ಚಿಕ್ಕಮಗಳೂರು | ಕೆಮ್ಮಣ್ಣುಗುಂಡಿ ಗಿರಿಧಾಮದ ವ್ಯಾಪ್ತಿಯಲ್ಲಿ ಕಾಡ್ಗಿಚ್ಚು
ಚಿಕ್ಕಮಗಳೂರು : ಕಾಫಿನಾಡಿನಲ್ಲಿ ಬಿಸಿಲಝಳ ಹೆಚ್ಚುತ್ತಿರುವಂತೆಯೇ ಅರಣ್ಯ ಪ್ರದೇಶದ ವ್ಯಾಪ್ತಿಯ ಅಲ್ಲಲ್ಲಿ ಕಾಡ್ಗಿಚ್ಚು ಕೂಡ ಹೆಚ್ಚುತ್ತಿದೆ. ಕಳೆದ ಸೋಮವಾರ ರಾತ್ರಿ ತರೀಕೆರೆ ತಾಲೂಕು ವ್ಯಾಪ್ತಿ ಕೆಮ್ಮಣ್ಣುಗುಂಡಿ ಪ್ರವಾಸಿ ತಾಣದಲ್ಲಿನ ಪರ್ವತ ಪ್ರದೇಶದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ.
ಕಳೆದ ಕೆಲ ದಿನಗಳ ಹಿಂದೆ ತಾಲೂಕಿನ ಮುಳ್ಳಯಯ್ಯನಗಿರಿ ಅರಣ್ಯ ಪ್ರದೇಶದಲ್ಲಿ ಕಿಡಿಗೇಡಿಗಳು ಹಚ್ಚಿದ್ದ ಬೆಂಕಿಗೆ ನೂರಾರು ಎಕರೆ ಅರಣ್ಯ ಪ್ರದೇಶ, ಹುಲ್ಲುಗಾವಲು ಬೆಂಕಿಗೆ ಆಹುತಿಯಾಗಿದ್ದವು. ಕೆಮ್ಮಣ್ಣುಗುಂಡಿ ಗಿರಿಧಾಮದ ವ್ಯಾಪ್ತಿಯಲ್ಲಿರುವ ಹುಲ್ಲುಗಾವಲು, ಶೋಲಾ ಕಾಡಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಗೆ ಕಿಡಿಗೇಡಿಗಳು ಕಾರಣ ಎನ್ನಲಾಗುತ್ತಿದೆ. ಬೆಂಕಿ ನಂದಿಸಲು ಅರಣ್ಯ ಇಲಾಖೆ ಸಿಬ್ಬಂದಿ, ಅಗ್ನಿಶಾಮಕದಳದ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ತೀವ್ರ ಗಾಳಿಯಿಂದಾಗಿ ಬೆಂಕಿ ನಿಯಂತ್ರಣಕ್ಕೆ ತೊಂದರೆಯಾಗಿದ್ದು, ಸಿಬ್ಬಂದಿಗಳ ಹರಸಾಹಸದಿಂದಾಗಿ ಬೆಂಕಿಯ ತೀವ್ರತೆ ಕಡಿಮೆಯಾಗಿದೆ ಎಂದು ತಿಳಿದು ಬಂದಿದೆ.
ಕೆಮ್ಮಣ್ಣುಗುಂಡಿ ಝಡ್ ಪಾಯಿಂಟ್ ಪ್ರದೇಶ ಭದ್ರ ಹುಲಿ ಸಂರಕ್ಷಿತಾರಣ್ಯ ವ್ಯಾಪ್ತಿಯಲ್ಲಿ ಬರುತ್ತಿದ್ದು, ಇಲ್ಲಿನ ಶೋಲಾ ಹುಲ್ಲುಗಾವಲು, ಪ್ರಾಣಿ ಪಕ್ಷಿಗಳನ್ನು ಕಾಡ್ಗಿಚ್ಚು ಬಲಿ ಪಡೆದುಕೊಳ್ಳುತ್ತಿದೆ. ಈ ಬಾರಿ ಬಿಸಿಲಿನ ತೀವ್ರತೆ ಹೆಚ್ಚಾಗಿರುವುದರಿಂದ ಕಾಡ್ಗಿಚ್ಚು ಕಂಡು ಬರುವ ಪ್ರದೇಶಗಳಲ್ಲಿ ಅರಣ್ಯ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಅರಣ್ಯ ಪ್ರದೇಶದತ್ತ ತೆರಳುವ ಪ್ರವಾಸಿಗರಲ್ಲಿ ಈ ಸಂಬಂಧ ಜಾಗೃತಿ ಮೂಡಿಸಲು ಕ್ರಮಕೈಗೊಂಡಿದೆ.