ಸಾರ್ವಜನಿಕರು ಮಲೇರಿಯಾ ರೋಗವನ್ನು ನಿಯಂತ್ರಿಸಲು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ : ಡಾ.ಧ್ಯಾನೇಶ್ವರ ನಿರಗುಡೆ

ಬೀದರ್ : ಜಿಲ್ಲೆಯಲ್ಲಿ ಅಲಲ್ಲಿ ಮಳೆಯಾಗುತ್ತಿರುವುದರಿಂದ ನಿಂತ ನೀರಿನಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿರುತ್ತದೆ. ನಾಗರೀಕರು ಮಲೇರಿಯ ರೋಗವನ್ನು ನಿಯಂತ್ರಿಸಲು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಧ್ಯಾನೇಶ್ವರ್ ನಿರಗುಡೆ ಅವರು ಮನವಿ ಮಾಡಿದರು.
ಇಂದು ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಶಾಲಾ, ಕಾಲೇಜು ವಿದ್ಯಾರ್ಥಿಗಳಿಂದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಚೇರಿ ಆವರಣದಲ್ಲಿ ಹಮ್ಮಿಕೊಂಡಿದ್ದ ಬೃಹತ್ ಜನಜಾಗೃತಿ ರ‍್ಯಾಲಿಗೆ ಬಾವೂಟ ತೋರಿಸುವುದರ ಮೂಲಕ ಚಾಲನೆ ನೀಡಿ ಅವರು ಮಾತನಾಡಿದರು.
ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆ, ಸೊಳ್ಳೆ ಕಡಿತದಿಂದ ರಕ್ಷಣೆ ಹಾಗೂ ಸೊಳ್ಳೆ ನಿಯಂತ್ರಣ ವಿಧಾನಗಳು ಅಳವಡಿಸಿಕೊಂಡು ಮಲೇರಿಯಾ ಸೇರಿದಂತೆ ಸೊಳ್ಳೆಗಳಿಂದ ಹರಡುವ ರೋಗಗಳನ್ನು ತಡೆಗಟ್ಟಲು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಜಿಲ್ಲೆಯಲ್ಲಿ ಮಲೇರಿಯಾ ರೋಗವು ಇಳಿಮುಖವಾಗಿದ್ದು, ಕಳೆದ 2024ನೇ ಸಾಲಿನಲ್ಲಿ ಕೇವಲ 4 ಮಲೇರಿಯಾ ಪ್ರಕರಣಗಳು ಪತ್ತೆಯಾಗಿದ್ದವು. ಅವು ಕೂಡ ಹೊರ ರಾಜ್ಯಗಳಿಂದ 4 ಜನ ವಲಸಿಗರಿಗೆ ಮಲೇರಿಯಾ ಧೃಡಪಟ್ಟಿದ್ದು, ಎಲ್ಲಾ ಮಲೇರಿಯಾ ಪ್ರಕರಣಗಳಿಗೆ ತೀವ್ರ ಚಿಕಿತ್ಸೆ ನೀಡುವುದರ ಮೂಲಕ ಗುಣಪಡಿಸಲಾಗಿದೆ ಎಂದರು.
ಜಿಲ್ಲೆಯಲ್ಲಿ ಮಲೇರಿಯಾದಿಂದ ಇಲ್ಲಿಯವರೆಗೆ ಯಾವುದೇ ತರಹದ ಸಾವು ಸಂಭವಿಸಲಿಲ್ಲ. ಸಾರ್ವಜನಿಕರು ತಮ್ಮ ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿಕೊಂಡು ಸೊಳ್ಳೆ ಉತ್ಪತ್ತಿ ತಾಣಗಳನ್ನು ನಿರ್ಮೂಲನೆ ಮಾಡಿದಲ್ಲಿ ಸೊಳ್ಳೆಗಳ ಬೆಳವಣಿಗೆ ನಿಯಂತ್ರಿಸಿ ಮಲೇರಿಯಾ ಹಾಗೂ ಇತರ ಸೊಳ್ಳೆ ಜನಿತ ರೋಗಗಳನ್ನು ನಿಯಂತ್ರಿಸಬಹುದಾಗಿದೆ ಎಂದು ಅವರು ಸಲಹೆ ನೀಡಿದರು.
