ಕಲ್ಲಾಪುವಿನಿಂದ ಸಜಿಪ ವರೆಗೆ ನೇತ್ರಾವತಿ ನದಿ ತೀರದಲ್ಲಿ 160 ಕೋಟಿ ರೂ.ನ ಸಂಪರ್ಕ ರಸ್ತೆ ನಿರ್ಮಾಣ: ಯು.ಟಿ.ಖಾದರ್

ವಿಧಾನಸಭಾ ಸ್ಪೀಕರ್ ಯು.ಟಿ.ಖಾದರ್
ಮಂಗಳೂರು, ಎ.27: ಕಲ್ಲಾಪುವಿನಿಂದ ಸಜಿಪದ ವರೆಗಿನ ನೇತ್ರಾವತಿ ನದಿ ತೀರದಲ್ಲಿ ಸುಮಾರು 160 ಕೋಟಿ ರೂ. ಯೋಜನೆಯ ಸಂಪರ್ಕ ರಸ್ತೆ ನಿರ್ಮಾಣ ಮಾಡಲು ಸರಕಾರ ಅನುಮೋದನೆ ನೀಡಿದೆ. ಈಗಾಗಲೇ 20 ಕೋಟಿ ರೂ. ಬಿಡುಗಡೆ ಮಾಡಿದೆ. ಕ್ಷೇತ್ರದ ಅಭಿವೃದ್ಧಿಯ ಹಿನ್ನೆಲೆಯಲ್ಲಿ ಇದೊಂದು ಮಹತ್ವದ ಯೋಜನೆಯಾಗಿದೆ ಎಂದು ಕರ್ನಾಟಕ ವಿಧಾನಸಭಾ ಅಧ್ಯಕ್ಷ, ಮಂಗಳೂರು ಶಾಸಕ ಯು.ಟಿ.ಖಾದರ್ ತಿಳಿಸಿದ್ದಾರೆ.
ಅವರು ರವಿವಾರ ನಗರದ ಸರ್ಕ್ಯೂಟ್ ಹೌಸ್ ನಲ್ಲಿ ಕರೆದ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತಿದ್ದರು.
ಕಲ್ಲಾಪು, ರಾಣಿಪುರ, ಹರೇಕಳ ನದಿ ತೀರದ ರಸ್ತೆ ಅಭಿವೃದ್ಧಿಯಾದರೆ ಹರೇಕಳ ಕಿಂಡಿ ಅಣೆಕಟ್ಟುವರೆಗೆ ಸ್ಥಳೀಯ ಪರಿಸರದ ಜನತೆಗೆ ಹಾಗೂ ಸಂಪರ್ಕ ರಸ್ತೆಯಾಗಿ ಅನುಕೂಲವಾಗಲಿದೆ. ಈ ಸಂದರ್ಭದಲ್ಲಿ ಪಾವೂರು -ಉಳಿಯ ತೂಗುಸೇತುವೆ ನಿರ್ಮಾಣಕ್ಕೆ 12 ಕೋಟಿ ರೂ. ಬಿಡುಗಡೆಯಾಗಿದೆ. ಕೋಟೆಪುರ -ಬೋಳಾರ ಸೇತುವೆ ನಿರ್ಮಾಣಕ್ಕೆ 220 ಕೋಟಿ ರೂ. ಬಿಡುಗಡೆಯಾಗಿದೆ. ಸಣ್ಣ ನೀರಾವರಿ ಯೋಜನೆ ಸಚಿವರು ಹಾಗೂ ಮುಖ್ಯಮಂತ್ರಿಯ ಮೂಲಕ ಅನುಮತಿ ದೊರೆತು ಈಗಾಗಲೇ 40 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.
ಕರಾವಳಿಯ ಕಡಲ್ಕೊರೆತ ತಡೆಗೆ ಬಜೆಟ್ ನಲ್ಲಿ ಒಟ್ಟು ರೂ.200 ಕೋಟಿ ನಿಗದಿಪಡಿಸಲಾಗಿದೆ. ಈ ಪೈಕಿ ಉಳ್ಳಾಲ ಸೋಮೇಶ್ವರ ವ್ಯಾಪ್ತಿಯ ಕಡಲ್ಕೊರೆತ ಪೀಡಿತ ಪ್ರದೇಶಗಳಲ್ಲಿ ತಡೆಗೆ ರೂ.70 ಕೋಟಿ ಅಂದಾಜು ಯೋಜನೆಯ ಪ್ರಸ್ತಾವವನ್ನು ರಾಜ್ಯ ಸರಕಾರಕ್ಕೆ ಅಧಿಕಾರಿಗಳ ಮೂಲಕ ಸಲ್ಲಿಸಲಾಗಿದೆ ಎಂದು ಸ್ಪೀಕರ್ ಹೇಳಿದರು.
ಮಂಗಳೂರು ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಗ್ರಾಮ ಪಂಚಾಯತ್ ಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿಗಾಗಿ ತಲಾ ಒಂದರಿಂದ ಒಂದೂವರೆ ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಉಳ್ಳಾಲ ನಗರಸಭೆ ಮತ್ತು ಸೋಮೇಶ್ವರ ಪುರಸಭೆಯ ಅಭಿವೃದ್ಧಿ ಯೋಜನೆಗಳಿಗೆ ತಲಾ 10 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಯು.ಟಿ.ಖಾದರ್ ತಿಳಿಸಿದ್ದಾರೆ.
ದೇಶವನ್ನು ದುರ್ಬಲಗೊಳಿಸುವ ಶಕ್ತಿಗಳಿಗೆ ಅವಕಾಶ ನೀಡಬಾರದು
ಕಾಶ್ಮೀರದ ಪಹಲ್ಗಾಮ್ ನಲ್ಲಿ ಉಗ್ರಗಾಮಿಗಳು ನಡೆಸಿದ ಕೃತ್ಯ ದೇಶದಲ್ಲಿ ಅಶಾಂತಿ ಸೃಷ್ಟಿಸುವ ಮತ್ತು ದೇಶವನ್ನು ದುರ್ಬಲಗೊಳಿಸುವ ಶಕ್ತಿಗಳ ತಂತ್ರವಾಗಿದೆ. ಇಂತಹ ದುಷ್ಟ ಶಕ್ತಿಗಳಿಗೆ ಅವಕಾಶ ನೀಡಬಾರದು. ಅವರನ್ನು ಮಟ್ಟ ಹಾಕಬೇಕು ಎಂದು ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.
ದೇಶದ ಜನರು ಈ ಸಂದರ್ಭದಲ್ಲಿ ಒಗ್ಗಟ್ಟಿನಲ್ಲಿರಬೇಕಾಗಿದೆ. ಕೇಂದ್ರ ಸರಕಾರ ಎಲ್ಲಾ ವಿಪಕ್ಷಗಳನ್ನು ಕರೆದು ತೀರ್ಮಾನಿ ಸಬೇಕಾಗಿದೆ. ಈ ನಿಟ್ಟಿನಲ್ಲಿ ಎಲ್ಲರ ಸಹಕಾರ ಅಗತ್ಯ ಎಂದು ಕಾಶ್ಮೀರದ ಉಗ್ರಗಾಮಿಗಳು ಪ್ರವಾಸಿಗರ ಮೇಲೆ ನಡೆಸಿದ ದಾಳಿಯ ಬಗ್ಗೆ ಯು.ಟಿ.ಖಾದರ್ ಸುದ್ದಿ ಗಾರರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ್ದಾರೆ.