ಬಾಬಾ ಬುಡನ್‍ಗಿರಿ ದರ್ಗಾದ ಗೋರಿಗಳಿಗೆ ಹಾನಿ ಪ್ರಕರಣ: ಫೆ.7ಕ್ಕೆ ವಿಚಾರಣೆ ಮುಂದೂಡಿದ ಕೋರ್ಟ್
ಚಿಕ್ಕಮಗಳೂರು: ಗುರು ದತ್ತಾತ್ರೇಯ ಬಾಬಾಬುಡನ್ ದರ್ಗಾದಲ್ಲಿ 2017ರಲ್ಲಿ ನಡೆದ ದತ್ತಜಯಂತಿ ವೇಳೆ ದರ್ಗಾದ ಆವರಣದಲ್ಲಿರುವ ಗೋರಿಗಳಿಗೆ ಹಾನಿ ಮಾಡಿದ ಪ್ರಕರಣದ ವಿಚಾರಣೆಯನ್ನು ಫೆ.7ಕ್ಕೆ ಮುಂದೂಡಿ ಇಲ್ಲಿನ ಹೆಚ್ಚುವರಿ ಸಿವಿಲ್ ಜೆಎಂಎಫ್‍ಸಿ ನ್ಯಾಯಾಲಯ ಆದೇಶಿಸಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ 14 ಜನ ಆರೋಪಿಗಳು ನ್ಯಾಯಾಲಯಕ್ಕೆ ಹಾಜರಾಗುವಂತೆ ಇತ್ತೀಚೆಗೆ ನ್ಯಾಯಾಲಯ ಸಮಸ್ಸ್ ಜಾರಿಗೊಳಿಸಿತ್ತು. ಸೋಮವಾರ ಪ್ರಕರಣದ ವಿಚಾರಣೆಯನ್ನು ನ್ಯಾಯಾಲಯ ಕೈಗೆತ್ತಿಕೊಂಡಿದ್ದು, ಸಂಘಪರಿವಾರದ 14 ಮಂದಿ ಆರೋಪಿಗಳ ಪೈಕಿ 12 ಜನ ಆರೋಪಿಗಳು ಸೋಮವಾರ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಚಿತ್ರದುರ್ಗದ ಸಂದೇಶ್ ಮತ್ತು ಹುಣಸೂರಿನ ರಾಮು ಜಾಮೀನು ಸಿಗದ ಕಾರಣಕ್ಕೆ ಹಾಜರಾಗಿರಲಿಲ್ಲ. ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಧೀಶ ವೀರಭದ್ರಪ್ಪ ಅವರು ಫೆ.7ಕ್ಕೆ ವಿಚಾರಣೆಯನ್ನು ಮುಂದೂಡಿದರು.
2017ರಲ್ಲಿ ನಡೆದ ಗೋರಿಗಳಿಗೆ ಹಾನಿ ಪ್ರಕರಣದ ದೋಷಾರೋಪಣಾ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಲು ರಾಜ್ಯ ಸರಕಾರ ಅನುಮತಿ ನೀಡಿದ್ದು, ಅದರಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ನ್ಯಾಯಾಲಕ್ಕೆ ಚಾರ್ಜ್‍ಶೀಟ್ ಸಲ್ಲಿಸಿದ್ದರು.
ಪೊಲೀಸ್ ಇಲಾಖೆ ನ್ಯಾಯಾಲಯಕ್ಕೆ ಚಾರ್ಜ್‍ಶೀಟ್ ಸಲ್ಲಿಸಲು ವಿಳಂಬ ಮಾಡಿದೆ. ಅಲ್ಲದೇ ಸರಿಯಾದ ಸಾಕ್ಷ್ಯಾಧಾರಗಳನ್ನು ಸಲ್ಲಿಸದಿರುವ ಕಾರಣ ನೀಡಿ ಚಾರ್ಜ್‍ಶೀಟ್ ರದ್ದುಗೊಳಿಸುವಂತೆ ಕೂರಿ ಮುಂದಿನ ಮೂರು ದಿನಗಳಲ್ಲಿ ಉಚ್ಚ ನಾಯ್ಯಾಲಯದಲ್ಲಿ ಮೇಲ್ಮನವಿ ಸಲ್ಲಿಸುವುದಾಗಿ ಆರೋಪಿತರ ಪರ ವಕೀಲ ಎಚ್.ಎಂ.ಸುಧಾಕರ್ ಸೋಮವಾರ ಸುದ್ದಿಗಾರರಿಗೆ ತಿಳಿಸಿದ್ದಾರೆ.