ಬೀದರ್: ಪಿಯು ಪರೀಕ್ಷೆಯಲ್ಲಿ ಶಾಹೀನ್ ಕಾಲೇಜಿಗೆ ಶೇ.91.25 ಫಲಿತಾಂಶ

ಬೀದರ್: ಪ್ರಸಕ್ತ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ನಗರದ ಶಾಹೀನ್ ಪದವಿಪೂರ್ವ ವಿಜ್ಞಾನ ಹಾಗೂ ಕಲಾ ಕಾಲೇಜು ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ತೋರಿದ್ದು, ಕಾಲೇಜಿಗೆ ಒಟ್ಟು ಶೇ.91.25 ಫಲಿತಾಂಶ ಬಂದಿದೆ. ಇದರಲ್ಲಿ ಒಟ್ಟು 154 ವಿದ್ಯಾರ್ಥಿಗಳು ಅಗ್ರಶ್ರೇಣಿಯಲ್ಲಿ ಪಾಸಾಗಿದ್ದಾರೆ.
ವಿಜ್ಞಾನ ವಿಭಾಗದಲ್ಲಿ ಅರ್ಚನಾ ಶೇ. 96.83 ರಷ್ಟು ಅಂಕ ಗಳಿಸಿ ಕಾಲೇಜಿಗೆ ಟಾಪರ್ ಆಗಿ ಹೊರ ಹೊಮ್ಮಿದ್ದಾರೆ. ಫರಾಹಾ ಶೇ. 96, ಖುಷಿ ಮಲ್ಲಿಕಾರ್ಜುನ್ ಹೂಗಾರ್ ಶೇ. 95.50, ಸೃಷ್ಟಿ ಶೇ.95.17 ರಷ್ಟು ಅಂಕ ಪಡೆದು ಗಮನ ಸೆಳೆದಿದ್ದಾರೆ.
ಕಲಾ ವಿಭಾಗದಲ್ಲಿ ಶಿಫಾ ಶೇ. 92.66 ರಷ್ಟು ಅಂಕ ಪಡೆದು ಕಾಲೇಜಿಗೆ ಮೊದಲಿಗರಾಗಿದ್ದಾರೆ. ಭಾಗ್ಯಶ್ರೀ ಶೇ.90.16 ರಷ್ಟು ಅಂಕ ಗಳಿಸಿದ್ದು, ಇವರು ಇತಿಹಾಸದಲ್ಲಿ 100 ಕ್ಕೆ 100 ಅಂಕ ಗಳಿಸಿ ಸಾಧನೆ ಮೆರೆದಿದ್ದಾರೆ.
ಕಾಲೇಜಿಗೆ ಶೇ 91.25 ರಷ್ಟು ಫಲಿತಾಂಶ ಲಭಿಸಿದೆ. 154 ವಿದ್ಯಾರ್ಥಿಗಳು ಅಗ್ರಶ್ರೇಣಿ, 846 ಪ್ರಥಮ ದರ್ಜೆ ಹಾಗೂ 65 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ.
ಪ್ರತಿ ವರ್ಷದಂತೆ ಈ ವರ್ಷವೂ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಮೋಘ ಸಾಧನೆ ಮಾಡಿದ್ದಾರೆ ಎಂದು ಶಾಹೀನ್ ಶಿಕ್ಷಣ ಸಂಸ್ಥೆಗಳ ಸಮೂಹದ ಅಧ್ಯಕ್ಷ ಡಾ. ಅಬ್ದುಲ್ ಖದೀರ್ ಹರ್ಷ ವ್ಯಕ್ತಪಡಿಸಿದ್ದು, ಗುಣಮಟ್ಟದ ಸ್ಪರ್ಧಾತ್ಮಕ ಶಿಕ್ಷಣ, ಉತ್ತಮ ಶೈಕ್ಷಣಿಕ ವಾತಾವರಣ, ಆಡಳಿತ ಮಂಡಳಿ ಮಾರ್ಗದರ್ಶನ, ಉಪನ್ಯಾಸಕರು, ವಿದ್ಯಾರ್ಥಿಗಳ ಶ್ರಮ ಹಾಗೂ ಪಾಲಕರ ಸಹಕಾರದಿಂದಾಗಿ ಕಾಲೇಜು ಪರೀಕ್ಷೆಯಲ್ಲಿ ಸಾಧನೆಗೈಯ್ಯಲು ಸಾಧ್ಯವಾಗಿದೆ ಎಂದು ಅವರು ಹೇಳಿದ್ದಾರೆ.