ಚಿಕ್ಕಮಗಳೂರು | ಕೃಷಿ ಹೊಂಡದಲ್ಲಿ ಬಿದ್ದು ಬಾಲಕಿ ಮೃತ್ಯು
Update: 2025-03-25 19:10 IST

ಚಿಕ್ಕಮಗಳೂರು : ಕೃಷಿ ಹೊಂಡದಲ್ಲಿ ಬಿದ್ದು ಬಾಲಕಿಯೊಬ್ಬಳು ಮೃತಪಟ್ಟಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ಆಲ್ದೂರು ಹೋಬಳಿಯ ಬಾರ್ಗಲ್ ಗ್ರಾಮದಲ್ಲಿ ನಡೆದಿದೆ.
ಬಾರ್ಗಲ್ ಗ್ರಾಮದ ತಿಮ್ಮಪ್ಪ ಎಂಬವವರ ಮಾಲಕತ್ವದ ನರ್ಸರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಹಾವೇರಿ ದಶರಥಕೊಪ್ಪ ಗ್ರಾಮದ ಸೋಮಪ್ಪ ಮಂಜಮ್ಮ ದಂಪತಿ ಪುತ್ರಿ ಕಾವ್ಯಾ (10) ಸೋಮವಾರ ಮಧ್ಯಾಹ್ನದಿಂದ ಕಾಣೆಯಾಗಿದ್ದು, ಮಂಗಳವಾರ ಕೃಷಿಹೊಂಡದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದೆ ಎನ್ನಲಾಗಿದೆ.
ನರ್ಸರಿ ಪಕ್ಕದಲ್ಲಿದ್ದ ಕೃಷಿಹೊಂಡದಲ್ಲಿ ಬಾಲಕಿಯ ಮೃತದೇಹ ಪತ್ತೆಯಾಗಿದ್ದು, ಅಗ್ನಿಶಾಮಕ ದಳದ ನೆರವಿನೊಂದಿಗೆ ಮೃತ ದೇಹವನ್ನು ಮಂಗಳವಾರ ಹೊರ ತೆಗೆಯಲಾಗಿದೆ.
ಮರಣೋತ್ತರ ಪರೀಕ್ಷೆಯನ್ನು ನಡೆಸಿ ಬಾಲಕಿಯ ಮೃತ ದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗಿದ್ದು, ಆಲ್ದೂರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ತಿಳಿದು ಬಂದಿದೆ.