ಕೆನಡಾ ಹೊಸ ಸರ್ಕಾರದ ಮೂಲಕ ಅವಕಾಶಗಳ ಅನಾವರಣ: ಮೋದಿ ಅಭಿಮತ

ನರೇಂದ್ರ ಮೋದಿ | ಕೆನಡಾ ಪ್ರಧಾನಿ ಮಾರ್ಕ್ ಕಾರ್ನಿ
PC: x.com/timesofindia
ಹೊಸದಿಲ್ಲಿ: ಪ್ರಬಲ ಟ್ರಂಪ್ ವಿರೋಧಿ ಅಲೆಯಿಂದಾಗಿ ಕೆನಡಾದಲ್ಲಿ ಪ್ರಧಾನಿ ಮಾರ್ಕ್ ಕಾರ್ನಿ ನೇತೃತ್ವದ ಲಿಬರಲ್ ಪಕ್ಷ ಭರ್ಜರಿ ಬಹುಮತದೊಂದಿಗೆ ಅಧಿಕಾರಕ್ಕೆ ಮರಳಿದೆ. ನೂತನ ಸರ್ಕಾರವನ್ನು ಅಭಿನಂದಿಸಿದ ಪ್ರಧಾನಿ ನರೇಂದ್ರ ಮೋದಿ, ಉಭಯ ದೇಶಗಳ ನಡುವಿನ ಸಂಬಂಧದ ವಿಪುಲ ಅವಕಾಶಗಳನ್ನು ಅನಾವರಣಗೊಳಿಸುವ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಭಾರತ ಹಾಗೂ ಕೆನಡಾ ಪ್ರಜಾಸತ್ತಾತ್ಮಕ ಮೌಲ್ಯಗಳು ಹಾಗೂ ಕಾನೂನಿನ ಪ್ರಕಾರ ಆಡಳಿತದಂಥ ಸಮಾನ ಮೌಲ್ಯಗಳನ್ನು ಹೊಂದಿದ್ದು, ಜನತೆಯ ನಡುವಿನ ಸೌಹಾರ್ದಯುತ ಸಂಬಂಧದ ಆಧಾರದಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ನೆಲೆ ನಿಂತಿದೆ ಎಂದು ಪ್ರಧಾನಿ ಬಣ್ಣಿಸಿದ್ದಾರೆ.
ಭಾರತದ ಜತೆ ನಂಬಲಸಾಧ್ಯವಾದಷ್ಟು ಮಹತ್ವದ ಸಂಬಂಧಗಳನ್ನು ಮರುಸ್ಥಾಪಿಸುವ ನಿಟ್ಟಿನಲ್ಲಿ ಕಾರ್ನಿ ಒಲವು ಹೊಂದಿದ್ದು, ಕಳೆದ 20 ತಿಂಗಳಿನಿಂದ ಹಳಸಿದ ಸಂಬಂಧವನ್ನು ಸರಿಪಡಿಸಲು ಉಭಯ ದೇಶಗಳಿಗೆ ವಿಪುಲ ಅವಕಾಶಗಳಿವೆ. ಟ್ರಂಪ್ ನೀತಿಯಿಂದಾಗಿ ಲಿಬರಲ್ ಪಕ್ಷದ ಭವಿಷ್ಯ ನಾಟಕೀಯ ಬದಲಾವಣೆಗೆ ಕಾರಣವಾಗಿದ್ದು, ಸಂಬಂಧ ನಾಶವಾಗಲು ಈ ಹಿಂದಿನ ಪ್ರಧಾನಿ ಜಸ್ಟಿನ್ ಟ್ರೂಡೊ ವೈಯಕ್ತಿಕವಾಗಿ ಹೊಣೆಗಾರರು. ಕಳೆದ ಮಾರ್ಚ್ ನಲ್ಲಿ ಕಾರ್ನಿ ಅಧಿಕಾರ ವಹಿಸಿಕೊಂಡ ಬಳಿಕ ಭಾರತ ಈಗಾಗಲೇ "ಪರಸ್ಪರ ಗೌರವ ಮತ್ತು ಭಾವಸೂಕ್ಷ್ಮತೆ" ಆಧರಿತ ಸಂಬಂಧ ಮರುಸ್ಥಾಪನೆಗೆ ನೂತನ ಪ್ರಧಾನಿ ಜತೆ ಉತ್ತಮ ಸಂಬಂಧವನ್ನು ಎದುರು ನೋಡುತ್ತಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಖಲಿಸ್ತಾನ ಪ್ರತ್ಯೇಕತಾವಾದಿಗಳ ಅನಿಯಂತ್ರಿತ ಕಾರ್ಯಚಟುವಟಿಕೆಗಳು ಉಭಯ ದೇಶಗಳ ನಡುವಿನ ಸಂಬಂಧಕ್ಕೆ ಸವಾಲಾಗುವ ನಿರೀಕ್ಷೆ ಇದೆ. ಮುಂದಿನ ಜೂನ್ ನಲ್ಲಿ ನಡೆಯುವ ಜಿ7 ಶೃಂಗಕ್ಕೆ ಕೆನಡಾ ಮೋದಿಯವರನ್ನು ಆಹ್ವಾನಿಸುತ್ತದೆಯೇ ಎನ್ನುವ ಕುತೂಹಲವೂ ತಕ್ಷಣಕ್ಕೆ ಇದೆ. ಈ ಕಾರ್ಯಕ್ರಮದಲ್ಲಿ ಅತಿಥಿ ದೇಶಗಳ ಯಾವುದೇ ಹೆಸರನ್ನು ಕೆನಡಾ ಪ್ರಕಟಿಸಿಲ್ಲ.
ಖಲಿಸ್ತಾನ ಮುಖಂಡ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆಯ ಹಿನ್ನೆಲೆಯಲ್ಲಿ ಪರಸ್ಪರ ದೇಶಗಳ ಹೈಕಮಿಷನರ್ ಗಳನ್ನು ಉಚ್ಚಾಟಿಸುವ ಮೂಲಕ ಕಳೆದ ವರ್ಷದ ಅಕ್ಟೋಬರ್ ನಿಂದ ಉಭಯ ದೇಶಗಳ ಸಂಬಂಧದಲ್ಲಿ ಸಂಘರ್ಷ ಏರ್ಪಟ್ಟಿತ್ತು. ಇದಕ್ಕೂ ಮುನ್ನವೇ ಈ ಪ್ರಕರಣದಲ್ಲಿ ಭಾರತ ಸರ್ಕಾರದ ಕೈವಾಡವಿರುವುದಕ್ಕೆ ಪುರಾವೆ ಇದೆ ಎಂದು ಕೆನಡಾ ಪ್ರತಿಪಾದಿಸುತ್ತಾ ಬಂದಿತ್ತು.