ನಮ್ಮ ಸರಕಾರ ಸುಭದ್ರವಾಗಿದೆ, ಯಾವುದೇ ಸ್ವಾಮೀಜಿಗಳು ಸರಕಾರದ ಬಗ್ಗೆ ಭವಿಷ್ಯ ನುಡಿಯುವುದು ಬೇಡ: ಡಿಸಿಎಂ ಡಿ.ಕೆ. ಶಿವಕುಮಾರ್
ಬೆಂಗಳೂರು: ನಮ್ಮ ಸರಕಾರ ಸುಭದ್ರವಾಗಿದ್ದು, ಯಾವುದೇ ಸ್ವಾಮೀಜಿಗಳು ಸರಕಾರದ ಬಗ್ಗೆ ಭವಿಷ್ಯ ನುಡಿಯುವುದು ಬೇಡ ಎಂದು ಮನವಿ ಮಾಡುತ್ತೇನೆ. ಸಿದ್ದರಾಮಯ್ಯ ರಾಜ್ಯದ ಮುಖ್ಯಮಂತ್ರಿಗಳಾಗಿದ್ದು ನಾವೆಲ್ಲರೂ ಒಟ್ಟಾಗಿ ಕೆಲಸ ಮಾಡುತ್ತಿದ್ದೇವೆ ಎಂದು ಅವರು, ಯಾವ ಪವರ್ ಇಲ್ಲ, ಶೇರು ಇಲ್ಲ. ಐದು ವರ್ಷ ಕಾಂಗ್ರೆಸ್ ಸರಕಾರ ಇರುತ್ತದೆ ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಯಾರೂ ಸಭೆ ಮಾಡುವುದನ್ನು ನಾವು ತಡೆದಿಲ್ಲ. ಅದರ ಅವಶ್ಯಕತೆ ನಮಗಿಲ್ಲ. ದೊಡ್ಡವರ ಬಗ್ಗೆ ಮಾತನಾಡುವುದು ಬೇಡ ಎಂದು ಔತನಕೂಟ ಸಭೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ಯಾವ ಡಿನ್ನರ್ ಸಭೆ ಇಲ್ಲ’ ಎಂದು ಮಾಧ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಉತ್ತರ ನೀಡಿದರು.
ಸಂಪುಟ ಸಭೆಯಲ್ಲಿ ‘ಸಾಮಾಜಿಕ, ಆರ್ಥಿಕ ಸಮೀಕ್ಷಾ ವರದಿʼ ಕುರಿತು ಚರ್ಚೆ:
‘ಸಾಮಾಜಿಕ, ಆರ್ಥಿಕ ಸಮೀಕ್ಷಾ ವರದಿ ಬಗ್ಗೆ ಸಚಿವ ಸಂಪುಟ ಸಭೆಯಲ್ಲಿ ಚರ್ಚಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದು, ಅಲ್ಲಿ ಈ ಕುರಿತು ಚರ್ಚಿಸುತ್ತೇವೆ. ಆದರೆ, ಒಕ್ಕಲಿಗ ಮತ್ತು ಲಿಂಗಾಯತ ಸಮುದಾಯದ ಸಭೆಯ ಬಗ್ಗೆ ನನಗೆ ಗೊತ್ತಿರುವ ಮಾಹಿತಿ ಇಲ್ಲ’ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದ್ದಾರೆ.
ನಾನು ಹಾಗೂ ಸಿಎಂ ಚರ್ಚೆ ಮಾಡಿ ಜ.13ರಂದು ಸಿಎಲ್‍ಪಿ ಸಭೆ ಕರೆದಿದ್ದೇವೆ. ಅಂದು ಇಡೀ ದಿನ ಪಕ್ಷಕ್ಕೆ ಮುಡಿಪಾಗಿಡಬೇಕು ಎಂದು ಹೇಳಿ, ಅಂದಿನ ಕಾರ್ಯಕ್ರಮ ರದ್ದು ಮಾಡಿದ್ದೇವೆ. ಬೆಳಗ್ಗೆ 11 ಗಂಟೆಗೆ ಭಾರತ ಜೋಡೋ ಭವನದಲ್ಲಿ ಬ್ಲಾಕ್, ಜಿಲ್ಲಾಧ್ಯಕ್ಷರ ಸಭೆ ಕರೆಯಲಾಗಿದೆ. ಸಂಜೆ 4 ಗಂಟೆಗೆ ಪದಾಧಿಕಾರಿಗಳ ಸಭೆ ಕರೆದಿದ್ದೇವೆ. ಸಂಜೆ 6 ಗಂಟೆಗೆ ಶಾಸಕರು, ಸಚಿವರ ಸಭೆ ಮಾಡಿ ಜವಾಬ್ದಾರಿ ನೀಡಲಾಗುವುದು ಎಂದರು.
ಕಾಂಗ್ರೆಸ್ ಕಚೇರಿ ನಿರ್ಮಾಣ: ಜ.14ರಂದು ನಾನು ಹಾಗೂ ಸಿಎಂ ದಿಲ್ಲಿಗೆ ತೆರಳಲಿದ್ದು, 15ರಂದು ಹೊಸದಿಲ್ಲಿಯ ಕಾಂಗ್ರೆಸ್ ನೂತನ ಕಚೇರಿ ಉದ್ಘಾಟನೆ ಮಾಡಲಾಗುವುದು ಎಂದ ಅವರು, ‘ಗಾಂಧಿ ಭಾರತ ಕಾರ್ಯಕ್ರಮ ಅಂಗವಾಗಿ ಇದೇ ತಿಂಗಳು 21ರಂದು ನಡೆಯಲಿರುವ ಜೈಬಾಪು, ಜೈಭೀಮ್, ಜೈ ಸಂವಿಧಾನ ಸಮಾವೇಶ ಹಾಗೂ 100 ಕಾಂಗ್ರೆಸ್ ಕಚೇರಿ ನಿರ್ಮಾಣದ ಬಗ್ಗೆ ಹಿರಿಯ ನಾಯಕರ ಸಭೆಯಲ್ಲಿ ಚರ್ಚಿಸಲಾಯಿತು ಎಂದು ತಿಳಿಸಿದರು.
ಈಗಾಗಲೇ 72 ಕಡೆ ಕಾಂಗ್ರೆಸ್ ಕಚೇರಿ ನಿರ್ಮಾಣಕ್ಕೆ ಅರ್ಜಿ ಬಂದಿವೆ. ಉಳಿದ ಕಡೆಗಳು ಸೇರಿ 100 ಕಚೇರಿ ನಿರ್ಮಾಣ ಮಾಡಲಾಗುವುದು. ಸಚಿವರು ಪಕ್ಷದ ಹಿರಿಯ ನಾಯಕರಿಗೆ ಇದರ ಜವಾಬ್ದಾರಿ ನೀಡಲಾಗಿದೆ. ಶಾಸಕರಿಗೂ ಬೇರೆ ಬೇರೆ ಜವಾಬ್ದಾರಿ ನೀಡಲಾಗಿದೆ ಎಂದು ಡಿ.ಕೆ.ಶಿವಕುಮಾರ್ ತಿಳಿಸಿದರು.