ಮಂಗಳೂರು | ಗ್ರೇಸ್ ಮಿನಿಸ್ಟ್ರಿ ವತಿಯಿಂದ ಪಸ್ಕ ಹಬ್ಬ, ಮಂಜೂಷ ಪೆಟ್ಟಿಗೆ ಸ್ಥಾಪನೆ

ಮಂಗಳೂರು: ಗ್ರೇಸ್ ಮಿನಿಸ್ಟ್ರಿ ಸಂಸ್ಥೆಯ ವತಿಯಿಂದ ಪಸ್ಕ ಹಬ್ಬ ಹಾಗೂ ಒಡಂಬಡಿಕೆ ಮಂಜೂಷ ಪೆಟ್ಟಿಗೆಯ ಸ್ಥಾಪನೆ ನಗರ ಹೊರವಲಯದ ವಳಚ್ಚಿಲ್ ಮತ್ತು ಬೆಂಗಳೂರಿನ ಬೂದಿಗೆರೆಯಲ್ಲಿ ನಡೆಯಿತು.
ಪಸ್ಕ ಹಬ್ಬ ಸಂದರ್ಭ ಗುಡ್ ಫ್ರೈಡೇ ಸಡಗರದ ಜೊತೆಗೆ ಇದೇ ಮೊದಲ ಬಾರಿಗೆ ಚರ್ಚ್ ಆವರಣದಲ್ಲಿ ಬೈಬಲ್ ಪ್ರೇರಿತ ಒಡಂಬಡಿಕೆ ಮಂಜೂಷ ಪೆಟ್ಟಿಗೆಯನ್ನು ಬರಮಾಡಿಕೊಂಡು ಏಳು ಸುತ್ತುಗಳ ಮೆರವಣಿಗೆಯ ನಂತರ ಬೆಂಗಳೂರಿನಲ್ಲಿ ಅನಾವರಣಗೊಳಿಸಲಾಯಿತು.
ದೇಶ, ವಿದೇಶ ಹಾಗೂ ರಾಜ್ಯದ ಹಲವು ಜಿಲ್ಲೆಗಳಿಂದ ಸಾವಿರಾರು ಭಕ್ತರು ಪಸ್ಕ ಹಬ್ಬದಲ್ಲಿ ಪಾಲ್ಗೊಂಡಿ ದ್ದರು. ಬಿಷಪ್ ಡಾ. ಆಂಡ್ರೋ ರಿಚರ್ಡ್ ಪಸ್ಕ ಹಾಗು ಮಂಜೂಷ ಪೆಟ್ಟಿಗೆಯ ಮಹತ್ವವನ್ನ ಭಕ್ತರಿಗೆ ಸಾರಿದರು.
ಈ ವೇಳೆ ಗ್ರೇಸ್ ಮಿನಿಸ್ಟ್ರಿ ನಿರ್ದೇಶಕ ಹಾಗೂ ಸಂಸ್ಥಾಪಕ ಡಾ. ಆಂಡ್ರ್ಯೂ ರಿಚರ್ಡ್ ಮಾತನಾಡಿ ಈ ವರ್ಷ ಪಸ್ಕ ಹಬ್ಬದ ಜೊತೆಗೆ ದೇಶದಲ್ಲೇ ಪ್ರಪ್ರಥಮ ಬಾರಿಗೆ ಮಂಜೂಷ ಪೆಟ್ಟಿಗೆಯ ಸ್ಥಾಪನೆ ಮಾಡಿರುವ ಸಂಸ್ಥೆ ಎಂದು ಹೇಳುವುದಕ್ಕೆ ಸಂತೋಷಪಡುತ್ತೇನೆ ಎಂದರು.
ಹಬ್ಬದ ಪ್ರಯುಕ್ತ ಬಡ ಮಕ್ಕಳ ಉಚಿತ ಶಿಕ್ಷಣಕ್ಕಾಗಿ ನೆರವು ನೀಡುವ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ಸಮುದಾಯದ ಮಕ್ಕಳನ್ನು ಮತ್ತಷ್ಟು ಉತ್ತೇಜಿಸುವ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿದೆ. 2024ರ ಪಸ್ಕ ಹಬ್ಬ ಆಚರಿಸಿದ ಸಂದರ್ಭ ಬಡ ಚರ್ಚ್ ಹಣಕಾಸಿನ ತೊಂದರೆಯಿಂದಾಗಿ ಅರ್ಧದಲ್ಲಿ ನಿಂತು ಹೋಗಿತ್ತು, ಗ್ರೇಸ್ ಮಿನಿಸ್ಟ್ರಿ ಸಂಸ್ಥೆಯಿಂದ 8 ಲಕ್ಷ ರೂ. ದೇಣಿಗೆ ನೀಡುವ ಮೂಲಕ ಆ ಚರ್ಚಿನ ಸಂಪೂರ್ಣ ನಿರ್ಮಾಣಕ್ಕೆ ಸಂಸ್ಥೆ ದಾರಿ ಮಾಡಿಕೊಟ್ಟಿದೆ ಎಂದರು.
ಪ್ರತಿ ವರ್ಷ ಪಸ್ಕ ಹಬ್ಬ ಆಯೋಜಿಸಲಾಗುತ್ತಿದ್ದು, ಆ ಮೂಲಕ ಬಡವರು, ಅನಾಥರು, ಬಡ ವಿದ್ಯಾರ್ಥಿ ಗಳಿಗೆ ಸಂಸ್ಥೆ ವತಿಯಿಂದ ನೆರವು ನೀಡುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ ಎಂದರು.