ಡಿ.14: ಆಟಿಸಂ ಬಾಧಿತ ಮಕ್ಕಳು, ಹೆತ್ತವರಿಗಾಗಿ ‘ಕಲಾಸೌರಭ-24’

Update: 2024-12-11 16:26 GMT

ಉಡುಪಿ: ಆಟಿಸಂ ಸೊಸೈಟಿ ಆಫ್ ಉಡುಪಿ, ವಿವಿಧ ಸ್ವಯಂಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಆಟಿಸಂ ಬಾಧಿತ ಮಕ್ಕಳು, ಅವರ ಪೋಷಕರು, ಶಿಕ್ಷಕರು, ದಾದಿಯರು ಹಾಗೂ ವೈದ್ಯಕೀಯ ವೃತ್ತಿಪರರಲ್ಲಿ ಆಟಿಸಂ ಕುರಿತಂತೆ ಜಾಗೃತಿ ಮೂಡಿಸುವ ಸಲುವಾಗಿ ಇದೇ ಡಿ.14ರ ಶನಿವಾರ ಬನ್ನಂಜೆಯಲ್ಲಿರುವ ನಾರಾಯಣ ಗುರು ಸಭಾಭವನದಲ್ಲಿ ಒಂದು ದಿನದ ‘ಕಲಾಸೌರಭ’ ಕಾರ್ಯಕ್ರಮವನ್ನು ಬೆಳಗ್ಗೆ 9 ರಿಂದ ಸಂಜೆ 4:30ರವರೆಗೆ ಹಮ್ಮಿಕೊಂಡಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಅಮಿತಾ ಪೈ ತಿಳಿಸಿದ್ದಾರೆ.

ಉಡುಪಿಯ ಪ್ರೆಸ್‌ಕ್ಲಬ್‌ನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಇತ್ತೀಚಿನ ವರ್ಷಗಳಲ್ಲಿ ಆಟಿಸಂ ಪೀಡಿತ ಮಕ್ಕಳ ಸಂಖ್ಯೆಯಲ್ಲಿ ಭಾರೀ ಹೆಚ್ಚಳ ಕಂಡುಬರುತಿದ್ದು, ಮಕ್ಕಳ ಬೆಳವಣಿಗೆಗೆ ಅಗತ್ಯ ವಿರುವ ಚಿಕಿತ್ಸೆಗಳ ಬಗ್ಗೆ ಅರಿವು ಮೂಡಿಸಲು ಪೋಷಕರು ಹಾಗೂ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸೊಸೈಟಿ ನಿರಂತರವಾಗಿ ಪ್ರಯತ್ನಿಸುತ್ತಿದೆ ಎಂದರು.

ಈ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳನ್ನು ಸಂಸ್ಥೆ ಆಯೋಜಿಸುತಿದ್ದು, ಕಳೆದೆರಡು ವರ್ಷಗಳಿಂದ ಹಮ್ಮಿಕೊಳ್ಳಲಾಗು ತ್ತಿರುವ ಆಟಿಸಂ ಬಾಧಿತ ಹಾಗೂ ವಿಶೇಷ ಮಕ್ಕಳ ಪ್ರತಿಭಾ ಪ್ರದರ್ಶನದ ‘ಕಲಾಸೌರಭ’ ಇವುಗಳಲ್ಲಿ ಒಂದು. ಈ ಬಾರಿ ಕಲಾಸೌರಭ-3 ಕಾರ್ಯಕ್ರಮ ‘ಸಂಬಂಧ’ ಎಂಬ ವಿಷಯವನ್ನು ಆಧರಿಸಿ ಡಿ.14ರಂದು ನಡೆಯಲಿದೆ ಎಂದರು.

ಆಟಿಸಂ ಬಾಧಿತ ಮಕ್ಕಳ ಸೃಜನಶೀಲತೆ ಹಾಗೂ ಅವರಲ್ಲಿರುವ ಪ್ರತಿಭೆಗಳನ್ನು ಅನಾವರಣಗೊಳಿಸುವುದು ಹಾಗೂ ಅವರ ಪೋಷಕರನ್ನು ಉತ್ತೇಜಿಸಲು ಅವರಿಗೂ ವೇದಿಕೆಯನ್ನು ಒದಗಿಸುವುದು ಈ ಬಾರಿಯ ವಿಶೇಷವಾಗಿದೆ. ಈ ಮೂಲಕ ಪೋಷಕರಲ್ಲಿ ಸಾಮಾಜಿಕ ಕಳಂಕದ ಹಿಂಜರಿಕೆ ಹೋಗಲಾಡಿಸಿ ವಿಶೇಷ ಮಗುವಿನೊಂದಿಗೆ ಸಮಾಜದಲ್ಲಿ ಗುರುತಿಸಿ ಕೊಳ್ಳು ವಂತೆ ಮಾಡುವುದು ನಮ್ಮಉದ್ದೇಶವಾಗಿದೆ ಎಂದು ಅಮಿತಾ ಪೈ ತಿಳಿಸಿದರು.

ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್ (ಎಎಸ್‌ಡಿ) ಮಕ್ಕಳ ಮೆದುಳಿನ ಬೆಳವಣಿಗೆಗೆ ಸಂಬಂಧಿಸಿದ ನರವೈಜ್ಞಾನಿಕ ವೈವಿಧ್ಯತೆ ಯನ್ನು ಹೊಂದಿದೆ. ಈ ಮಕ್ಕಳಲ್ಲಿ ಸಾಮಾಜಿಕ ಕೌಶಲ್ಯ, ಸಂವಹನ ಹಾಗೂ ನಡವಳಿಕೆಗಳಲ್ಲಿ ಸಮಸ್ಯೆ ಯನ್ನು ಹೊಂದಿರು ತ್ತದೆ. ಪ್ರತಿ ಮಗು ವಿಶಿಷ್ಟವಾಗಿದ್ದು, ಸೂಕ್ತ ತರಬೇತಿಯನ್ನು 2-5ವರ್ಷಗಳ ಪ್ರಾಯದಲ್ಲಿ ಪ್ರಾರಂಭಿಸಿದರೆ ಈ ವಿಶೇಷ ಮಕ್ಕಳು ಸಹ ಸಮಾಜದಲ್ಲಿ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಸಾಧ್ಯವಾಗುತ್ತದೆ ಎಂದವರು ವಿವರಿಸಿದರು.

ಆಟಿಸಂ ಆರೈಕೆ ಕೇಂದ್ರ: ಉಡುಪಿಯಲ್ಲಿ ಸುಧಾರಿತ ಆಟಿಸಂ ಆರೈಕೆ ಕೇಂದ್ರವನ್ನು ಮುಂದಿನ ದಿನಗಳಲ್ಲಿ ಸ್ಥಾಪಿಸಿ ಮೂಲಭೂತ ಸೌಕರ್ಯಗಳನ್ನು ಒಳಗೊಂಡ ಉತ್ತಮ ಗುಣಮಟ್ಟದ ಆರೈಕೆಯನ್ನು ಆಟಿಸಂ ಬಾಧಿಕ ಮಕ್ಕಳಿಗೆ ನೀಡು ವುದು ಸೊಸೈಟಿಯ ಉದ್ದೇಶವಾಗಿದೆ ಎಂದು ಅಮಿತಾ ಪೈ ಹೇಳಿದರು.

ಕಲಾಸೌರಭ-3ನ್ನು ಜಿಲ್ಲಾಧಿಕಾರಿ ಡಾ.ಕೆ.ವಿದ್ಯಾಕುಮಾರಿ ಅವರು ಬೆಳಗ್ಗೆ 9:00ಗಂಟೆಗೆ ಉದ್ಘಾಟಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮನೋರೋಗ ತಜ್ಞ, ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಪಿ.ವಿ. ಭಂಡಾರಿ,ಐಎಂಎ ಅಧ್ಯಕ್ಷ ಡಾ.ಸುರೇಶ್ ಶೆಣೈ, ಜಯಕರ ಶೆಟ್ಟಿ ಇಂದ್ರಾಳಿ, ಉದ್ಯಮಿ ಪ್ರಕಾಶ ಶೆಟ್ಟಿ, ಅಶೋಕ ಕುಮಾರ್ ಹಾಗೂ ಇತರರು ಭಾಗವಹಿಸಲಿದ್ದಾರೆ.

ಸಮಾರೋಪ ಸಮಾರಂಭ ಸಂಜೆ 3:30ಕ್ಕೆ ನಡೆಯಲಿದ್ದು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಐ.ಪಿ.ಗಡಾದ್ ಹಾಗೂ ಹಾಸ್ಯ ಕಲಾವಿದ, ಕುಂದ್ರಾಪ ಕನ್ನಡ ರಾಯಭಾರಿ ಮನು ಹಂದಾಡಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮ ದಲ್ಲಿ ಜಿಲ್ಲೆಯ 16 ವಿಶೇಷ ಶಾಲೆಗಳ 350ಕ್ಕೂ ಅಧಿಕ ಮಕ್ಕಳು ಹಾಗೂ ಅವರ ಪೋಷಕರು ಭಾಗವಹಿಸಲಿದ್ದಾರೆ ಎಂದರು.

ಕಲಾಸೌರಭ-3ನ್ನು ಡಾ.ಎ.ವಿ.ಬಾಳಿಗಾ ಸ್ಮಾರಕ ಆಸ್ಪತ್ರೆ ದೊಡ್ಡಣಗುಡ್ಡೆ, ಕಮಲ್ ಎ.ಬಾಳಿಗಾ ಚಾರಿಟೇಬಲ್ ಟ್ರಸ್ಟ್ ಮುಂಬಯಿ, ಒನ್‌ಗುಡ್ ಸ್ಟೆಪ್ ಬೆಂಗಳೂರು ಹಾಗೂ ಇತರ ಸಂಸ್ಥೆಗಳ ಸಹಯೋಗದೊಂದಿಗೆ ಆಯೋಜಿಸಲಾಗುತ್ತಿದೆ.

ಸುದ್ದಿಗೋಷ್ಠಿಯಲ್ಲಿ ಮನೋರೋಗ ತಜ್ಞ ಡಾ.ಪಿ.ವಿ.ಭಂಡಾರಿ, ಆಟಿಸಂ ಸೊಸೈಟಿಯ ಖಜಾಂಚಿ ಅನುಷಾ ಹೆಗ್ಡೆ, ಕಾರ್ಯಕ್ರಮ ಸಂಯೋಜಕ ಕೀರ್ತೆಶ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News