ಅಮಿತ್ ಶಾ ರಾಜೀನಾಮೆಗೆ ಒತ್ತಾಯಿಸಿ ಜ. 9 ರಂದು ಬೀದರ್ ಬಂದ್ ಗೆ ಕರೆ
ಬೀದರ್: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ರಾಜೀನಾಮೆಗೆ ಒತ್ತಾಯಿಸಿ ಸ್ವಾಭಿಮಾನಿ ಡಾ.ಬಿ.ಆರ್. ಅಂಬೇಡ್ಕರ್ ವಾದಿಗಳ ಹೋರಾಟ ಸಮಿತಿ ವತಿಯಿಂದ ಜ. 9 ರಂದು ಬೀದರ್ ಬಂದ್ ಗೆ ಕರೆ ನೀಡಲಾಗಿದೆ.
ಇಂದು ನಗರದ ಪ್ರವಾಸಿ ಮಂದಿರದಲ್ಲಿ ಸಭೆ ನಡೆಸಿದ ಬಳಿಕ ಡಾ.ಬಿ.ಆರ್. ಅಂಬೇಡ್ಕರ್ ವಾದಿಗಳ ಹೋರಾಟ ಸಮಿತಿಯ ಅಧ್ಯಕ್ಷ ಉಮೇಶ್ ಸ್ವಾರಳ್ಳಿಕರ್ ಮಾಧ್ಯಮದವರೊಂದಿಗೆ ಮಾತನಾಡಿ, ಡಿ. 24 ರಂದು ಅಮಿತ್ ಶಾ ವಿರುದ್ಧ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ಕ್ಷಮೆಯಾಚಿಸಿ, ರಾಜೀನಾಮೆ ನೀಡಲು ಒತ್ತಾಯಿಸಲಾಗಿತ್ತು. ಅಮಿತ್ ಶಾ ಅವರು ಕ್ಷಮೆಯಾಚಿಸಿ ರಾಜೀನಾಮೆ ನೀಡದಿದ್ದರೆ ಬೀದರ್ ಬಂದ್ ಗೆ ಕರೆ ನೀಡುವುದಾಗಿ ಗಡುವು ನೀಡಲಾಗಿತ್ತು. ಅಷ್ಟಾದರೂ ಇಲ್ಲಿವರೆಗೆ ಅಮಿತ್ ಶಾ ಅವರು ಕ್ಷಮೆ ಕೇಳಲಿಲ್ಲ, ರಾಜೀನಾಮೆಯೂ ನೀಡಲಿಲ್ಲ. ಇದರಿಂದಾಗಿ ಇಂದು ಸಭೆ ಸೇರಿ ಸರ್ವಾನುಮತದಿಂದ ಜ.9 ರಂದು ಬೀದರ್ ಬಂದ್ ಮಾಡಲು ತೀರ್ಮಾನಿಸಿದ್ದೇವೆ ಎಂದು ತಿಳಿಸಿದರು.
ಈ ಬೀದರ್ ಬಂದ್ ಹೋರಾಟಕ್ಕೆ ಜಿಲ್ಲೆಯ ಸಮಸ್ತ ಸ್ವಾಭಿಮಾನಿ ಡಾ.ಬಿ.ಆರ್.ಅಂಬೇಡ್ಕರ್ ವಾದಿಗಳು, ಪ್ರಗತಿಪರರು, ಹೋರಾಟಗಾರರು, ಕನ್ನಡಪರ ಸಂಘಟನೆಗಳು, ದಲಿತಪರ ಹೋರಾಟಗಾರರು, ಸರ್ವಧರ್ಮ ಗುರುಗಳು, ವಿವಿಧ ಕ್ಷೇತ್ರದ ವ್ಯಾಪಾರಸ್ಥರು, ಆಟೋ ಚಾಲಕರು, ಸಾಹಿತಿಗಳು, ಚಿಂತಕರು, ಕಾರ್ಮಿಕರು,ಯುವಕ ಯುವತಿಯರು ಹಾಗೂ ವಿದ್ಯಾರ್ಥಿ, ವಿಧ್ಯಾರ್ಥಿನಿಯರು ಬೀದರ್ ಬಂದ್ ಗೆ ಬೆಂಬಲ ನೀಡಬೇಕೆಂದು ಪತ್ರಿಕಾ ಪ್ರಕಟಣೆ ಮೂಲಕ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಗೌರವಾಧ್ಯಕ್ಷರಾದ ರಾಜಕುಮಾರ ಮೂಲಭಾರತಿ, ಕಲ್ಯಾಣರಾವ ಭೋಸ್ಲೆ, ಚಂದ್ರಕಾಂತ್ ನಿರಾಟೆ, ಕಾರ್ಯಾಧ್ಯಕ್ಷ ವಿಷ್ಣುವರ್ಧನ್ ವಾಲ್ದೋಡ್ಡಿ, ಪ್ರಧಾನ ಕಾರ್ಯದರ್ಶಿ ಮಹೇಶ ಗೋರನಾಳಕರ್ ಹಾಗೂ ಅಭಿ ಕಾಳೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.