ಡಿ.ಎಂ.ಚಾರಿಟೇಬಲ್ ಟ್ರಸ್ಟ್ ನಿಂದ ಪ್ರತಿಭಾ ಪುರಸ್ಕಾರ

ಚಾಮರಾಜನಗರ, ಜ. 17: ಸಾಮಾನ್ಯವಾಗಿ ನಿರುದ್ಯೋಗಿಗಳು ಉದ್ಯೋಗ ಸಿಗುವವರೆಗೂ ಅಭ್ಯಾಸ ಮಾಡುತ್ತಾರೆ. ಎಲ್ಲದರಲ್ಲೂ ಉತ್ಸಾಹ ತೋರುತ್ತಾರೆ. ಆದರೆ, ಉದ್ಯೋಗ ಸಿಕ್ಕಿದ ನಂತರ ಉತ್ಸಾಹ ಕಳೆದುಕೊಳ್ಳುತ್ತಿದ್ದಾರೆ. ನೌಕರರಲ್ಲಿ ಇಂತಹ ಪರಿಪಾಠ ಕಡಿಮೆ ಆಗಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಟಿ.ಕವಿತಾ ಸಲಹೆ ನೀಡಿದ್ದಾರೆ.
ಶುಕ್ರವಾರ ಜಿಲ್ಲೆಯ ಸಂತೆಮರಹಳ್ಳಿ ಡಿ.ಎಂ. ಚಾರಿಟೇಬಲ್ ಟ್ರಸ್ಟ್ ವತಿಯಿಂದ ಏರ್ಪಡಿಸಿದ್ದ ಕೌಶಲ್ಯಾಭಿವೃದ್ಧಿ ಕೇಂದ್ರದ ಪ್ರಶಿಕ್ಷಣಾರ್ಥಿಗಳಿಗೆ ಪ್ರಮಾಣ ಪತ್ರ ವಿತರಣೆ ಮತ್ತು ಜಿಲ್ಲೆಯ ಶಾಲಾ-ಕಾಲೇಜುಗಳ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡುತ್ತಿದ್ದರು.
ಸೇವಾ ಕ್ಷೇತ್ರದಲ್ಲಿ ಕೆಲಸ ಮಾಡುವುದಕ್ಕಿಂತ ದುಡಿವವರ ಮೇಲೆ ನಿಗಾ ವಹಿಸುವುದೇ ಹೆಚ್ಚಾಗುತ್ತಿದ್ದು ಇದರಿಂದ ಸೇವಾ ಬದ್ಧತೆ ಕುಸಿಯುತ್ತಿದೆ. ಇದರಿಂದ ನಿರೀಕ್ಷಿತ ಪ್ರಮಾಣದಷ್ಟು ಗುಣಮಟ್ಟದ ಕೆಲಸಗಳು ಆಗುತ್ತಿಲ್ಲ. ಹೀಗಾಗಿ ಎಲ್ಲರೂ ಸೇವಾ ಬದ್ಧತೆಯಿಂದ ಕೆಲಸ ನಿರ್ವಹಿಸಬೇಕು ಎಂದು ಅವರು ತಿಳಿಸಿದರು.
ಚಾಮರಾಜನಗರ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಟಿ.ಹೀರಾಲಾಲ್ ಮಾತನಾಡಿ, ರಾಜ್ಯದಲ್ಲಿ ನಿರುದ್ಯೋಗ ಕಡಿಮೆಗೊಳಿಸಲು ಕೌಶಲ್ಯ ಅಭಿವೃದ್ಧಿ ಅನಿವಾರ್ಯ. ಸಮೀಕ್ಷೆ ಪ್ರಕಾರ ರಾಜ್ಯದಲ್ಲಿ 2.99 ಲಕ್ಷ ಮಂದಿ ಸರಕಾರಿ ಹಾಗೂ ಖಾಸಗಿ ಸಂಸ್ಥೆಗಳಲ್ಲಿ ವಿವಿಧ ಹಂತದ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿಪರ್ಯಾಸವೆಂದರೆ ಸೇವೆ ಸಲ್ಲಿಸುತ್ತಿರುವವರ ಪೈಕಿ 62ಲಕ್ಷ ಮಂದಿ 14 ವರ್ಷಕ್ಕಿಂತ ಕೆಳಗಿನ ಅಪ್ರಾಪ್ತರು ಎಂದರು.
