ರಾಜತಾಂತ್ರಿಕ ಸಂಘರ್ಷದ ನಡುವೆ ನವರಾತ್ರಿ ಶುಭಾಶಯ ಕೋರಿದ ಕೆನಡಾ ಪ್ರಧಾನಿ

Update: 2023-10-16 04:08 GMT

ಹೊಸದಿಲ್ಲಿ: ಭಾರತದ ಜತೆಗಿನ ರಾಜತಾಂತ್ರಿಕ ಸಂಬಂಧದ ನಡುವೆಯೇ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡೋ, ಕೆನಡಾದಲ್ಲಿರುವ ಹಿಂದೂಗಳಿಗೆ ನವರಾತ್ರಿ ಶುಭಾಶಯ ಕೋರಿದ್ದಾರೆ.

"ನವರಾತ್ರಿ ಶುಭಾಶಯಗಳು! ನನ್ನ ಹಿಂದೂ ಸಮುದಾಯದವರಿಗೆ ಹಾಗೂ ಈ ಹಬ್ಬವನ್ನು ಆಚರಿಸಿಕೊಳ್ಳುತ್ತಿರುವವರಿಗೆ ಆತ್ಮೀಯ ಶುಭ ಹಾರೈಸುತ್ತಿದ್ದೇನೆ" ಎಂದು ಎಕ್ಸ್ ಪೋಸ್ಟ್ ನಲ್ಲಿ ಹೇಳಿದ್ದಾರೆ. ಕೆನಡಾದಲ್ಲಿ ನವರಾತ್ರಿಯನ್ನು ವರ್ಷಕ್ಕೆ ಎರಡು ಬಾರಿ ಆಚರಿಸಲಾಗುತ್ತಿದ್ದು, ಮೊದಲು ಚೈತ್ರಮಾಸದ ಒಂಬತ್ತು ದಿನವನ್ನು (ಮಾರ್ಚ್/ಏಪ್ರಿಲ್) ಹಾಗೂ ಅಶ್ವಯುಜ ಮಾಸ (ಸೆಪ್ಟೆಂಬರ್-ಅಕ್ಟೋಬರ್) ತಿಂಗಳಲ್ಲಿ ದುರ್ಗಾದೇವಿಯ ಆರಾಧನೆಯಾಗಿ ಆಚರಿಸಲಾಗುತ್ತದೆ.

ಖಲಿಸ್ತಾನಿ ಪ್ರತ್ಯೇಕತಾವಾದಿ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದಲ್ಲಿ ಭಾರತದ ಕೈವಾಡವಿದೆ ಎಂದು ಕೆನಡಾ ಪ್ರಧಾನಿ ಬಹಿರಂಗವಾಗಿ ಆರೋಪ ಮಾಡಿದ ಹಿನ್ನೆಲೆಯಲ್ಲಿ ಉಭಯ ದೇಶಗಳ ನಡುವಿನ ಸಂಬಂಧ ಹದಗೆಟ್ಟಿತ್ತು. ವ್ಯಾಂಕೋವರ್ ನಲ್ಲಿ ಅಪರಿಚಿತ ಬಂದೂಕುಧಾರಿಗಳು ಜೂನ್ 17ರಂದು ನಿಜ್ಜರ್ನನ್ನು ಹತ್ಯೆ ಮಾಡಿದ್ದರು. ಭಾರತ ಈ ಆರೋಪವನ್ನು ನಿರಾಕರಿಸಿದ್ದು, ಇದು ವಿಕೋಪಕ್ಕೆ ಹೋಗಿ ಉಭಯ ದೇಶಗಳು ರಾಜತಾಂತ್ರಿಕರನ್ನು ಉಚ್ಚಾಟಿಸುವ ಹಂತಕ್ಕೆ ಹೋಗಿತ್ತು.

ಭಾರತ ಕೆನಡಾದ ಪ್ರಜೆಗಳಿಗೆ ವೀಸಾ ನಿರಾಕರಿಸಿದ್ದು, ದೇಶದಲ್ಲಿ ರಾಜತಾಂತ್ರಿಕ ಸಿಬ್ಬಂದಿ ಗಾತ್ರವನ್ನು ಕಡಿತಗೊಳಿಸುವಂತೆ ಸೂಚಿಸಿತ್ತು. ಕೆನಡಾ ಈ ವಿವಾದವನ್ನು ಬೆಳೆಸಲು ಅವಕಾಶ ನೀಡುವುದಿಲ್ಲ ಎಂದು ಟ್ರೂಡೋ ಸ್ಪಷ್ಟಪಡಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News