ಬೆಳ್ತಂಗಡಿ| ಮುಸ್ಲಿಂ ಸಮುದಾಯದ ಅವಹೇಳನದ ಮತ್ತೊಂದು ಘಟನೆ: ದೂರು ದಾಖಲು

ಬೆಳ್ತಂಗಡಿ: ಜನರ ಧಾರ್ಮಿಕ ಭಾವನೆಗೆ ಧಕ್ಕೆ ತರುವಂತಹ ರೀತಿಯಲ್ಲಿ ಉಡುಪು ಧರಿಸಿ ಅಶ್ಲೀಲವಾಗಿ ಕುಣಿದು ಆಝಾನ್ ಕರೆಯನ್ನು ಅವಹೇಳನ ಮಾಡುವ ಮತ್ತೊಂದು ಘಟನೆ ವೇಣೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿರುವುದು ಬೆಳಕಿಗೆ ಬಂದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಸಾರ್ವಜನಿಕರ ತೀವ್ರ ಆಕ್ರೋಶಕ್ಕೆ ಕಾರಣವಾಗುತ್ತಿದೆ.
ವೇಣೂರು ಸಮೀಪ ಪೆರಾಡಿಯಲ್ಲಿ ʼಪುರುಷ ಕಟ್ಟುನʼ ಕಾರ್ಯಕ್ರಮದಲ್ಲಿ ತಂಡವೊಂದು ಮುಸ್ಲಿಮರ ಸಾಂಪ್ರದಾಯಿಕ ಉಡುಪು ಧರಿಸಿ ಆಝಾನ್ ಗೆ ಅವಮಾನ ಮಾಡುತ್ತಿರುವುದು, ಮುಸ್ಲಿಮರ ಉಡುಪು ಧರಿಸಿ ಅಶ್ಲೀಲವಾಗಿ ಕುಣಿಯುತ್ತಿರುವುದು ವೀಡಿಯೋದಲ್ಲಿದೆ.
ಕೆಲ ದಿನಗಳ ಹಿಂದೆ ಇದೇ ರೀತಿ ಪುರುಷರ ಪೂಜೆಯಲ್ಲಿ ಇಸ್ಲಾಂ ಧರ್ಮಕ್ಕೆ ಅವಮಾನ ಮಾಡಲಾಗಿತ್ತು. ಈ ಬಗ್ಗೆ ವೇಣೂರು ಪೊಲೀಸರಿಗೆ ದೂರು ನೀಡಲಾಗಿತ್ತು.
ಮೊದಲು ದೂರು ನೀಡಿದಾಗಲೇ ಪೊಲೀಸರು ಕ್ರಮ ಕೈಗೊಂಡಿದ್ದರೆ ಇದು ಮರುಕಳಿಸುತ್ತಿರಲಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಎಸ್.ಡಿ.ಪಿ.ಐ ದೂರು

ಮುಸ್ಲಿಮರ ಉಡುಪು ಧರಿಸಿ, ಧಾರ್ಮಿಕ ಭಾವನೆಗೆ ಧಕ್ಕೆ ಬರುವಂತೆ ಸಮಾಜದಲ್ಲಿ ಅಶಾಂತಿ ಸೃಷ್ಟಿಸಲು ಕಾರಣರಾದವರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಎಸ್.ಡಿ.ಪಿ.ಐ ಮುಖಂಡರು ವೇಣೂರು ಠಾಣೆಗೆ ತೆರಳಿ ದೂರು ನೀಡಿದ್ದು, ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿಯಾಗಿ ಮನವಿ ಸಲ್ಲಿಸಿದ್ದಾರೆ.