ಇನ್ನು 76 ಲಕ್ಷ ಮಂದಿ 60 ವರ್ಷ ದಾಟಿದ ವಯೋವೃದ್ಧ ನೌಕರರಾಗಿದ್ದಾರೆ. ಇವೆರಡರ ನಂತರ ಒಟ್ಟಾರೆ ಉಳಿಯುವ ನೌಕರರೇ ಇವತ್ತಿನ ಯುವಶಕ್ತಿ. ಅಂದರೆ ಈ ಅಂಕಿ ಅಂಶಗಳನ್ನು ಗಮನಿಸಿದರೆ ಮೇಲ್ನೋಟಕ್ಕೆ ದುಡಿಯುತ್ತಿರುವ ವರ್ಗ ಹೆಚ್ಚಾಗಿಯೇ ಇದ್ದಾರೆ. ಆದರೂ ನಮ್ಮಲ್ಲಿ ನಿರುದ್ಯೋಗ ಕಡಿಮೆಯಾದಂತೆ ಕಾಣುತ್ತಿಲ್ಲ. ಆರ್ಥಿಕ ಸದೃಢತೆ ಹೆಚ್ಚುತ್ತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.
ಶಿಕ್ಷಣ ತಜ್ಞೆ ಪ್ರೇಮಲತಾ ಕೃಷ್ಣಸ್ವಾಮಿ ಮಾತನಾಡಿ, ಶಿಕ್ಷಣ ಸಂಸ್ಥೆ ಮುನ್ನಡೆಸುವುದು ಸವಾಲಾಗಿದ್ದು, ಇದನ್ನು ಯುವ ಪೀಳಿಗೆ ಅರ್ಥ ಮಾಡಿಕೊಂಡು ಕಡಿಮೆ ಸೌಲಭ್ಯದಲ್ಲಿ ಹೆಚ್ಚು ಶಿಕ್ಷಣ ಪಡೆಯಬೇಕು. ಸದ್ಬಳಕೆ ಮಾಡಿಕೊಳ್ಳಬೇಕು ಎಂದರು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಕೌಶಲ್ಯ ತರಬೇತಿಯ ಪ್ರಮಾಣ ಪತ್ರಗಳನ್ನು ವಿತರಿಸಲಾಯಿತು.
ಜಿಲ್ಲೆಯ ವಿವಿಧ ಶಾಲೆ ಮತ್ತು ಕಾಲೇಜುಗಳಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ರೂಪದ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಇದೇ ವೇಳೆ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತ ರಂಗ ಕಲಾವಿದ ರಾಜಪ್ಪ, ಗಾಯಕ ನರಸಿಂಹಮೂರ್ತಿ ಹಾಗೂ ಸಿಎಂ ಪದಕ ವಿಜೇತ ಸಬ್ ಇನ್ಸ್‍ಪೆಕ್ಟರ್ ಟಿ.ಎಂ.ತಾಜುದ್ದೀನ್‍ರನ್ನು ಸನ್ಮಾನಿಸಲಾಯಿತು. ಡಿಎಂ ಚಾರಿಟಬಲ್ ಟ್ರಸ್ಟ್‍ನ ಗೌರವ ಸಲಹೆಗಾರ ಜಯಶಂಕರ್, ಪದಾಧಿಕಾರಿಗಳಾದ ರಾಜು, ರಾಕೇಶ್, ಯಶೋಧ, ಚಂದನ, ರಮ್ಯಾ ಸಿಂಧು ಭಾಗವಹಿಸಿದ್ದರು.