‘ಕೆಐಎಡಿಬಿಯ ಸಿಎ ನಿವೇಶನ’ ಹಂಚಿಕೆಯಲ್ಲಿ ಅಕ್ರಮ ಆಗಿಲ್ಲ : ಸಚಿವ ಎಂ.ಬಿ.ಪಾಟೀಲ್

Update: 2024-08-23 14:43 GMT

ಎಂ.ಬಿ.ಪಾಟೀಲ್‌ (Screengrab: x/@MBPatil)

ಬೆಂಗಳೂರು : ರಾಜ್ಯ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ(ಕೆಐಎಡಿಬಿ)ಯಲ್ಲಿ ನಾಗರಿಕ ಸೌಲಭ್ಯ(ಸಿಎ)ದ ನಿವೇಶನಗಳನ್ನು ಅರ್ಹ ಸಂಸ್ಥೆಗಳಿಗೆ ಹಂಚಿಕೆ ಮಾಡಲಾಗಿದ್ದು, ಇದರಲ್ಲಿ ಯಾವ ಅಕ್ರಮವೂ ಆಗಿಲ್ಲ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಸ್ಪಷ್ಟಪಡಿಸಿದರು.

ಶುಕ್ರವಾರ ನಗರದ ರೇಸ್‍ಕೋರ್ಸ್ ರಸ್ತೆಯಲ್ಲಿರುವ ಖನಿಜ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿಎ ನಿವೇಶನಗಳನ್ನು ಅತ್ಯಂತ ಪಾರದರ್ಶಕ ವ್ಯವಸ್ಥೆ ಮೂಲಕ ನಿಯಮಾನುಸಾರ ಹಂಚಿಕೆ ಮಾಡಲಾಗುತ್ತಿದೆ ಎಂದು ಹೇಳಿದರು.

ಸಿಎ ನಿವೇಶನಗಳನ್ನು ಹರಾಜು ಹಾಕುವ ಪದ್ದತಿಯಿಲ್ಲ. ವಾಣಿಜ್ಯ ಉದ್ದೇಶದ ನಿವೇಶನಗಳನ್ನು ಮಾತ್ರ ಹರಾಜು ಹಾಕಲು ಅವಕಾಶ ಇದೆ. ಸಿಎ ನಿವೇಶನಗಳ ಹಂಚಿಕೆಗಾಗಿ ಪತ್ರಿಕೆಗಳಲ್ಲಿ ವ್ಯಾಪಕ ಪ್ರಚಾರ ಕೊಡುವುದರ ಜತೆಗೆ ಇಲಾಖಾ ವೆಬ್ ಸೈಟ್ ನಲ್ಲೂ ಪ್ರಕಟಿಸಲಾಗಿದೆ. ವೆಬ್ ಸೈಟ್ ನಲ್ಲಿ ಹಾಕುವ ವ್ಯವಸ್ಥೆ ಮೊದಲು ಇರಲಿಲ್ಲ. ಇದೇ ಮೊದಲ ಬಾರಿಗೆ ನಾವು ಹಾಕಿದ್ದೇವೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

ಸಿಎ ನಿವೇಶನಗಳ ಹಂಚಿಕೆಯನ್ನು ಹಿಂದೆಲ್ಲ ಸರಕಾರದಿಂದ ಅನುಮೋದನೆ ಪಡೆದು ನೇರವಾಗಿ ಹಂಚಿಕೆ ಮಾಡಲಾಗುತ್ತಿತ್ತು. ಆದರೆ, ಈ ಬಾರಿ ಹಂಚಿಕೆ ಹೆಚ್ಚು ಪಾರದರ್ಶಕವಾಗಿ ನಡೆಯಲಿ ಎನ್ನುವ ಕಾರಣಕ್ಕೆ ಕೆಐಎಡಿಬಿಯ ಸಿಇಒ ಅಧ್ಯಕ್ಷತೆಯ ಉಪಸಮಿತಿ ಅರ್ಹತೆಯನ್ನು ಪರಿಶೀಲಿಸಿ ಇಲಾಖಾ ಸಚಿವರ ಅಧ್ಯಕ್ಷತೆಯ ರಾಜ್ಯ ಮಟ್ಟದ ಏಕ ಗವಾಕ್ಷಿ ಸಮಿತಿಗೆ ಶಿಫಾರಸ್ಸು ಮಾಡಿದ ನಂತರ ರಾಜ್ಯ ಮಟ್ಟದ ಸಮಿತಿ ತೀರ್ಮಾನದ ಮೂಲಕ ಅರ್ಹರಿಗೇ ನಿವೇಶನ ಹಂಚಿಕೆ ಮಾಡಲಾಗಿದೆ ಎಂದು ಅವರು ವಿವರಿಸಿದರು.

