ನಾನೀಗ ರಾಜಕಾರಣದ ಕೊನೆಗಾಲದಲ್ಲಿದ್ದೇನೆ : ಸಿದ್ದರಾಮಯ್ಯ ಅಚ್ಚರಿಯ ಹೇಳಿಕೆ
ಚಾಮರಾಜನಗರ : ʼಜನರ ಪ್ರೀತಿ, ಅಭಿಮಾನ ಗಳಿಸದಿದ್ದರೆ ರಾಜಕೀಯದಲ್ಲಿ ಉಳಿಗಾಲವಿಲ್ಲ, ನಾನೀಗ ರಾಜಕಾರಣದ ಕೊನೆಗಾಲದಲ್ಲಿದ್ದೇನೆʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಚ್ಚರಿ ಹೇಳಿಕೆ ನೀಡಿದರು.
ಶನಿವಾರ ಸತ್ತೇಗಾಲದಲ್ಲಿ ನೂತನವಾಗಿ ನಿರ್ಮಿಸಿರುವ ಲಕ್ಷ್ಮಯ್ಯ ಸೋಸಯ್ಯನ ಸಿದ್ದಯ್ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ನೂತನ ಕಟ್ಟಡವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ʼನೀವು ಮೂರನೇ ಬಾರಿ ಮುಖ್ಯಮಂತ್ರಿಯಾಗುತ್ತೀರಿʼ ಎಂದು ಅಭಿಮಾನಿಯೊಬ್ಬರು ಕೂಗಿದಾಗ, ʼನಾನೀಗ ರಾಜಕೀಯದ ಕೊನೆಗಾಲದಲ್ಲಿದ್ದೇನೆʼ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ʼಮೊದಲು ಮೈಸೂರು ಜಿಲ್ಲೆಗೆ ಸೇರಿದ್ದ ಚಾಮರಾಜನಗರ, ದಿವಂಗತ ಬಿ.ರಾಚಯ್ಯನವರ ಕಾಲದಲ್ಲಿ ಮೈಸೂರು ಮತ್ತು ಚಾಮರಾಜನಗರ ಎಂಬ ಜಿಲ್ಲೆಗಳಾದವು. ನಾನು ಉಪಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಹೊಸ ಜಿಲ್ಲೆಯನ್ನು ಘೋಷಣೆ ಮಾಡಿದೆವು. ಜೆ.ಎಚ್.ಪಟೇಲ್ ಮುಖ್ಯಮಂತ್ರಿಯಾಗಿದ್ದರು. ಕೆಲವು ಶಾಸಕರು ಚಾಮರಾಜನಗರಕ್ಕೆ ಭೇಟಿ ನೀಡಿದರೆ ಮುಖ್ಯಮಂತ್ರಿ ಸ್ಥಾನ ಕಳೆದುಕೊಳ್ಳಬೇಕಾಗುತ್ತದೆ ಎಂದು ಹೇಳಿ ಅವರು ಜಿಲ್ಲೆಗೆ ಭೇಟಿ ನೀಡದಂತೆ ಮಾಡಿದ್ದರು. ಚಾಮರಾಜನಗರಕ್ಕೆ ಭೇಟಿ ನೀಡಿದ ಮುಖ್ಯಮಂತ್ರಿಗಳು ಅಧಿಕಾರ ಕಳೆದುಕೊಳುತ್ತಾರೆ ಎಂಬ ಕಳಂಕ ಜಿಲ್ಲೆಯ ಮೇಲೆ ಹೊರಿಸಲಾಗಿದೆ. ನಾನು ಮತ್ತು ರಾಚಯ್ಯ ಅವರು ಇಲ್ಲಿಗೆ ಬಂದು ಹೊಸ ಜಿಲ್ಲೆಯನ್ನು ಉದ್ಘಾಟನೆ ಮಾಡಿದ್ದೆವು. ನಾನು ಎರಡು ಬಾರಿ ಮುಖ್ಯಮಂತ್ರಿಯಾದೆ . ರಾಚಯ್ಯ ಹಾಗೂ ನಾನು ಮೌಢ್ಯವನ್ನು ನಂಬುತ್ತಿರಲಿಲ್ಲವಾದ್ದರಿಂದ ಇಲ್ಲಿಗೆ ಬಂದೇ ಘೋಷಣೆಯನ್ನು ಮಾಡಿದೆವುʼ ಎಂದರು.
