ಇರಾನಿನ ಶಾಹಿದ್ ರಾಜೀ ಬಂದರಿನಲ್ಲಿ ಭಾರೀ ಸ್ಪೋಟ; ಕನಿಷ್ಠ 400 ಮಂದಿಗೆ ಗಾಯ

Video screen grab | credit : x/@TheCradleMedia
ಟೆಹ್ರಾನ್: ಇರಾನಿನ ರಾಜಧಾನಿ ಟೆಹ್ರಾನ್ ನಿಂದ 1000 ಕಿಲೋಮೀಟರ್ ದೂರದಲ್ಲಿರುವ ಅತ್ಯಾಧುನಿಕ ಶಾಹಿದ್ ರಾಜೀ ಬಂದರಿನಲ್ಲಿ ಭಾರೀ ಸ್ಪೋಟ ಸಂಭವಿಸಿ ಕನಿಷ್ಠ 400 ಮಂದಿ ಗಾಯಗೊಂಡಿದ್ದಾರೆ ಎಂದು ಎಎಫ್‌ಪಿ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಬಂದರಿನಲ್ಲಿ ಹಲವಾರು ಕಂಟೇನರ್‌ಗಳು ಸ್ಫೋಟಗೊಂಡಿದ್ದು, ಭಾರಿ ಬೆಂಕಿ ಕಾಣಿಸಿಕೊಂಡಿದೆ. ಬಂದರು ಪ್ರದೇಶದಿಂದ ದಟ್ಟವಾದ ಹೊಗೆ ಹೊರಬರುತ್ತಿರುವುದು ದೃಶ್ಯಗಳಲ್ಲಿ ಸೆರೆಯಾಗಿದೆ.
"ಶಾಹಿದ್ ರಾಜೀ ಬಂದರಿನ ಡಾಕ್‌ನ ಒಂದು ಭಾಗದಲ್ಲಿ ಸ್ಫೋಟ ಸಂಭವಿಸಿದೆ. ನಾವು ಬೆಂಕಿಯನ್ನು ನಂದಿಸುತ್ತಿದ್ದೇವೆ" ಎಂದು ಬಂದರಿನ ಪ್ರಾದೇಶಿಕ ಅಧಿಕಾರಿ ಎಸ್ಮಾಯಿಲ್ ಮಲೆಕಿಜಾದೆಹ್ ಅವರನ್ನು ಉಲ್ಲೇಖಿಸಿ ಸ್ಟೇಟ್ ಟಿವಿ ತಿಳಿಸಿದೆ.
ಇರಾನ್ ನ ಅತ್ಯಾಧುನಿಕವಾಗಿರುವ ಶಾಹಿದ್ ರಾಜೀ ಕಂಟೇನರ್ ಬಂದರು ಮತ್ತು ಹಾರ್ಮೋಝ್ಗನ್ ಪ್ರಾಂತೀಯ ರಾಜಧಾನಿ ಪೋರ್ಟ್ ಅಬ್ಬಾಸ್‌ನಿಂದ ಪಶ್ಚಿಮಕ್ಕೆ 23 ಕಿಲೋಮೀಟರ್ ದೂರದಲ್ಲಿದೆ. ಇದು ವಿಶ್ವದ ತೈಲ ಉತ್ಪಾದನೆಯ ಐದನೇ ಒಂದು ಭಾಗ ಹಾದುಹೋಗುವ ಹಾರ್ಮೋಜ್ ಜಲಸಂಧಿಯ ಉತ್ತರಕ್ಕೆ ಇದೆ.
"ಸ್ಫೋಟದ ನಂತರ ನಾಲ್ಕು ಕ್ಷಿಪ್ರ ಪ್ರತಿಕ್ರಿಯೆ ತಂಡಗಳನ್ನು ಸ್ಥಳಕ್ಕೆ ಕಳುಹಿಸಲಾಗಿದೆ" ಎಂದು ಹಾರ್ಮೋಝ್ಗನ್ ರೆಡ್ ಕ್ರೆಸೆಂಟ್ ಸೊಸೈಟಿಯ ಮುಖ್ಯಸ್ಥ ಮೊಖ್ತರ್ ಸಲಾಹ್‌ಶೌರ್ ಸ್ಟೇಟ್ ಟಿವಿಗೆ ತಿಳಿಸಿದರು. "ನಾವು ಪ್ರಸ್ತುತ ಗಾಯಾಳುಗಳನ್ನು ಸ್ಥಳಾಂತರಿಸುತ್ತಿದ್ದೇವೆ ಮತ್ತು ಹತ್ತಿರದ ವೈದ್ಯಕೀಯ ಕೇಂದ್ರಗಳಿಗೆ ಸಾಗಿಸುತ್ತಿದ್ದೇವೆ" ಎಂದು ಅವರು ಹೇಳಿದರು.