ಎ.18ರಂದು ವಕ್ಫ್ ಕಾಯ್ದೆ ವಿರುದ್ಧ ಪ್ರತಿಭಟನೆ; ಎಸ್ ವೈಎಸ್ ಕೃಷ್ಣಾಪುರ ವತಿಯಿಂದ ಪ್ರಚಾರಾರ್ಥ ಸಭೆ

ಸುರತ್ಕಲ್ : ಕೇಂದ್ರ ಸರಕಾರ ಜಾರಿಗೆ ತಂದಿರುವ ವಕ್ಫ್ ವಿರೋಧಿ ಮಸೂದೆಯ ವಿರುದ್ಧ ಎ.18ರಂದು ಅಡ್ಯಾರ್ ಗಾರ್ಡನ್ ನಲ್ಲಿ ನಡೆಯಲಿರುವ ಪ್ರತಿಭಟನಾ ಸಭೆಯ ಪ್ರಚಾರಾರ್ಥ ಎಸ್ ವೈಎಸ್ ಕೃಷ್ಣಾಪುರ ಝೋನ್ ವತಿಯಿಂದ ಕೃಷ್ಣಾಪುರ ಜಂಕ್ಷನ್ ನಲ್ಲಿ ಸೋಮವಾರ ಸಭೆ ನಡೆಯಿತು.
ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅಡ್ವಕೇಟ್ ನೌಫಲ್ ಮರ್ಝೂಕಿ ವಳಾಲು, ಸಮುದಾಯದ ಆಸ್ತಿಯನ್ನು ಕೇಂದ್ರ ಸರಕಾರ ಎಳೆದು ತೆಗೆಯಲು ಯತ್ನಿಸುತ್ತಿದೆ. ದೇಶದ ಯಾವೊಬ್ಬರಿಗೂ ಅಗತ್ಯವೇ ಇಲ್ಲದಿರುವ ಕಾನೂನು ರೂಪಿಸುವ ಮೂಲಕ ಕೇಂದ್ರ ಸರಕಾರ ಅಲ್ಪಸಂಖ್ಯಾತರ ಮೇಲೆ ಸವಾರಿ ಮಾಡಲು ಹೊರಟಿದೆ. ಇದಕ್ಕೆ ಮುಸ್ಲಿಂ ಸಮುದಾಯ ಅವಕಾಶ ನೀಡುವುದಿಲ್ಲ ಎಂದು ಎಚ್ಚರಿಸಿದರು.
ಸಾಚಾರ್ ವರದಿಯನ್ನು ಆಧರಿಸಿ ಸಮುದಾಯವನ್ನು ಅಭಿವೃದ್ಧಿ ಪಡಿಸಲು ಮುದಾಗದಿರುವ ಕೇಂದ್ರ ಸರಕಾರ ಮುಸ್ಲಿಂ ಸಮುದಾಯದದ ಐಕ್ಯತೆಯನ್ನು ವಿಭಜಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು.
ಸಭೆಯ ಅಧ್ಯಕ್ಷತೆಯನ್ನು ಎಸ್ ವೈ ಎಸ್ ಕೃಷ್ಣಾಪುರ ಸರ್ಕಲ್ ಅಧ್ಯಕ್ಷ ಇರ್ಫಾನ್ ನೂರಾನಿ ವಹಿಸಿ ಮಾತನಾಡಿದರು. ಕೃಷ್ಣಾಪುರ ಕೇಂದ್ರ ಮದರಸ ಸಮಿತಿ ಅಧ್ಯಕ್ಷ ಹಕೀಮ್ ಫಾಲ್ಕನ್ ಮಾತನಾಡಿದರು.
ಈ ಸಂದರ್ಭ ಎಸ್ ವೈ ಎಸ್ ರಾಜ್ಯ ನಾಯಕ ಹಾಜಿ ಮುಹಮ್ಮದ್ ಆಸಿಫ್, ಜಿಲ್ಲಾ ಕಾರ್ಯದರ್ಶಿ ಹಾಜಿ ಅಬ್ದುಲ್ ರಹ್ಮಾನ್, ವಲಯ ಕಾರ್ಯದರ್ಶಿ ಮುಹಮ್ಮದ್ ಮನ್ಸೂರು, ಮುಹಮ್ಮದ್ ಸ್ವಾದಿಕ್ ಕೃಷ್ಣಾಪುರ ಮೊದಲಾದವರು ವೇದಿಕೆಯಲ್ಲಿದ್ದರು.