ಈ ಸಮಿತಿಯಲ್ಲಿ ಅಭಿವೃದ್ಧಿ ಆಯುಕ್ತರು, ಇಲಾಖಾ ಪ್ರಧಾನ ಕಾರ್ಯದರ್ಶಿ, ಇತರೆ ಇಲಾಖೆಯ ಪ್ರಧಾನ ಕಾರ್ಯದರ್ಶಿ, ಇಲಾಖಾ ಮುಖ್ಯಸ್ಥರು, ಕೈಗಾರಿಕಾ ಆಯುಕ್ತರು, ಕೆಐಎಡಿಬಿಯ ಸಿಇಒ, ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಇತರೆ ಎಲ್ಲ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಸದಸ್ಯರಾಗಿರುತ್ತಾರೆ ಎಂದು ಎಂ.ಬಿ.ಪಾಟೀಲ್ ಹೇಳಿದರು.

ಈ ಬಾರಿ ಒಟ್ಟು 377.69 ಎಕರೆ ಪ್ರದೇಶದ 193 ನಿವೇಶನಗಳಿಗೆ ಅರ್ಜಿ ಅಹ್ವಾನಿಸಲಾಗಿದ್ದರೂ ಕೇವಲ 43 ನಿವೇಶನಗಳನ್ನು (96.59 ಎಕರೆ) ಮಾತ್ರ ಹಂಚಿಕೆ ಮಾಡಲಾಗಿದೆ. ಅಂದರೆ ಅಂದಾಜು ಶೇ.25ರಷ್ಟು ಮಾತ್ರ ಹಂಚಿಕೆ ಮಾಡಿದ್ದು ಉಳಿದ ನಿವೇಶನಗಳು ಹಂಚಿಕೆಗೆ ಬಾಕಿ ಇವೆ ಎಂದು ಅವರು ತಿಳಿಸಿದರು.

ಒಂದೊಂದೇ ಅರ್ಜಿ ಬಂದ ಪ್ರಕರಣಗಳಲ್ಲಿ ಅಂತಹ ಹಂಚಿಕೆಯನ್ನು ಮಾಡಲು ಅವಕಾಶವಿದ್ದರೂ (ಇದು ಟೆಂಡರ್ ಪ್ರಕ್ರಿಯೆ ಅಲ್ಲ) ಇದನ್ನು ಪರಿಗಣಿಸದೆ ಹೊಸದಾಗಿ ನೋಟಿಫಿಕೇಷನ್ ಮಾಡಲಾಗುತ್ತಿದೆ. ಇದರಿಂದ ಅರ್ಹರಿಗೆ ಇನ್ನಷ್ಟೂ ಅವಕಾಶ ಲಭ್ಯವಾಗಲಿದೆ. 41 ಕಡೆ ಒಂದೊಂದೇ ಅರ್ಜಿ ಬಂದಿತ್ತು. ಅದನ್ನು ಮತ್ತೆ ಹೊಸದಾಗಿ ಕರೆದಿದ್ದೇವೆ ಎಂದು ಎಂ.ಬಿ.ಪಾಟೀಲ್ ತಿಳಿಸಿದರು.

ಮತ್ತೊಂದು ವಿಶೇಷ ಅಂದರೆ ಇದೇ ಮೊದಲ ಬಾರಿಗೆ ಸಿಎ ನಿವೇಶನಗಳ ಹಂಚಿಕೆಯಲ್ಲೂ ಪರಿಶಿಷ್ಟ ಜಾತಿ, ಪಂಗಡದವರಿಗೆ ಶೇ.24.10ರಷ್ಟು ಮೀಸಲಿಡುವ ಐತಿಹಾಸಿಕ ತೀರ್ಮಾನ ನನ್ನ ಅವಧಿಯಲ್ಲಿ ಆಗಿದೆ. 2018ರ ಸರಕಾರದ ತೀರ್ಮಾನದಂತೆ ಒಂದೂವರೆ ಪಟ್ಟು ಹಂಚಿಕೆ ದರ ಇದ್ದಿದ್ದನ್ನು 2021ರ ಜೂ.7ರಂದು ಸರ್ಕಾರದಲ್ಲಿ ಚಾಲ್ತಿಯಲ್ಲಿರುವ ಹಂಚಿಕೆ ದರದಂತೆ ಹಂಚಿಕೆ ಮಾಡಲು ತೀರ್ಮಾನಿಸಿ ಕೆಐಎಡಿಬಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.

