾಗಿದೆ. 24,247 ಜನ ಕೂಲಿಕಾರರು ಕೆಲಸ ಮಾಡುತ್ತಿದ್ದಾರೆ. ಈ ತಿಂಗಳ ಅಂತ್ಯಕ್ಕೆ 50 ಸಾವಿರ ಜನ ಕೂಲಿಕಾರರಿಗೆ ಕೆಲಸ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಮೇ ತಿಂಗಳಲ್ಲಿ ಒಂದು ಲಕ್ಷ ಜನ ಕೂಲಿಕಾರರಿಗೆ ಕೆಲಸ ನೀಡಲಾಗುವುದು. ಮನರೇಗಾ ಯೋಜನೆಯಡಿ ಕೆಲಸ ನೀಡುವುದರಿಂದ ಗ್ರಾಮೀಣ ಪ್ರದೇಶದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು, ಅತಿ ಸಣ್ಣ ರೈತ ಮತ್ತು ಮಹಿಳೆಯರ ಬದುಕಿನ ಬವಣೆ ನೀಗಲು ಸಹಕಾರಿಯಾಗುತ್ತದೆ ಎಂದರು.
ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಮೀಣ ಪ್ರದೇಶದ ಜನತೆ ಉದ್ಯೋಗಕ್ಕಾಗಿ ನಗರಪ್ರದೇಶಗಳಿಗೆ ವಲಸೆ ಹೋಗದೆ ಅವರ ಸ್ವಂತ ಗ್ರಾಮಗಳಲ್ಲೇ ಉದ್ಯೋಗ ಖಾತ್ರಿ ಯೋಜನೆಯಡಿ ಹೆಸರು ನೊಂದಾಯಿಸಿಕೊಂಡು ಕೆಲಸ ಮಾಡಲು ಅವರು ಮನವಿ ಮಾಡಿದ್ದಾರೆ.
ಉದ್ಯೋಗ ಖಾತ್ರಿ ಯೋಜನೆಯಡಿ ಗಂಡು ಹೆಣ್ಣು ಎನ್ನುವ ಭೇದವಿಲ್ಲದೆ ಸಮಾನ ಕೂಲಿ ನೀಡುವುದಲ್ಲದೆ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಕೂಲಿಯ ದರವೂ ಹೆಚ್ಚಿಗೆ ಆಗಿದ್ದು, ಕೂಲಿಕಾರರಿಗೆ ಪ್ರತಿದಿನ 370 ರೂ. ಗಳ ಕೂಲಿ ಸಿಗುತ್ತಿದೆ. ಗ್ರಾಮೀಣ ಪ್ರದೇಶದ ದುಡಿಯುವ ವರ್ಗದ ಜನತೆ ಈ ಯೋಜನೆಯ ಪ್ರಯೋಜನ ಪಡೆಯುವಂತೆ ಅವರು ಮನವಿ ಮಾಡಿದ್ದಾರೆ.