ಶಾಲಾ ನಿರ್ಮಾಣ ಕಾರ್ಯದಲ್ಲಿ ತೊಡಗಿದವರನ್ನು ಅಭಿನಂದಿಸಿದ ಸಿಎಂ :
ಮರಿಸ್ವಾಮಿ ಅವರು ಈ ಊರಿನಲ್ಲಿ ಹುಟ್ಟಿ ಐಪಿಎಸ್ ಅಧಿಕಾರಿಯಾಗಿ, ಪೊಲೀಸ್ ಮಹಾನಿರ್ದೇಶಕರಾಗಿ ಈ ಊರಿಗೆ ಹಾಗೂ ಈ ಶಾಲೆಗೆ ಕೀರ್ತಿಯನ್ನು ತಂದಿದ್ದಾರೆ. ಈ ಊರಿನ ಜನ ಹೆಮ್ಮೆ ಪಡುವಂತೆ ಸರಕಾರಿ ಅಧಿಕಾರಿಯಾಗಿ ಕೆಲಸ ಮಾಡಿದ್ದಾರೆ. ಅವರು ಸತ್ತೇಗಾಲ ಗ್ರಾಮದ ಗ್ರಾಮಾಭಿವೃದ್ಧಿ ಸಂಘದ ಅಧ್ಯಕ್ಷರಾಗಿ ಈ ಶಾಲೆಯ ನಿರ್ಮಾಣಕ್ಕೆ ಆಸಕ್ತಿ ತಳೆದು ಇತರರ ಸಹಾಯವನ್ನು ಪಡೆದು ಶಾಲೆಯನ್ನು ನಿರ್ಮಾಣ ಮಾಡಿರುವುದನ್ನು ಮುಖ್ಯಮಂತ್ರಿಗಳೂ ಮೆಚ್ಚಿದರು.
ಚಾಮರಾಜನಗರದಲ್ಲಿ ಒಟ್ಟು ಪ್ರಾಥಮಿಕ ಶಾಲೆಗಳು 1102 ಶಾಲೆಗಳಿದ್ದು, ಆ ಪೈಕಿ 805 ಸರ್ಕಾರಿ ಶಾಲೆಗಳಿವೆ. ಸರ್ಕಾರವೇ ಎಲ್ಲವನ್ನೂ ಅಭಿವೃದ್ಧಿ ಪಡೆಸುವುದು ಕಷ್ಟವಾಗುತ್ತದೆ. ಇದರಲ್ಲಿ ಸಾರ್ವಜನಿಕರ ಜವಾಬ್ದಾರಿಯೂ ಇದೆ. ನಾವು ಓದಿದ ಶಾಲೆ ಹೊಸದಾಗಿ ನಿರ್ಮಾಣವಾಗಿ ಉದ್ಘಾಟನೆಯಾಗುತ್ತಿರುವಾಗ ಈ ಕೆಲಸ ಮಾಡಿದವರಿಗೆ ಆಗುವ ಖುಷಿ, ಸಮಾಧಾನ ಬೇರೆಯಾರಿಗೂ ಆಗಲು ಸಾಧ್ಯವಿಲ್ಲ. ಮರಿಸ್ವಾಮಿ ಹಾಗೂ ಅವರ ಕುಟುಂಬದವರಲ್ಲದೇ ಶಾಲಾ ನಿರ್ಮಾಣ ಕಾರ್ಯದಲ್ಲಿ ಸಹಕಾರ ನೀಡಿದ 63 ಜನರನ್ನು ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಅಭಿನಂದಿಸಿದರು.
ಚಾಮರಾಜನಗರ ಜಿಲ್ಲಾ ಉಸ್ತುವರಿ, ಪಶುಸಂಗೋಪನೆ ಹಾಗೂ ರೇಷ್ಮೆ ಸಚಿವ ಕೆ.ವೆಂಕಟೇಶ್, ಸಮಾಜ ಕಲ್ಯಾಣ ಸಚಿವ ಎಚ್.ಸಿ ಮಹದೇವಪ್ಪ, ಪ್ರಾಥಮಿಕ ಶಿಕ್ಷಣ ಮತ್ತು ಸಾಕ್ಷರತಾ ಇಲಾಕೆ ಸಚಿವ ಮಧು ಬಂಗಾರಪ್ಪ, ಶಾಸಕ ಎಂ.ಆರ್.ಮಂಜುನಾಥ್, ಕಾಡಾ ಅಧ್ಯಕ್ಷ ಮರಿಸ್ವಾಮಿ, ಶಾಲಾ ಕಟ್ಟಡದ ಸಮಗ್ರ ಅಭಿವೃದ್ಧಿಗೆ ಶ್ರಮಿಸಿದ ದಾನಿಗಳು ಹಾಗೂ ನಿವೃತ್ತ ಪೋಲೀಸ್ ಮಹಾನಿರ್ದೇಶಕರಾದ ಎಸ್.ಮರಿಸ್ವಾಮಿ ಮೊದಲಾದವರು ಉಪಸ್ಥಿತರಿದ್ದರು.