ಬೀದರ್ | ಎ.26 ರಿಂದ ಜಾನುವಾರುಗಳಿಗೆ ಕಾಲು ಬಾಯಿ ಜ್ವರದ ಲಸಿಕಾ ಕಾರ್ಯಕ್ರಮ : ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ

ಬೀದರ್ : ಜಿಲ್ಲಾದ್ಯಂತ ಎ.26 ರಿಂದ ಜೂನ್.4 ರವರೆಗೆ ಜಾನುವಾರುಗಳಿಗೆ ಕಾಲು ಬಾಯಿ ಜ್ವರದ ಲಸಿಕಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇದಕ್ಕೆ ಎಲ್ಲಾ ರೀತಿಯ ತಯಾರಿ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರು ಸೂಚನೆ ನೀಡಿದರು.
ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಕೇಂದ್ರ ಪುರಸ್ಕೃತ NADCP-FMD-CP 7ನೇ ಸುತ್ತಿನ ಜಾನುವಾರುಗಳಿಗೆ ಸಾಮೂಹಿಕ ಲಸಿಕಾ ಕಾರ್ಯಕ್ರಮ ಅನುಷ್ಠಾನದ ಜಿಲ್ಲಾ ಮಟ್ಟದ ಪರಿಶೀಲನಾ ಮತ್ತು ನಿರ್ವಹಣೆ ಸಮಿತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿ ಪಿಡಿಓ ಮೂಲಕ ಹಾಗೂ ನಗರಗಳಲ್ಲಿ ಆಡಿಯೋ ಕ್ಲಿಪ್ ಮೂಲಕ ಲಸಿಕೆ ಬಗ್ಗೆ ಪ್ರಚಾರ ನೀಡಬೇಕು. ಅದೇ ರೀತಿಯಾಗಿ ಪಶು ಸಖಿಯರು, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆಶಾ ಕಾರ್ಯಕರ್ತೆಯರು ಲಸಿಕೆ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಶು ಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆಯ ಉಪನಿರ್ದೇಶಕ ನರಸಪ್ಪ ಎ.ಡಿ., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಶ್ರೀಧರ್ ಎಮ್.ಎಚ್, ಜಿಲ್ಲೆಯ ಎಲ್ಲಾ ತಾಲೂಕಿನ ಮುಖ್ಯ ಪಶು ವೈದ್ಯಾಧಿಕಾರಿಗಳು ಸೇರಿದಂತೆ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು