ದ.ಕ. ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮ: ವಿವಿಧ ಯೋಜನೆಯ ಗುರಿಗಿಂತ ಅರ್ಜಿಗಳ ಸಂಖ್ಯೆಯೇ ಅಧಿಕ!
ಮಂಗಳೂರು, ಅ.24: ದ.ಕ. ಜಿಲ್ಲಾ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು 2023-24ನೇ ಸಾಲಿನ ವಿವಿಧ ಯೋಜನೆಯಡಿ ಭೌತಿಕ ಗುರಿಗಿಂತ ಸ್ವೀಕರಿಸಲಾದ ಅರ್ಜಿಗಳ ಸಂಖ್ಯೆಯೇ ಅಧಿಕವಾಗಿದೆ. ಇದರಿಂದ ಅರ್ಜಿ ಸಲ್ಲಿಸಿಯೂ ಯೋಜನೆಯನ್ನು ದಕ್ಕಿಸಿಕೊಳ್ಳಲಾಗದ ಅರ್ಜಿದಾರರು ತೀವ್ರ ಅಸಮಾಧಾನಿತರಾಗಿದ್ದಾರೆ. ಸರಕಾರದ ಕಾರ್ಯವೈಖರಿಯ ಬಗ್ಗೆ ಆಕ್ರೋಶಿತರಾಗಿದ್ದಾರೆ.
ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮವು ಅರಿವು, ಅರಿವು ನವೀಕರಣ, ಅರಿವು ವಿದೇಶಿ ಸಾಲ, ಶ್ರಮಶಕ್ತಿ, ಶ್ರಮಶಕ್ತಿ ವಿಶೇಷ ಮಹಿಳಾ ಯೋಜನೆ, ಸ್ವಾಲವಂಬಿ ಸಾರಥಿ ಯೋಜನೆ-ಆಟೊ ಖರೀದಿ ಯೋಜನೆ, ಗಂಗಾ ಕಲ್ಯಾಣ ಯೋಜನೆ, ವೃತ್ತಿ ಪ್ರೋತ್ಸಾಹ, ಸಮುದಾಯ ಆಧಾರಿತ ತರಬೇತಿ ಯೋಜನೆ, ಸ್ವಯಂ ಉದ್ಯೋಗ ಯೋಜನೆ ಹೀಗೆ 9 ಯೋಜನೆಗಳಿಗೆ 2023-24ನೇ ಸಾಲಿನಲ್ಲಿ 1,500 ಫಲಾನುಭವಿಗಳ ಆಯ್ಕೆಗೆ ಗುರಿ ನಿಗದಿಪಡಿಸಿತ್ತು. ಆದರೆ ಸಲ್ಲಿಕೆಯಾದ ಅರ್ಜಿಗಳ ಸಂಖ್ಯೆ ಬರೋಬ್ಬರಿ 24,985. ಅಂದರೆ 1,500 ಫಲಾನಭವಿಗಳನ್ನು ಆಯ್ಕೆ ಮಾಡಿದರೂ 23,485 ಮಂದಿ ಅರ್ಜಿದಾರರಿಗೆ ಯಾವುದೇ ಯೋಜನೆಯ ಭಾಗ್ಯವಿಲ್ಲವಾಗಿದೆ.
ಕೆಎಂಡಿಸಿ ಮಾತ್ರವಲ್ಲ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ವಿವಿಧ ಯೋಜನೆಗಳ ಅನುಷ್ಠಾನಕ್ಕೆ ಹಾಕಲಾದ ಸರಕಾರದ ಗುರಿ ಕೂಡಾ ತೀರಾ ಕಡಿಮೆಯಾಗಿದ್ದು, ಅದಕ್ಕೆ ಸಲ್ಲಿಕೆಯಾಗುವ ಅರ್ಜಿಗಳ ಸಂಖ್ಯೆಯು ಅಧಿಕವಾಗಿರುತ್ತದೆ. ಅರ್ಜಿ ಸಲ್ಲಿಸಿದ ಎಲ್ಲಾ ಅರ್ಹರಿಗೂ ಫಲಾನುಭವಿಗಳಾಗಲು ಸಾಧ್ಯವಾಗದಿರುವುದು ವಿಪರ್ಯಾಸವಾಗಿದೆ.
ಯೋಜನೆಗೆ ಅರ್ಜಿ ಆಹ್ವಾನಿಸಿದ ತಕ್ಷಣ ಜನರು ದಾಖಲೆಗಳನ್ನೆಲ್ಲಾ ಸಿದ್ಧಪಡಿಸಿ, ಕೆಲಸಕ್ಕೆ ರಜೆ ಹಾಕಿ, ಸೈಬರ್ ಸೆಂಟರ್‌ಗಳ ಮುಂದೆ ಸಾಲುಗಟ್ಟಿ ನಿಂತು ನೂರಿನ್ನೂರು ರೂಪಾಯಿ ವ್ಯಯಿಸಿ ಅರ್ಜಿ ಹಾಕಿದರೂ ಕೊನೆಗೆ ‘ಭೌತಿಕ ಗುರಿ’ಯ ಸಮಸ್ಯೆಯಿಂದಾಗಿ ಯೋಜನೆಯನ್ನು ದಕ್ಕಿಸಿಕೊಳ್ಳಲಾಗದೆ ಹಲವರು ಪರಿತಪಿಸುತ್ತಿರುವುದು ಸಾಮಾನ್ಯವಾಗಿದೆ.
