ತಂದೆ ತಾಯಿ ಆಶೀರ್ವಾದವಿಲ್ಲದ ವ್ಯಕ್ತಿತ್ವ ಶೂನ್ಯ: ಶಾಸಕ ಅಶೋಕ್ ರೈ

Update: 2023-08-14 10:50 GMT

ಪುತ್ತೂರು: ನಾವು ವಿದ್ಯೆ ಕಲಿತು ಎಷ್ಟೇ ದೊಡ್ಡ ಉನ್ನತ ಪದವಿ ಪಡೆದು ಸಮಾಜದಲ್ಲಿ ದೊಡ್ಡ ವ್ಯಕ್ತಿಗಳಾಗಬಹುದು ಆದರೆ ನಮಗೆ ನಮ್ಮ ತಂದೆ ತಾಯಿಯ ಆಶೀರ್ವಾದ ಇಲ್ಲದೇ ಇದ್ದರೆ ನಾವು ಶೂನ್ಯ ವ್ಯಕ್ತಿಗಳಾಗುತ್ತೇವೆ ಎಂದು ಪುತ್ತೂರು ಶಾಸಕರಾದ ಅಶೋಕ್ ಕುಮಾರ್ ರೈ ಹೇಳಿದರು.

ಅವರು ಪುತ್ತೂರಿನ ಸಾಲ್ಮರ ಮೌಂಟನ್ ವ್ಯೂ ಆಂಗ್ಲ ಮಾಧ್ಯಮ ಪ್ರೌಢ ಶಾಲೆಯಲ್ಲಿ ಸೋಮವಾರ ನಡೆದ ರಕ್ಷಕ ಶಿಕ್ಷಕ ಸಂಘದ ಸಭೆಯಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ನಮ್ಮನ್ನು ಹೆತ್ತು ಹೊತ್ತು ಸಾಕಿದ ತಂದೆ ತಾಯಿಯನ್ನು ನಾವು ಯಾವುದೇ ಕಾರಣಕ್ಕೂ ಅಗೌರವದಿಂದ ಕಾಣಬಾರದು. ಅವರಿಗೆ ವಿದ್ಯೆ ಇಲ್ಲದೇ ಇದ್ದರೂ ನಮ್ಮನ್ನು ಅವರು ವಿದ್ಯಾವಂತರನ್ನಾಗಿ ಮಡಿದ್ದಾರೆ, ಎಷ್ಟೇ ಬಡತನವಿದ್ದರೂ ಮಕ್ಕಳನ್ನು ಹಸಿವಿನಿಂದ ಕೂರಿಸಲಿಲ್ಲ, ಅವರ ಹಬೊಟ್ಟೆಗೆ ಅನ್ನವಿಲ್ಲದೇ ಇದ್ದರೂ ಮಕ್ಕಳನ್ನು ಜೋಪಾನವಾಗಿ ಬೆಳೆಸಿದ್ದಾರೆ ಅದೇ ಮಕ್ಕಳು ವಿದ್ಯೆ ಕಲಿತು ತಂದೆ ತಾಯಿಯಿಂದ ದೂರವಾದರೆ ನಾವು ಎಷ್ಟೇ ದೊಡ್ಡ ವ್ಯಕ್ತಿಗಳಾದರೂ ಸಮಾಜದ ಮುಂದೆ ನಾವು ಶೂನ್ಯರಾಗುತ್ತೇವೆ ಎಂದು ಹೇಳಿದ ಶಾಸಕರು ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಗಳನ್ನು ಪ್ರದರ್ಶನ ಮಾಡಬೇಕು, ನನ್ನಿಂದ ಏನೂ ಸಾಧ್ಯವಿಲ್ಲ ಎಂಬ ಚಿಂತೆಯನ್ನು ಬಿಟ್ಟು ಬಿಡಬೇಕು, ಉನ್ನತ ಶಿಕ್ಷಣದತ್ತ ನಾವು ನಿತ್ಯವೂ ಕನಸು ಕಾಣುವವರಾಗಬೇಕು ಎಂದರು.

ಈ ಸಂದರ್ಭದಲ್ಲಿ ಶಾಸಕರು ಶಾಲೆಯಲ್ಲಿ ನೂತನವಾಗಿ ನಿರ್ಮಿಸಲಾದ ಪೂರ್ವ ಶಿಕ್ಷಣ ಕೊಠಡಿಯನ್ನು ಉದ್ಘಾಟಿಸಿದರು. ಶಾಸಕರನ್ನು ಸಂಸ್ಥೆಯ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಶಿಕ್ಷಣ ಸಂಸ್ಥೆಯ ಸ್ಥಾಪಕಾಧ್ಯಕ್ಷ ಕೆ ಪಿ ಅಹ್ಮದ್ ಹಾಜಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಪ್ರಧಾನ ಕಾರ್ಯದರ್ಶಿ ಮಹಮ್ಮದ್ ಹಾಜಿ ಎಂ, ಟ್ರಸ್ಟಿ ಅಬ್ದುಲ್ಲ ಹಾಜಿ ಯು, ಉಪ್ಪಳಿಗೆ ಶಾಲೆಯ ನಿವೃತ್ತ ಶಿಕ್ಷಕ ನಾರಾಯಣ ಕೆ, ಸಾಲ್ಮರ ಮೌಂಟನ್ ವ್ಯೂ ಶಾಲೆಯ ಮುಖ್ಯ ಶಿಕ್ಷಕಿ ಮೋಹನಾಂಗಿ ಎನ್ ಡಿ ಉಪಸ್ಥಿತರಿದ್ದರು.

ನ್ಯಾಯವಾದಿ ನೂರುದ್ದೀನ್ ಸಾಲ್ಮರ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಸ್ಥೆಯ ಕಾರ್ಯದರ್ಶಿ ಅಬ್ದುಲ್‍ರಹಿಮಾನ್ ಆಝಾದ್ ಸ್ವಾಗತಿಸಿದರು. ಸಹಶಿಕ್ಷಕ ರವೂಫ್ ಎ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.


Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News