ಚಾಮರಾಜನಗರ | ಕೂಲಿ ಕೆಲಸಕ್ಕೆ ತರೆಳುತ್ತಿದ್ದಾಗ ಕಾಡಾನೆ ದಾಳಿ; ಓರ್ವ ಮೃತ್ಯು, ಮತ್ತೋರ್ವ ಪಾರು

ಮುನಿಯಪ್ಪ (40)
ಚಾಮರಾಜನಗರ : ಕಾಡಿನ ರಸ್ತೆಯಲ್ಲಿ ಸಂಚಾರ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಕಾಡಾನೆ ದಾಳಿ ನಡೆಸಿದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲ್ಲೂಕಿನ ಮೀಣ್ಯಂ ಬಳಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಮಿಣ್ಯಂ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಪ್ಪ ಗ್ರಾಮದಿಂದ ಅರಣ್ಯದ ರಸ್ತೆಯಲ್ಲಿ ಒಡೆಯರ ಪಾಳ್ಯಕ್ಕೆ ತೆರಳುತ್ತಿದ್ದ ಕೊಪ್ಪ ಗ್ರಾಮದ ನಿವಾಸಿ ಮುನಿಯಪ್ಪ (40) ಮೃತ ವ್ಯಕ್ತಿ.
ಮುನಿಯಪ್ಪ ಹಾಗೂ ಈತನ ಸ್ನೇಹಿತ ಕುಳ್ಳುಚ್ಚ ಎಂಬವರು ಒಡೆಯರಪಾಳ್ಯ ಗ್ರಾಮದ ಜಮೀನುವೊಂದರಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದರು. ಕಾರ್ಯನಿಮಿತ್ತ ಗ್ರಾಮಕ್ಕೆ ಬಂದು ಕೆಲಸ ಮುಗಿದ ನಂತರ ವಾಪಸ್ ಕೆಲಸಕ್ಕೆ ಒಡೆಯರಪಾಳ್ಯ ಗ್ರಾಮಕ್ಕೆ ತೆರಳುತ್ತಿದ್ದಾಗ ಅರಣ್ಯದಲ್ಲಿ ಕಾಡಾನೆ ಇಬ್ಬರ ಮೇಲೆ ದಾಳಿ ನಡೆಸಿದೆ. ಇದರಿಂದಾಗಿ ತೀವ್ರ ಗಾಯಗೊಂಡಿದ್ದ ಮುನಿಯಪ್ಪ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಜೊತೆಯಲ್ಲಿದ್ದ ಈತನ ಸ್ನೇಹಿತ ಕುಳ್ಳುಚ್ಚ ಪ್ರಜ್ಞೆ ಇಲ್ಲದೆ ಅರಣ್ಯದಲ್ಲಿಯೇ ಬಿದ್ದಿದ್ದರು.
ಅರಣ್ಯ ಗಸ್ತಿನಲ್ಲಿದ್ದ ಅರಣ್ಯ ಸಿಬ್ಬಂದಿ ಇದನ್ನು ಗಮನಿಸಿ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದ ಅಧಿಕಾರಿಗಳು ಗಾಯಗೊಂಡು ಪ್ರಜ್ಞೆ ಇಲ್ಲದೆ ಬಿದ್ದಿದ್ದ ಕುಳ್ಳುಚ್ಚನನ್ನು ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಚಿಕಿತ್ಸೆಗೆ ಸ್ಪಂದಿಸುತ್ತಿರುವ ಕುಳ್ಳುಚ್ಚ ಚೇತರಿಸಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ.