ಡಾ.ಚನ್ನಬಸವ ಪಟ್ಟದ್ದೇವರು ಮನುಕುಲದ ಕಲ್ಯಾಣಕ್ಕೆ ಶ್ರಮಿಸಿರುವುದು ಶ್ಲಾಘನೀಯ ಕಾರ್ಯ : ರಾಜ್ಯಪಾಲ ಗೆಹ್ಲೋಟ್

ಬೀದರ್ : 12ನೇ ಶತಮಾನದಲ್ಲಿ ಬಸವಾದಿ ಶರಣರು ನಡೆದಾಡಿದ ಕಲ್ಯಾಣದ ನೆಲದಲ್ಲಿ ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರು ಮನುಕುಲದ ಕಲ್ಯಾಣಕ್ಕೆ ಶ್ರಮಿಸಿರುವುದು ಶ್ಲಾಘನೀಯ ಕಾರ್ಯ ಎಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಹೇಳಿದರು.
ಇಂದು ಪಟ್ಟಣದ ಚನ್ನಬಸವ ಆಶ್ರಮದ ಆವರಣದಲ್ಲಿ ಹಿರೇಮಠ ಸಂಸ್ಥಾನದ ವತಿಯಿಂದ ಆಯೋಜಿಸಿದ್ದ ವಚನ ಜಾತ್ರೆ ಮತ್ತು ಡಾ.ಚನ್ನಬಸವ ಪಟ್ಟದ್ದೇವರ 26ನೇ ಸ್ಮರಣೋತ್ಸವ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಧಾರ್ಮಿಕ, ಅಧ್ಯಾತ್ಮಿಕ, ಸಾಮಾಜಿಕ, ಶೈಕ್ಷಣಿಕ ಸೇವೆ ಮೂಲಕ ಪೂಜ್ಯರು ಸಶಕ್ತ ಆತ್ಮನಿರ್ಭರ ಸಮಾಜ ನಿರ್ಮಾಣಕ್ಕೆ ಶ್ರಮಿಸಿದರ ಬಗ್ಗೆ ತಿಳಿದುಕೊಂಡಿದ್ದೇನೆ. ಜತೆಗೆ ಗಡಿ ಭಾಗವನ್ನು ಕನ್ನಡ ನೆಲದಲ್ಲಿ ಉಳಿಸಲು ದಿಟ್ಟತನ ಪ್ರದರ್ಶಿಸಿರುವುದು ನನಗೆ ಮಾದರಿ ಎನಿಸಿದೆ. ಬಸವಾದಿ ಶರಣರು ವಚನ ಸಾಹಿತ್ಯದ ಮೂಲಕ ಸಮಾಜಕ್ಕೆ ಅದ್ಭುತ ಕೊಡುಗೆ ನೀಡಿದ್ದಾರೆ ಎಂದು ಅವರು ತಿಳಿಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಗಡಿಭಾಗದಲ್ಲಿ ಡಾ.ಚನ್ನಬಸವ ಪಟ್ಟದ್ದೇವರು, ಜನರಲ್ಲಿ ಬೇರೂರಿದ್ದ ಅಂಧಕಾರ, ಅಂಧಶೃದ್ಧೆ, ಮೌಢ್ಯತೆ ಹೋಗಲಾಡಿಸಲು ಶ್ರಮಿಸಿದ್ದರು. ಶೈಕ್ಷಣಿಕ, ಧಾರ್ಮಿಕ, ಸಾಮಾಜಿಕ ಸೇವೆ ಮೂಲಕ ಈ ಭಾಗದ ಬೆಳವಣಿಗೆಗೆ ನಾಂದಿ ಹಾಡಿದ್ದಾರೆ. ಅವರ ವಿಚಾರಧಾರೆಗಳನ್ನು ಎಲ್ಲರೂ ಅನುಸರಿಸಬೇಕು ಎಂದು ತಿಳಿಸಿದರು.
ಬಸವಕಲ್ಯಾಣ ಅನುಭವ ಮಂಟಪ ಟ್ರಸ್ಟ್ ನ ಅಧ್ಯಕ್ಷ ಡಾ.ಬಸವಲಿಂಗ ಪಟ್ಟದ್ದೇವರು ಮಾತನಾಡಿ, 12ನೇ ಶತಮಾನದಲ್ಲಿ ಬಸವಾದಿ ಶರಣರು ಸಮಾನತೆ ಸಾರಿದರು. ಅದೇ ಪರಂಪರೆಯನ್ನು ಶತಾಯಷಿ ಡಾ.ಚನ್ನಬಸವ ಪಟ್ಟದ್ದೇವರು ತಮ್ಮ ಬದುಕಿನುದ್ದಕ್ಕೂ ಅನುಸರಿಸಿ ನಮ್ಮೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ ಎಂದು ನುಡಿದರು.
ಈ ಸಂದರ್ಭದಲ್ಲಿ ಪೀಠಾಧಿಪತಿ ಗುರುಬಸವ ಪಟ್ಟದ್ದೇವರು, ಸಂಸದ ಸಾಗರ್ ಖಂಡ್ರೆ, ಮಾಜಿ ಸಚಿವ ರಾಜಶೇಖರ್ ಪಾಟೀಲ್, ಮಾಜಿ ಶಾಸಕ ಪ್ರಕಾಶ್ ಖಂಡ್ರೆ, ಡಿ.ಕೆ.ಸಿದ್ರಾಮ್, ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ್ ಬದೋಲೆ, ಜಿಲ್ಲಾ ಪೊಲೀಸ್ ವರೀಷ್ಠಾಧಿಕಾರಿ ಪ್ರದೀಪ್ ಗುಂಟಿ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯ ಶಶಿಧರ್ ಕೋಸಂಬೆ, ಹಾಸ್ಯ ಕಲಾವಿದ ನವಲಿಂಗ್ ಪಾಟೀಲ್ ಹಾಗೂ ಡಾ.ಅಮಿತ ಅಷ್ಟೂರೆ ಸೇರಿದಂತೆ ಅನೇಕರು ಭಾಗವಹಿಸಿದ್ದರು.