ನನ್ನ ಅವಧಿಯಲ್ಲಿ ಸಿಎ ನಿವೇಶನಗಳ ಹಂಚಿಕೆ ದರವನ್ನು ಕಡಿಮೆ ಮಾಡಿಲ್ಲ. ಬದಲಿಗೆ ಹಂಚಿಕೆಯನ್ನು ಪಾರದರ್ಶಕವಾಗಿ ಮಾಡಲು ಕ್ರಮವಹಿಸಲಾಗಿದೆ. ಸಿಎ ನಿವೇಶನಗಳು ನಾಗರಿಕ ಸೌಲಭ್ಯದ ಉದ್ದೇಶಕ್ಕಾಗಿ ಮತ್ತು ಕೈಗಾರಿಕೆಗಳ ಪೂರಕ ಉದ್ಧೇಶಗಳಿಗೆ ಬಳಕೆಯಾಗುವುದರಿಂದ ಹೆಚ್ಚಿನ ದರ ವಿಧಿಸಲಾಗುತ್ತಿಲ್ಲ ಎಂದು ಎಂ.ಬಿ.ಪಾಟೀಲ್ ಹೇಳಿದರು.

ಕೆಐಎಡಿಬಿ ನಿಯಮಾವಳಿಗಳ ನಿಯಮ 7 ರಲ್ಲಿ ಕೆಐಎಡಿಬಿ ನಿವೇಶನಗಳ ಹಂಚಿಕೆಗಾಗಿ ವ್ಯಾಪಕ ಪ್ರಚಾರ, ಪತ್ರಿಕಾ ಪ್ರಕಟಣೆ ನೀಡಬೇಕೆಂಬ ನಿಯಮವಿದ್ದು ಅದರಂತೆ ವ್ಯಾಪಕ ಪ್ರಚಾರ ನೀಡಲಾಗಿದೆ. ಹಾಗಾಗಿ ನಿಯಮ ಉಲ್ಲಂಘನೆಯಾಗಿಲ್ಲ. ಬೆಂಗಳೂರು ಮಾತ್ರವಲ್ಲದೇ ರಾಜ್ಯದ 21 ಜಿಲ್ಲೆಗಳಲ್ಲೂ ಇರುವ ಸಿಎ ನಿವೇಶನಗಳ ಹಂಚಿಕೆಗೆ ಅರ್ಜಿ ಆಹ್ವಾನಿಸಿ ಹಂಚಿಕೆ ಮಾಡಲಾಗಿದೆ ಎಂದು ಅವರು ತಿಳಿಸಿದರು.

ಎಂ.ಬಿ.ಪಾಟೀಲ್ ವಿರುದ್ಧ ರಾಜ್ಯಪಾಲರಿಗೆ ದೂರು: ಬಿಡದಿ, ವಸಂತನರಸಾಪುರ, ಕೋಲಾರ ಬಳಿಯಿರುವ ನರಸಾಪುರ, ದೊಡ್ಡಬಳ್ಳಾಪುರ ಕೈಗಾರಿಕಾ ಪ್ರದೇಶಗಳಲ್ಲಿ ಕೈಗಾರಿಕೆಗಳನ್ನು ನಡೆಸದ ಕಂಪೆನಿಗಳಿಗೂ ಸಚಿವ ಎಂ.ಬಿ.ಪಾಟೀಲ್ ನಿವೇಶನ ಹಂಚುವ ಮೂಲಕ ಅಕ್ರಮ ಎಸಗಿದ್ದಾರೆ. ಈ ಕೆಲಸಕ್ಕೆ ಕೆಲವು ಅಧಿಕಾರಿಗಳು ಕೈ ಜೋಡಿಸಿದ್ದಾರೆ. ನಿವೇಶನಗಳ ಹಂಚಿಕೆಯಲ್ಲಿ ಆಗಿರುವ ಅಕ್ರಮದಿಂದಾಗಿ ಕೆಐಎಡಿಬಿಗೆ ಕೋಟ್ಯಂತರ ರೂ.ನಷ್ಟ ಉಂಟಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಹಳ್ಳಿ ರಾಜ್ಯಪಾಲರಿಗೆ ದೂರು ನೀಡಿದ್ದು, ಸಚಿವ ಎಂ.ಬಿ.ಪಾಟೀಲ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News