ಚಿಕ್ಕಮಗಳೂರು | ಸರಕಾರಿ ಜಮೀನು ತೆರವಿಗೆ ಮಾಜಿ ಸಚಿವ ಸಗೀರ್ ಅಹ್ಮದ್‍ರಿಗೆ ನೋಟಿಸ್

Update: 2024-09-15 14:23 GMT
ಸಾಂದರ್ಭಿಕ ಚಿತ್ರ

ಚಿಕ್ಕಮಗಳೂರು : ಚಿಕ್ಕಮಗಳೂರಿನಲ್ಲಿ ಸರಕಾರಿ ಹಾಗೂ ಅರಣ್ಯ ಭೂಮಿ ಒತ್ತುವರಿ ತೆರವು ವಿಚಾರ ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಒತ್ತುವರಿ ತೆರವಿಗೆ ಅಧಿಕಾರಿಗಳು ಮುಂದಾಗಿರುವುದು ಒತ್ತುವರಿದಾರರಲ್ಲಿ ಆತಂಕಕ್ಕೆ ಕಾರಣವಾಗಿದೆ. ಈ ಆತಂಕ ಮಾಜಿ ಸಚಿವ ಸಗೀರ್ ಆಹ್ಮದ್ ಅವರಿಗೂ ತಟ್ಟಿದ್ದು, ಸುಮಾರು 30 ಎಕರೆ ಸರಕಾರಿ ಭೂಮಿ ತೆರವು ಮಾಡಲು ಜಿಲ್ಲಾಧಿಕಾರಿ ನ್ಯಾಯಾಲಯ ಆದೇಶಿಸಿದೆ.

ತಾಲೂಕಿನ ಇನಾಂ ದತ್ತಾತ್ರೇಯ ಪೀಠ ಗ್ರಾಮದ ವಿವಿಧ ಸರ್ವೆ ನಂಬರ್‌ಗಳಲ್ಲಿ ಮಾಜಿ ಸಚಿವ ಸಗೀರ್ ಅಹ್ಮದ್ ಅವರು ಹೊಂದಿದ್ದ 29.39 ಎಕರೆ ಜಾಗವನ್ನು ಸರಕಾರಿ ಜಾಗ ಎಂದು ಜಿಲ್ಲಾಧಿಕಾರಿ ನ್ಯಾಯಾಲಯ ಆದೇಶಿಸಿದ್ದು, ನ್ಯಾಯಾಲಯದ ಆದೇಶದ ಮೇರೆಗೆ ಸರಕಾರಿ ಜಾಗದ ಒತ್ತುವರಿ ತೆರವಿಗೆ ತಾಲೂಕು ಆಡಳಿತ ನೋಟಿಸ್ ಜಾರಿ ಮಾಡಿದೆ.

ಇನಾಂ ದತ್ತಾತ್ರೇಯ ಪೀಠ ಗ್ರಾಪಂ ವ್ಯಾಪ್ತಿಯಲ್ಲಿ ಮಾಜಿ ಸಚಿವ ಸಗೀರ್ ಅಹ್ಮದ್ ಅವರು ಜಾಗ ಹೊಂದಿದ್ದು, ಈ ಜಾಗದಲ್ಲಿ ಕಾಫಿ ಬೆಳೆ ಬೆಳೆಯಲಾಗುತ್ತಿದೆ. ಈ ಜಾಗದ ಮಾಲಕತ್ವದ ವಿವಾದದ ಬಗ್ಗೆ ಜಿಲ್ಲಾಧಿಕಾರಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು. ವಿಚಾರಣೆ ಪೂರ್ಣಗೊಂಡ ಹಿನ್ನೆಲೆಯಲ್ಲಿ ಜಾಗದ ಮಾಲಕತ್ವವನ್ನು ಸಾಭೀತು ಪಡಿಸಲು ಅರ್ಜಿದಾರರು ವಿಫಲವಾಗಿರುವ ಹಿನ್ನೆಲೆಯಲ್ಲಿ ಸಗೀರ್ ಅಹ್ಮದ್ ಅವರ ವಶದಲ್ಲಿರುವ ಜಾಗವನ್ನು ಸರಕಾರಿ ಜಾಗ ಎಂದು ಜಿಲ್ಲಾಧಿಕಾರಿ ನ್ಯಾಯಾಲಯ ಆದೇಶಿಸಿದೆ.

ಮಾಜಿ ಸಚಿವ ಸಗೀರ್ ಅಹ್ಮದ್ ಅವರ ವಶದಲ್ಲಿರುವ ಜಾಗವನ್ನು ಆರ್‌ಟಿಸಿಯಲ್ಲಿ ಸರಕಾರಿ ಜಾಗ ಎಂದು ಮಾರ್ಪಡಿಸಲು ಚಿಕ್ಕಮಗಳೂರು ತಾಲೂಕು ಆಡಳಿತಕ್ಕೆ ಜಿಲ್ಲಾಧಿಕಾರಿ ನ್ಯಾಯಾಲಯ ಆದೇಶಿಸಿದ್ದು, ಈ ಜಾಗದಲ್ಲಿರುವ ರಸ್ತೆ, ದಾರಿಗಳ ಮಾಲಕತ್ವವೂ ಸರಕಾರದ್ದೇ ಆಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಈ ಆದೇಶದ ಹಿನ್ನೆಲೆಯಲ್ಲಿ ಕಂದಾಯ ಇಲಾಖೆ ಅಧಿಕಾರಿಗಳು ಇತ್ತೀಚೆಗೆ ಒತ್ತುವರಿ ತೆರವಿಗಾಗಿ ಸಗೀರ್ ಅಹ್ಮದ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News