ತುಳು, ಬ್ಯಾರಿ, ಕೊಂಕಣಿ ಅಕಾಡಮಿಗಳಿಗೆ ಅಧ್ಯಕ್ಷ, ಸದಸ್ಯರ ನೇಮಕ

Update: 2024-03-16 13:56 GMT

ಜೋಕಿಂ ಸ್ಟ್ಯಾನಿ ಆಲ್ವಾರಿಸ್, ಉಮರ್ ಯು.ಎಚ್, ತಾರನಾಥ ಗಟ್ಟಿ

ಮಂಗಳೂರು: ರಾಜ್ಯ ಸರಕಾರವು ತುಳು, ಬ್ಯಾರಿ, ಕೊಂಕಣಿ ಅಕಾಡಮಿಗಳಿಗೆ ಅಧ್ಯಕ್ಷ ಮತ್ತು ಸದಸ್ಯರನ್ನು ನೇಮಕಗೊಳಿಸಿ ಶನಿವಾರ ಆದೇಶ ಹೊರಡಿಸಿದೆ.

ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ತಾರನಾಥ ಗಟ್ಟಿ ಕಾಪಿಕಾಡ್, ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷರಾಗಿ ಉಮರ್ ಯು.ಎಚ್. ಹಾಗೂ ಕೊಂಕಣಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ್ಷರಾಗಿ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಅವರನ್ನು ನೇಮಿಸಿದೆ.

ತುಳು ಅಕಾಡಮಿಯ ಸದಸ್ಯರಾಗಿ ಪೃಥ್ವಿರಾಜ್, ಕುಂಬ್ರ ದುರ್ಗಪ್ರಸಾದ್ ರೈ, ಮೋಹನ್ ದಾಸ್ ಕೊಟ್ಟಾರಿ, ಅಕ್ಷಯ್ ಆರ್. ಶೆಟ್ಟಿ, ಶೈಲೇಶ್ ಬಿನ್ ಭೋಜ ಸುವರ್ಣ, ಕಿಶೋರ್ ಬಿನ್ ಗುಡ್ಡಪ್ಪ ಗೌಡ, ಬೂಬ ಪೂಜಾರಿ, ರೋಹಿತಾಶ್ವ ಯು. ಕಾಪಿಕಾಡ್, ನಾಗೇಶ್ ಕುಮಾರ್ ಉದ್ಯಾವರ, ಸಂತೋಷ್ ಶೆಟ್ಟಿ ನೇಮಕಗೊಂಡಿದ್ದಾರೆ.

ಬ್ಯಾರಿ ಅಕಾಡಮಿಯ ಸದಸ್ಯರಾಗಿ ಬಿ.ಎಸ್.ಮುಹಮ್ಮದ್ ಚಿಕ್ಕಮಗಳೂರು, ಹಫ್ಸಾ ಬಾನು ಬೆಂಗಳೂರು, ಸಾರಾ ಅಲಿ ಪರ್ಲಡ್ಕ, ಶಮೀರಾ ಜಹಾನ್, ಯು.ಎಚ್. ಖಾಲಿದ್ ಉಜಿರೆ, ತಾಜುದ್ದೀನ್, ಅಬೂಬಕರ್ ಅನಿಲಕಟ್ಟೆ, ಅಬ್ದುಲ್ ಶರೀಫ್ ಸುಳ್ಯ, ಹಮೀದ್ ಹಸನ್ ಮಾಡೂರು, ಸಮೀರ್ ಮುಲ್ಕಿ ಅವರನ್ನು ನೇಮಕ ಮಾಡಲಾಗಿದೆ.

ಕೊಂಕಣಿ ಅಕಾಡಮಿಯ ಸದಸ್ಯರಾಗಿ ವಂ.ಪ್ರಕಾಶ್ ಮಾಡ್ತಾ, ರೊನಾಲ್ಡ್ ಕ್ರಾಸ್ತಾ, ಡಾ. ವಿಜಯಲಕ್ಷ್ಮಿ ನಾಯಕ್, ನವೀನ್ ಲೋಬೋ, ಸಪ್ನಾಮೇ ಕ್ರಾಸ್ತಾ, ಸಮರ್ಥ್ ಭಟ್, ಸುನಿಲ್ ಸಿದ್ದಿ, ಜೇಮ್ಸ್ ಲೋಪಿಸ್, ದಯಾನಂದ ಮುಡೈೀಕರ್, ಪ್ರಮೋದ್ ಪಿಂಟೋ ನೇಮಕಗೊಂಡಿದ್ದಾರೆ.

ಕಳೆದ 29 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿ ಸೇವೆ ಸಲ್ಲಿರುವ ತಾರನಾಥ ಗಟ್ಟಿ ಕಾಪಿಕಾಡ್ ತುಳು ಸಾಹಿತ್ಯ ಅಕಾಡಮಿಯ ಸದಸ್ಯರಾಗಿ, ತುಳು ಪರಿಷತ್ ಸಂಘಟನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ತುಳು ಪರಿಷತ್ ಮೂಲಕ ಪ್ರಥಮ ವಿದ್ಯಾರ್ಥಿ ತುಳು ಸಮ್ಮೇಳನ ಆಯೋಜಿಸಿದ್ದರು. ತುಳು ತುಡರ್ ಹೆಸರಿನಲ್ಲಿ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿಯ ಬಗ್ಗೆ 50ಕ್ಕೂ ಹೆಚ್ಚು ಸಂದರ್ಶನ ಆಧಾರಿತ ವಿಡಿಯೋ ಡಾಕ್ಯೂಮೆಂಟರಿ ನಿರ್ಮಾಣ, ಮಂಗಳೂರು ವಿವಿಯ ಪದವಿಯಲ್ಲಿ ತುಳು ವಿಷಯ ಹಾಗೂ ತುಳು ಎಂಎ ಆರಂಭಿಸುವಲ್ಲಿ ತುಳು ಅಕಾಡಮಿಯ ಅಂದಿನ ಅಧ್ಯಕ್ಷರಾಗಿದ್ದ ಎ.ಸಿ.ಭಂಡಾರಿ ಅವರ ಜೊತೆಗೂಡಿ ಸರಕಾರ ಹಾಗೂ ವಿಶ್ವವಿದ್ಯಾನಿಲಯದ ಜೊತೆಗೆ ಸಂವಹನ ನಡೆಸುವಲ್ಲಿ ಮುಖ್ಯ ಪಾತ್ರ ವಹಿಸಿದ್ದರು.

