ಒತ್ತುವರಿ ತೆರವು ವಿರೋಧಿಸಿ ಕಳಸ ಬಂದ್ ಯಶಸ್ವಿ
ಕಳಸ : ಸದ್ಯಕ್ಕೆ ಯಾವುದೇ ಒತ್ತುವರಿ ಭೂಮಿಯನ್ನು ಖುಲ್ಲಾ ಮಾಡದಂತೆ ಸಿಎಂ ಸಿದ್ದರಾಮಯ್ಯ ಅವರು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಸೂಚಿಸಿದ್ದಾರೆ. ಈ ಬಗೆಗಿನ ರಾಜಕೀಯ ಪ್ರೇರಿತ ವದಂತಿಯನ್ನು ಯಾರೂ ನಂಬಬಾರದು ಎಂದು ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಮನವಿ ಮಾಡಿದ್ದಾರೆ.
ಒತ್ತುವರಿ ತೆರವು ವಿರುದ್ಧ ಬೆಳೆಗಾರರ ಸಂಘ ಮತ್ತು ಒತ್ತುವರಿ ಹೋರಾಟ ಸಮಿತಿ ಬುಧವಾರ ಕರೆ ನೀಡಿದ್ದ ಕಳಸ ಬಂದ್ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಧರಣಿ ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ ಅನೇಕ ಸರ್ವೆ ನಂಬರುಗಳಲ್ಲಿ ಡೀಮ್ಡ್ ಅರಣ್ಯ, ಕಂದಾಯ ಭೂಮಿಯ ಜೊತೆಗೆ ಸೆಕ್ಟನ್ 4 ಅಧಿಸೂಚನೆ ಕೂಡ ಮಾಡಿರುವುದರಿಂದ ಗೊಂದಲ ಹೆಚ್ಚಾಗಿದೆ. ಎಕರೆಗೆ 20 ಮರ ಇದ್ದರೇ ಅದು ಅರಣ್ಯ ಎಂಬ ಹುಚ್ಚು ಅಭಿಪ್ರಾಯದ ಆಧಾರಕ್ಕೆ ಮನ್ನಣೆ ಕೊಡುವುದಾದರೆ ಮಲೆನಾಡಿನ ಪ್ರತಿಯೊಂದು ಜಮೀನು ಕೂಡ ಅರಣ್ಯ ಆಗುತ್ತದೆ. ಆಗ ಕೃಷಿಕರೆಲ್ಲರೂ ಬೀದಿಪಾಲಾಗಬೇಕಾಗುತ್ತದೆ ಎಂದರು.
ದೇಶದ ಜನಸಂಖ್ಯೆ 35 ಕೋಟಿ ಇದ್ದಾಗ ಅರಣ್ಯ ಕಾನೂನು, ಕಾಯ್ದೆ ಮಾಡಲಾಗಿದೆ. ಸದ್ಯ 140 ಕೋಟಿ ಜನಸಂಖ್ಯೆ ಇದೆ. ಈ ಅವಧಿಯಲ್ಲಿ ಹಿಂದಿನ ಕಾಲದ ಕಾನೂನುಗಳು ಅಪ್ರಸ್ತುತ. ಈಗ ಅರಣ್ಯ, ಒತ್ತುವರಿ ಹೆಸರಿನಲ್ಲಿ ಕೃಷಿ ಭೂಮಿ ತೆರವು ಮಾಡಿದರೇ ದೇಶದ ಜನಸಂಖ್ಯೆಗೆ ಆಹಾರ ಪೂರೈಕೆ ಮಾಡಲು ಸಾಧ್ಯವಾಗುವುದಿಲ್ಲ ಎಂದರು.
ಮಲೆನಾಡಿನ ಕಾಫಿ ತೋಟಗಳು ಅರಣ್ಯದ ಸ್ವರೂಪದಲ್ಲೇ ಇರುತ್ತವೆ ಎಂಬುದನ್ನು ಸರಕಾರದ ಗಮನಕ್ಕೆ ತರಲಾಗಿದೆ. ಸದ್ಯಕ್ಕೆ ಯಾವುದೇ ಒತ್ತುವರಿ ಭೂಮಿಯನ್ನು ಖುಲ್ಲಾ ಮಾಡದಂತೆ ಸಿಎಂ ಸಿದ್ದರಾಮಯ್ಯ ಅವರು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಸೂಚಿಸಿದ್ದಾರೆ. ಈ ಬಗೆಗಿನ ರಾಜಕೀಯ ಪ್ರೇರಿತ ವದಂತಿಯನ್ನು ಯಾರೂ ನಂಬಬಾರದು ಎಂದು ಮನವಿ ಮಾಡಿದ ಅವರು, ಜಿಲ್ಲೆಯಲ್ಲಿ ಡೀಮ್ಡ್ ಅರಣ್ಯದ ವ್ಯಾಪ್ತಿಯಿಂದ 30 ಸಾವಿರ ಎಕರೆ ಭೂಮಿ ಕೈಬಿಡಲು ಅವಕಾಶ ಇದ್ದು, ಈ ಪ್ರಕ್ರಿಯೆ ಆರಂಭವಾಗಿದೆ. ಇದರಿಂದ ಶೇ.90 ಕೃಷಿಕರಿಗೆ ಕೃಷಿ ಭೂಮಿ ಗುತ್ತಿಗೆ ಆಧಾರದಲ್ಲಿ ಸಿಗಲಿದೆ ಎಂದರು.
