ಚಿಕ್ಕಮಗಳೂರು | ಬ್ಯಾಗ್ ತರದ ವಿದ್ಯಾರ್ಥಿಗೆ ಉಪನ್ಯಾಸಕನಿಂದ ಹಲ್ಲೆ ಆರೋಪ
ಚಿಕ್ಕಮಗಳೂರು : ನಗರದಲ್ಲಿರುವ ಸರಕಾರಿ ಐಟಿಐ ಕಾಲೇಜಿನಲ್ಲಿ ಉಪನ್ಯಾಸಕರೊಬ್ಬರು ವಿದ್ಯಾರ್ಥಿಗೆ ಥಳಿಸಿರುವ ಘಟನೆ ಶುಕ್ರವಾರ ವರದಿಯಾಗಿದೆ. ಘಟನೆ ಖಂಡಿಸಿ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಪ್ರತಿಭಟನೆ ನಡೆಸಿದರು.
ಕಾಲೇಜಿನಲ್ಲಿ ಶುಕ್ರವಾರ ಪರೀಕ್ಷೆ ಇದ್ದ ಹಿನ್ನೆಲೆಯಲ್ಲಿ ಕೆಲ ಉಪನ್ಯಾಸಕರು ಬ್ಯಾಗ್ ಹಾಗೂ ಇತರ ವಸ್ತುಗಳನ್ನು ತರುವುದು ಬೇಡ ಎಂದು ತಿಳಿಸಿದ್ದರು ಎಂದು ಹೇಳಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿ ಮನೋಜ್ ಎಂಬಾತ ಬ್ಯಾಗ್, ಪುಸ್ತಕ ತರದೆ ಕಾಲೇಜಿಗೆ ಬಂದಿದ್ದ. ವಿದ್ಯಾರ್ಥಿ ಬ್ಯಾಗ್ ತರದೆ ಬರಿಗೈಲಿ ಕಾಲೇಜಿಗೆ ಬಂದಿದ್ದರಿಂದ ಕುಪಿತರಾದ ಉಪನ್ಯಾಸಕ ದಿವಾಕರ್ ಎಂಬವರು ಮನೋಜ್‌ಗೆ ಮನಸೋಇಚ್ಛೆ ಥಳಿಸಿದ್ದಾರೆ ಎನ್ನಲಾಗಿದೆ. ಹಲ್ಲೆಯಿಂದಾಗಿ ಮನೋಜ್ ಗಂಭೀರವಾಗಿ ಗಾಯಗೊಂಡಿದ್ದು, ಆತನ ಮುಖ, ಕೈ ಕಾಲಿಗೆ ಗಾಯವಾಗಿದ್ದರಿಂದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.
ಉಪನ್ಯಾಸಕನ ವರ್ತನೆ ಖಂಡಿಸಿ ವಿದ್ಯಾರ್ಥಿಗಳು ಕಾಲೇಜು ಆವರಣದಲ್ಲಿ ಕೆಲ ಹೊತ್ತು ಪ್ರತಿಭಟನೆ ನಡೆಸಿ ನ್ಯಾಯಕ್ಕೆ ಆಗ್ರಹಿಸಿದ್ದಾರೆ. ಈ ವೇಳೆ ಸ್ಥಳಕ್ಕೆ ಬಂದ ಪೊಲೀಸರ ಸಮ್ಮುಖದಲ್ಲಿ ಉಪನ್ಯಾಸಕ ಕ್ಷಮೆಯಾಚನೆ ಮಾಡಿದ್ದಾರೆ. ಸ್ಥಳದಲ್ಲಿ ಉಪನ್ಯಾಸಕ ಕ್ಷಮೆಯಾಚಿಸಿದರೂ ವಿದ್ಯಾರ್ಥಿಗಳು ತೃಪ್ತರಾಗದೆ ದೂರು ದಾಖಲಿಸಿಕೊಳ್ಳಲು ಒತ್ತಾಯಿಸಿದ್ದಾರೆ.
ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದು, ನಂತರ ಉಪನ್ಯಾಸಕ ಆಸ್ಪತ್ರೆಗೆ ತೆರಳಿ ವಿದ್ಯಾರ್ಥಿ ಬಳಿ ಕ್ಷಮೆಯಾಚಿಸಿದ್ದಾರೆಂದು ತಿಳಿದು ಬಂದಿದೆ.