ಬೀದರ್ | ಯತ್ನಾಳ್ ಉಚ್ಚಾಟನೆ ಪ್ರಶ್ನೆ ಇಲ್ಲ: ಶ್ರೀರಾಮುಲು
ಬೀದರ್ : ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ನಾಯಕತ್ವವನ್ನು ಎಲ್ಲರೂ ಒಪ್ಪಬೇಕು ಎಂದು ಮಾಜಿ ಸಚಿವ ಶ್ರೀರಾಮುಲು ಅವರು ಹೇಳಿದ್ದಾರೆ.
ನಗರದ ಗಾಂಧಿ ಗಂಜ್‍ನಲ್ಲಿ 'ನಮ್ಮ ಭೂಮಿ ನಮ್ಮ ಹಕ್ಕು' ವಕ್ಫ್ ವಿರುದ್ಧದ ಜನಾಂದೋಲನ ಸಮಾವೇಶಕ್ಕೆ ಬುಧವಾರ ಚಾಲನೆ ನೀಡಿ ಪಾದಯಾತ್ರೆಯಲ್ಲಿ ರೈತರೊಂದಿಗೆ ಹೆಜ್ಜೆ ಹಾಕಿ ಮಾತನಾಡಿದ ಅವರು, ವಿಜಯೇಂದ್ರ ಅವರನ್ನು ಕೆಳಗಿಳಿಸಲು ಆಗುವುದಿಲ್ಲ. ಒಂದು ಬಾರಿ ಅಧ್ಯಕ್ಷರಾದರೆ ಎಲ್ಲರೂ ಒಪ್ಪಿಕೊಳ್ಳಬೇಕು ಎಂದು ಪರೋಕ್ಷವಾಗಿ ಬಸನಗೌಡ ಪಾಟೀಲ್ ಯತ್ನಾಳ್ ಅವರಿಗೆ ತಿರುಗೇಟು ನೀಡಿದರು.
ಬಿಜೆಪಿಯಲ್ಲಿ ಈಗ ಎರಡು ಬಣಗಳು ಇರಬಹುದು. ಆದರೆ ಎಲ್ಲ ಭಿನ್ನಮತವನ್ನು ವರಿಷ್ಠರು ಸರಿಪಡಿಸುತ್ತಾರೆ. ಯತ್ನಾಳ್ ಮೇಲೆ ಯಾವುದೇ ಶಿಸ್ತು ಕ್ರಮವಾಗಲ್ಲ. ಯಾಕೆಂದರೆ ಅವರು ವೈಯಕ್ತಿಕ ಹೋರಾಟ ಮಾಡುತ್ತಿಲ್ಲ. ಹೀಗಾಗಿ ಯತ್ನಾಳ್ ಉಚ್ಚಾಟನೆ ಪ್ರಶ್ನೆ ಇಲ್ಲ ಎಂದು ಅವರು ಹೇಳಿದರು.
ದೆಲ್ಲಿಗೆ ತೆರಳಿದ ಆರ್.ಅಶೋಕ್ ಅವರ ಕುರಿತು ಮಾತನಾಡಿದ ಶ್ರೀರಾಮುಲು ಅವರು, ಅಶೋಕ್ ಸೇರಿದಂತೆ ಎಲ್ಲರನ್ನು ಕರೆದು ಭಿನ್ನಮತದ ಬಗ್ಗೆ ವರಿಷ್ಠರು ಮಾಹಿತಿ ಪಡೆಯುತ್ತಿದ್ದಾರೆ. ಎರಡು ಬಣಗಳಾಗಿದ್ದರೂ ನಮ್ಮ ಹೋರಾಟ ಒಂದಾಗಿದೆ. ಶಿಸ್ತು ಸಮಿತಿ ಮುಂದೆ ಯತ್ನಾಳ್ ಎಲ್ಲ ಸ್ಪಷ್ಟನೆ ನೀಡುತ್ತಾರೆ. ಮುಂದೆ ಎಲ್ಲ ಬಣಗಳು ಒಂದಾಗುತ್ತವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.