ಬೀದರ್ ನ ಹಲವೆಡೆ ಗುಡುಗು ಸಹಿತ ಆಲಿಕಲ್ಲು ಮಳೆ
Update: 2025-04-29 16:37 IST

ಬೀದರ್ : ನಗರದ ನೌಬಾದ್ ಸೇರಿದಂತೆ ಜಿಲ್ಲೆಯ ಹಲವೆಡೆ ಗುಡುಗು, ಗಾಳಿ ಸಹಿತ ಆಲಿಕಲ್ಲು ಮಳೆಯಾಗಿದೆ.
ಭಾಲ್ಕಿ ತಾಲ್ಲೂಕಿನ ಮದಕಟ್ಟಿ, ದಾಡಗಿ ಗ್ರಾಮಗಳಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದ್ದು, ಔರಾದ್ ನ ಜೋಜನಾ ಸೇರಿದಂತೆ ಹಲವು ಗ್ರಾಮಗಳಲ್ಲಿ ಜೋರಾದ ಮಳೆಯಾಗಿದೆ.
ಭಾಲ್ಕಿ ತಾಲ್ಲೂಕಿನ ದಾಡಗಿ ಕ್ರಾಸ್ ಹತ್ತಿರ ರಸ್ತೆ ಕಾಮಗಾರಿ ಚಾಲನೆಯಲ್ಲಿದ್ದು, ವಾಹನಗಳಿಗೆ ಪಕ್ಕದ ಹೊಲದ ಒಳಗಿಂದ ತಾತ್ಕಾಲಿಕ ರಸ್ತೆ ನಿರ್ಮಾಣ ಮಾಡಲಾಗಿತ್ತು. ಇಂದು ಜೋರಾದ ಮಳೆ ಬಂದಿದ್ದರಿಂದ ಆ ಹೊಲದಲ್ಲಿನ ರಸ್ತೆಯಲ್ಲಿ ಕೆಸರಾಗಿದೆ. ಹಾಗಾಗಿ ಬಸವಕಲ್ಯಾಣ-ಭಾಲ್ಕಿ ಯಕೆಎಸ್‌ಆರ್‌ಟಿಸಿ ಬಸ್ಸು ಸೇರಿದಂತೆ ಖಾಸಗಿ ವಾಹನಗಳು ನಾವದಾಗಿ ಗ್ರಾಮದ ಮೂಲಕ ಸಾಗುತ್ತಿವೆ ಎಂದು ತಿಳಿದು ಬಂದಿದೆ.
ಮುಂಜಾನೆಯಿಂದ ಜಿಲ್ಲಾದ್ಯಂತ ಬಿಸಿಲಿನಿಂದ ಕೂಡಿದ ವಾತಾವರಣವಿತ್ತು. ಏಕಾಏಕಿ ಮೋಡ ಬಂದು ಗುಡುಗು, ಗಾಳಿ ಸಹಿತ ಆಲಿಕಲ್ಲು ಮಳೆ ಸುರಿಯಿತು. ಜೋರಾದ ಗಾಳಿಗೆ ಹಲವು ಕಡೆ ಮರಗಳು ಧರೆಗೆ ಉರುಳಿವೆ.