ಕಾಂಗ್ರೆಸ್ ಮುಖಂಡ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ಕಳಸ ತಾಲೂಕಿನ ಸೆಕ್ಷನ್4 ಚಿತ್ರಣ ಗಮನಿಸಿದರೆ ಶೇ.80 ಭೂಮಿಯನ್ನು ಮೀಸಲು ಅರಣ್ಯ ಮಾಡುವ ಹುನ್ನಾರ ಕಂಡು ಬರುತ್ತದೆ. ಈ ಬಗ್ಗೆ ಪ್ರತಿಯೊಬ್ಬರೂ ತಮ್ಮ ಆಕ್ಷೇಪಣೆಯನ್ನು ಫಾರೆಸ್ಟ್ ಸೆಟ್ಲಮೆಂಟ್ ಅಧಿಕಾರಿಗೆ ಸಲ್ಲಿಸಬೇಕು. ಅರಣ್ಯ ಸಂರಕ್ಷಣೆ ಹೆಸರಿನಲ್ಲಿ ದಿನಕ್ಕೊಂದು ಕಾನೂನು ಜಾರಿ ಮಾಡಿ ಮಲೆನಾಡಿನಿಂದ ಜನರನ್ನು ಹೊರ ಹಾಕುವ ಸಂಚಿನ ವಿರುದ್ಧ ಎಲ್ಲರೂ ಪಾಕ್ಷಾತೀತವಾಗಿ ಧ್ವನಿ ಎತ್ತಬೇಕು. ಮನುಷ್ಯ ಕೂಡ ಅರಣ್ಯದ ಭಾಗ. ಕಾಡು ಉಳಿಯಬೇಕು, ಮನಷ್ಯ ಹಾಗೂ ವನ್ಯಜೀವಿಗಳೂ ನೆಮ್ಮದಿಯಿಂದ ಬದುಕುವಂತಾಗಬೇಕು. ಇದಕ್ಕೆ ಪೂರಕವಾಗಿ ಸರಕಾರ ಕಾಯ್ದೆ, ಕಾನೂನು ರೂಪಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಹೋರಾಟ ಸಮಿತಿ ಮುಖಂಡ ಜಿ.ಕೆ.ಮಂಜಪ್ಪಯ್ಯ, ಅವಿಭಕ್ತ ಕುಟುಂಬಗಳು ವಿಭಜನೆ ಆಗುತ್ತಿದ್ದು, ಅವರು ಆಸುಪಾಸಿನ ಸರಕಾರಿ ಭೂಮಿಯಲ್ಲಿ ಕೃಷಿ ಮಾಡಿದ್ದಾರೆ. ಜೀವನೋಪಾಯಕ್ಕಾಗಿ ಮಾಡಿದ ಒತ್ತುವರಿ ಭೂಕಬಳಿಕೆ ಅಲ್ಲ. ಅದು ಸಾಗುವಳಿ ಆಗಿದೆ. 1.15 ಲಕ್ಷ ಎಕರೆ ಕಂದಾಯ ಭೂಮಿಯನ್ನು ಡೀಮ್ಡ್ ಎಂದು ಆದೇಶ ಮಾಡುವಾಗ ಕೃಷಿ ಭೂಮಿಯನ್ನು ಹೊರಗಿಟ್ಟಿದ್ದರೇ ಈ ಸಮಸ್ಯೆ ಎದುರಾಗುತ್ತಿರಲಿಲ್ಲ. ಅರಣ್ಯ, ಕಂದಾಯ ಭೂಮಿಯ ಗಡಿಗುರುತು ಮಾಡದಿರುವುದು, ಅರಣ್ಯ ಇಲಾಖೆಯ ಸ್ವಾಧೀನದಲ್ಲಿಲ್ಲದ ಭೂಮಿಗೆ 4/1 ಅಧಿಸೂಚನೆ ಹೊರಡಿಸಿರುವುದರಿಂದ ಸಮಸ್ಯೆ ಎದುರಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಪ್ರಮೋದ್ ಮಧ್ವರಾಜ್ . ಬೆಳೆಗಾರರ ಸಂಘದ ಮುಖಂಡರಾದ ಜಯರಾಮ್, ಬಾಲಕೃಷ್ಣ, ಕೆ.ಆರ್.ಭಾಸ್ಕರ್, ಕೆ.ಆರ್.ಪ್ರಭಾಕರ್, ಶೇಷಗಿರಿ, ಶ್ರೇಣಿಕ, ರಾಜೇಂದ್ರ, ಕೆಜಿಎಫ್ ಉಪಾಧ್ಯಕ್ಷ ಎ.ಕೆ.ವಸಂತೇಗೌಡ, ಎಂ.ಬಿ.ಶೈಲೇಶ್, ಮಾಜಿ ಶಾಸಕ ಎಂ.ಪಿ.ಕುಮಾರಸ್ವಾಮಿ, ದೀಪಕ್ ದೊಡ್ಡಯ್ಯ, ರೈತ ಸಂಘದ ದಯಾಕರ್ ಸೇರಿದಂತೆ ಮತ್ತಿತರ ಮುಖಂಡರು ಧರಣಿಯಲ್ಲಿ ಭಾಗವಹಿಸಿದ್ದರು.