ಮಲೇರಿಯಾ ಅಧಿಕಾರಿ ಡಾ.ರಾಜಶೇಖರ್ ಪಾಟೀಲ್ ಅವರು ಮಾತನಾಡಿ, ಜಿಲ್ಲಾದ್ಯಂತ ತಾಲ್ಲೂಕು ಮಟ್ಟದಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಉಪಕೇಂದ್ರ ಹಾಗೂ ಗ್ರಾಮ ಪಂಚಾಯತ್, ಶಾಲಾ ಕಾಲೇಜುಗಳುಗಳಲ್ಲಿ ಮರು ಹೂಡಿಕೆ ಮಾಡಿ, ಮರು ಚಿಂತಿಸಿ, ಮರು ಚೇತನಗೊಳಿಸಿ ಎಂಬ ಘೋಷಣೆಯೊಂದಿಗೆ ವಿಶ್ವ ಮಲೇರಿಯಾ ದಿನ ಜನಜಾಗೃತಿಗಾಗಿ ಜಾಥಾ ಮತ್ತು ಸಭೆಯ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ ಎಂದು ಹೇಳಿದರು.
ಜನ ಜಾಗೃತಿ ರ‍್ಯಾಲಿಯು ನಗರದ ಅಂಬೇಡ್ಕರ್ ವೃತ್ತ, ಜಿಲ್ಲಾಧಿಕಾರಿ ಕಚೇರಿ, ಹಳೆ ಬಸ್ ನಿಲ್ದಾಣ ಮಾರ್ಗದ ಮೂಲಕ ಜಿಲ್ಲಾ ಆರೋಗ್ಯ ತರಬೇತಿ ಕೇಂದ್ರ ಆವರಣಕ್ಕೆ ಬಂದು ಕೊನೆಗೊಂಡಿತು.
ಈ ಸಂದರ್ಭದಲ್ಲಿ ಜಿಲ್ಲಾ ಮಟ್ಟದ ಕಾರ್ಯಕ್ರಮ ಅನುಷ್ಠಾನ ಅಧಿಕಾರಿಗಳಾದ ಡಾ.ರಾಜಶೇಖರ್ ಪಾಟೀಲ್, ಡಾ.ಕಿರಣ ಪಾಟೀಲ್, ಡಾ.ಅನೀಲಕುಮಾರ್ ಚಿಂತಾಮಣಿ, ಡಾ.ದಿಲೀಪ್ ಡೊಂಗ್ರೆ, ಡಾ.ಸಂಗಾರೆಡ್ಡಿ ಕೆ., ತಾಲ್ಲೂಕು ಆರೋಗ್ಯಾಧಿಕಾರಿಗಳು, ಸರ್ಕಾರಿ ನರ್ಸಿಂಗ್ ಕಾಲೇಜಿನ ವಿದ್ಯಾರ್ಥಿ ಹಾಗೂ ಸಿಬ್ಬಂದಿಗಳಾದ ಮೌನದಾಸ್, ಸಂಗಪ್ಪಾ ಕಾಂಬ್ಳೆ, ಅನೀತಾ, ಸತೀಷಕುಮಾರ್ ಪಾಂಡೆ, ವೀರಶಟ್ಟಿ ಸಿ, ಎಂ.ಅಬೂಬಕರ್, ಬಾಬು ಪ್ರೀಯಾ, ಹಾದಿ ತಬ್ರೇಜ್, ದೇವಿದಾಸ್, ಮುಹಮ್ಮದ್ ರಫೀಯುದ್ದಿನ್, ಗೋರಖನಾಥ್, ಜಾವೇದ್ ಕಲ್ಯಾಣಕರ್ ಹಾಗೂ ಬಸವರಾಜ್ ಸೇರಿದಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮತ್ತು ಜಿಲ್ಲಾ ಮಲೇರಿಯಾ ಕಚೇರಿ ಸಿಬ್ಬಂದಿಗಳು ಉಪಸ್ಥಿತರಿದ್ದರು.