*ಕರ್ನಾಟಕ ಮುಸ್ಲಿಮ್ ಲೇಖಕರ ಸಂಘದ ಅಧ್ಯಕ್ಷರಾಗಿರುವ ಉಮರ್ ಯು.ಹೆಚ್. ವೃತ್ತಿಯಲ್ಲಿ ಕರಿಯರ್ ಕೌನ್ಸಿಲರ್. ಸಾಮಾಜಿಕ ಕಾರ್ಯಕರ್ತರಾಗಿ ಗುರುತಿಸಿಕೊಂಡಿರುವ ಇವರು ಬ್ಯಾರಿ ಸಾಹಿತ್ಯ ಮತ್ತು ಸಾಂಸ್ಕೃತಿಕ ಸಂಘ, ಅಲ್ ವಫಾ ಚಾರಿಟೆಬಲ್ ಟ್ರಸ್ಟ್, ಮಂಗಳೂರು ಮತ್ತು ಮಾಸ್ ಮೀಡಿಯಾ ಫೌಂಡೇಶನ್ ಬೆಂಗಳೂರು ಇದರ ಪ್ರಧಾನ ಕಾರ್ಯದರ್ಶಿ ಹಾಗೂ ಬ್ಯಾರಿ ವಾರ್ತೆ ಮಾಸ ಪತ್ರಿಕೆಯ ಸಹ ಸಂಪಾದಕರಾಗಿದ್ದಾರೆ. ‘ಪೆರ್ನಾಲ್’ ಮಾಸಪ್ರತಿಕೆಯ ಸಂಪಾದಕ ಮತ್ತು ಪ್ರಕಾಶಕರಾಗಿ ಹಾಗೂ ಬ್ಯಾರಿ ಟೈಮ್ಸ್ ಮಾಸಿಕದ ಸಹ ಸಂಪಾದಕರಾಗಿದ್ದರು. ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್, ಕಿಡ್ನಿ ಆರೋಗ್ಯ ಅಭಿಯಾನ ದ.ಕ. ಜಿಲ್ಲೆ ಮತ್ತು ಸಹಮತ ವೇದಿಕೆ ದ.ಕ.ಜಿಲ್ಲೆ ಇದರ ಪ್ರಧಾನ ಕಾರ್ಯದರ್ಶಿ, ವೀರ ರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಸಂಘಟನಾ ಕಾರ್ಯದರ್ಶಿ, ಫೋರಂ ಫೋರ್ ರೈಟ್ಸ್ ಆ್ಯಂಡ್ ಜಸ್ಟಿಸ್ ದ.ಕ. ಜಿಲ್ಲೆ ಇದರ ಸಂಚಾಲಕರಾಗಿ ಸೇವೆ ಸಲ್ಲಿಸಿರುತ್ತಾರೆ.

*ರಂಗಭೂಮಿ ನಟ, ಬಹುಭಾಷಾ ಸಿನೆಮಾ ಕಲಾವಿದ, ಕಾರ್ಯಕ್ರಮ ನಿರೂಪಕ, ಸಂಘಟಕ, ರಾಜಕೀಯ ಮುಖಂಡ, ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕರ್ತ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಜೋಕಿಂ ಸ್ಟ್ಯಾನಿ ಆಲ್ವಾರಿಸ್ ಮಂಗಳೂರಿನ ಬೊಂದೇಲ್ ನಿವಾಸಿ.

ದ.ಕ.ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಪ್ರಧಾನ ಕಾರ್ಯದರ್ಶಿ, ಉಪಾಧ್ಯಕ್ಷರಾಗಿದ್ದರು. ಪ್ರಸಕ್ತ ದ.ಕ.ಜಿಲ್ಲಾ ಕಾಂಗ್ರೆಸಿನ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಸುತ್ತಿದ್ದಾರೆ. ಮಾಂಡ್ ಸೊಭಾಣ್ ಸಂಸ್ಥೆಯ ಕಾರ್ಯದರ್ಶಿ, ಉಪಾಧ್ಯಕ್ಷ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಕ್ರೈಸ್ತ ಉದ್ಯಮಿಗಳ ಸಂಸ್ಥೆಯಾದ ‘ರಚನಾ’ದ ಅಧ್ಯಕ್ಷರಾಗಿ, ಕೊಂಕಣಿ ಪ್ರಚಾರ ಸಂಚಾಲನದ ಅಧ್ಯಕ್ಷರಾಗಿ, ಕೊಂಕಣಿ ಅಕಾಡಮಿಯ ಸದಸ್ಯರಾಗಿ, ಮ್ಯಾಕೊ ಸಹಕಾರಿ ಸಂಸ್ಥೆಯ ಉಪಾಧ್ಯಕ್ಷರಾಗಿ, ಪ್ರಗತಿ ಕೊ.ಆಪರೇಟಿವ್ ಸೊಸೈಟಿಯ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ. ಅಲ್ಲದೆ ಮಂಗಳೂರು ಧರ್ಮಪ್ರಾಂತದ ಪಾಲನಾ ಮಂಡಳಿಗಳಲ್ಲಿ ಸದಸ್ಯರಾಗಿ ಸಕ್ರಿಯವಾಗಿ ದುಡಿದಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News