ಧರಣಿಗೂ ಮುನ್ನ ಕಳಸೇಶ್ವರ ದೇವಸ್ಥಾನದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಸಭೆಯಲ್ಲಿ 3 ಸಾವಿರಕ್ಕೂ ಹೆಚ್ಚು ಕೃಷಿಕರು ಭಾಗವಹಿಸಿದ್ದರು. ಬಂದ್ ಹಿನ್ನೆಲೆಯಲ್ಲಿ ಕಳಸ ಪಟ್ಟಣದಲ್ಲಿ ಬೆಳಗ್ಗೆಯಿಂದ ಸಂಜೆವರೆಗೆ ಎಲ್ಲ ಅಂಗಡಿ ಮುಂಗಟ್ಟುಗಳು, ಶಾಲಾ ಕಾಲೇಜುಗಳು ಮುಚ್ಚುವ ಮೂಲಕ ಸಾರ್ವಜನಿಕರು ಬಂದ್ ಯಶಸ್ವಿಗೆ ಸಹಕರಿಸಿದರು.
ಅರಣ್ಯಾಧಿಕಾರಿಗಳು ಜಿಲ್ಲೆಯಲ್ಲಿ ಒಂದಿಂಚು ಭೂಮಿಯನ್ನೂ ಖುಲ್ಲಾ ಮಾಡಲು ಬಿಡುವುದಿಲ್ಲ. ಈ ಬಗ್ಗೆ ಒತ್ತುವರಿದಾರರು ಆತಂಕ ಪಡುವ ಅಗತ್ಯವಿಲ್ಲ. ಅರಣ್ಯ ಇಲಾಖೆ ಅಧಿಕಾರಿಗಳು ಒತ್ತುವರಿ ಖುಲ್ಲಾ ಹೆಸರಿನಲ್ಲಿ ಜನರಿಗೆ ತೊಂದರೆ ನೀಡಲು ಮುಂದಾದರೇ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕೂರುತ್ತೇನೆ. ಕಾಫಿ, ಅಡಿಕೆ ಬೆಳೆಗಾರರೂ ಸೇರಿದಂತೆ ಜೀವನೋಪಾಯಕ್ಕೆ ಒತ್ತುವರಿ ಮಾಡಿರುವ ಭೂಮಿಯನ್ನು ತೆರವು ಮಾಡಲು ಮುಂದಾಗಿರುವುದು ಬೇಸರದ ಸಂಗತಿ. ಈ ಭಾಗದ ರೈತರು ಆತಂಕ ಪಡುವ ಅಗತ್ಯ ಇಲ್ಲ. ಸಂಸದನಾಗಿ ಅರಣ್ಯ ಒತ್ತುವರಿ ತೆರವು ಹೆಸರಿನಲ್ಲಿ ನಡೆಯುತ್ತಿರುವ ಕಿರುಕುಳದ ವಿರುದ್ಧ ನಾನು ಹೋರಾಡಲು ಬದ್ಧ. ರೈತರು ಈ ಸಂಬಂಧ ನಡೆಸುವ ಯಾವುದೇ ಹೋರಾಟಕ್ಕೂ ನನ್ನ ಬೆಂಬಲವಿದೆ. ಒತ್ತುವರಿ ತೆರವಿನ ವಿರುದ್ಧ ಈಗಾಗಲೇ ಸರಕಾರದೊಂದಿಗೆ ಮಾತನಾಡಿದ್ದು, ಸರಕಾರ ತೆರವಿಗೆ ಮುಂದಾದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ಕೂರುತ್ತೇನೆ.
- ಕೋಟ ಶ್ರೀನಿವಾಸ ಪೂಜಾರಿ, ಸಂಸದ