ಈ ಯೋಜನೆಗಳ ಫಲಾನುಭವಿಗಳ ಆಯ್ಕೆಯು ಆಯಾ ಕ್ಷೇತ್ರದ ಶಾಸಕರ ಶಿಫಾರಸುಗಳನ್ನು ಅವಲಂಬಿಸಿರುತ್ತದೆ. ಹಿಂದೆ ಪ್ರತಿಯೊಂದು ಯೋಜನೆಯ ಭೌತಿಕ ಗುರಿ ವಿಧಾನಸಭಾ ಕ್ಷೇತ್ರವಾರು 15ರಿಂದ 20 ಇತ್ತು. ಆದರೆ ಇದೀಗ ಅದು ಕೇವಲ 2-3ಕ್ಕೆ ಸೀಮಿತವಾಗಿದೆ. ಸೀಮಿತ ಗುರಿಯ ಬಗ್ಗೆ ಮಾಹಿತಿ ಇಲ್ಲದ ಜನರು ಸಾಲುಗಟ್ಟಿ ಅರ್ಜಿ ಸಲ್ಲಿಸಿ ಕೊನೆಗೆ ನಿರಾಶರಾಗುವುದು ಕಂಡು ಬರುತ್ತದೆ.
ಪ್ರತಿಯೊಂದು ತಾಲೂಕಿನಲ್ಲೂ ಮಾಹಿತಿ ಕೇಂದ್ರವನ್ನು ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯು ತೆರೆಯಬೇಕು. ಆದರೆ ದ.ಕ. ಜಿಲ್ಲೆಯಲ್ಲಿ ಹೊಸದಾಗಿ ಅಸ್ತಿತ್ವಕ್ಕೆ ಬಂದ ಉಳ್ಳಾಲ, ಮುಲ್ಕಿ, ಮೂಡುಬಿದಿರೆ, ಕಡಬ ತಾಲೂಕುಗಳಲ್ಲಿ ಅಲ್ಪಸಂಖ್ಯಾತರ ಇಲಾಖೆಗೆ ಸಂಬಂಧಿಸಿದ ಮಾಹಿತಿ ಕೇಂದ್ರಗಳೇ ಇಲ್ಲ. ಮಂಗಳೂರು, ಬೆಳ್ತಂಗಡಿ, ಪುತ್ತೂರು, ಸುಳ್ಯದ ಮಾಹಿತಿ ಕೇಂದ್ರವು ಸರಕಾರಿ ಕಟ್ಟಡದಲ್ಲಿದೆ. ಆದರೆ ಬಂಟ್ವಾಳಕ್ಕೆ ಇನ್ನೂ ಸ್ವಂತ ಕಟ್ಟಡದ ಭಾಗ್ಯ ಸಿಕ್ಕಿಲ್ಲ. ಇದು ಕೂಡ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಬಗ್ಗೆ ಜನರಿಗೆ ಮಾಹಿತಿ ಪಡೆಯಲು ಸಮಸ್ಯೆಯಾಗಿ ಪರಿಣಮಿಸಿದೆ.
ಸರಕಾರ ನಮಗೆ ನಿಗದಿಪಡಿಸಿದ ಗುರಿಯನ್ನು ಸಾಧಿಸುವಲ್ಲಿ ಯಶಸ್ವಿಯಾಗಿದ್ದೇವೆ. ಯೋಜನೆಯ ಗುರಿಯು ಕಡಿಮೆಯಾಗಿದ್ದು, ಅದನ್ನು ಹೆಚ್ಚಿಸ ಬೇಕು ಎಂಬ ಬೇಡಿಕೆ ಇದೆ. ಅದನ್ನು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಭೌತಿಕ ಗುರಿಯನ್ನು ಸರಕಾರ ಹೆಚ್ಚಿಸಿದರೆ ನಾವು ಅದನ್ನು ಅನುಷ್ಠಾನಗೊಳಿಸಲು ಬದ್ಧರಾಗಿದ್ದೇವೆ.
-ಯಶೋಧರ,ವ್ಯವಸ್ಥಾಪಕರು, ಕೆಎಂಡಿಸಿ ದ.ಕ.ಜಿಲ್ಲೆ
ಕಾಂಗ್ರೆಸ್ ಸರಕಾರ ಅಲ್ಪಸಂಖ್ಯಾತರ ಅಭಿವೃದ್ಧಿಗೆ ನಾನಾ ಯೋಜನೆಗಳನ್ನು ಪ್ರಕಟಿಸುತ್ತಿದೆ. ಆದರೆ ಭೌತಿಕ ಗುರಿ ಮಾತ್ರ ತೀರಾ ಕಡಿಮೆಯಾಗಿದೆ. ಅದನ್ನು ಹೆಚ್ಚಿಸಬೇಕು. ಇಲ್ಲದಿದ್ದರೆ ನಾವು ಕಾಟಾಚಾರಕ್ಕೆ ಅರ್ಜಿ ಸಲ್ಲಿಸಿದಂತಾಗುತ್ತದೆ.
-ಆದಂ ಹುಸೈನ್, ಅರ್ಜಿದಾರರು, ಮಂಗಳೂರು