ಬೆಳ್ತಂಗಡಿ | ತಾಲೂಕಿನಲ್ಲಿ ಶಾಂತಿ ಭಂಗ ಮಾಡುತ್ತಿರುವವರ ವಿರುದ್ಧ ನಿರ್ದಾಕ್ಷಿಣ್ಯ ಕಾನೂನು ಕ್ರಮಕ್ಕೆ ಮನವಿ

ಬೆಳ್ತಂಗಡಿ: ಇತ್ತೀಚಿನ ದಿನಗಳಲ್ಲಿ ಮುಸ್ಲಿಮ್ ಸಮುದಾಯವನ್ನು ಅವಹೇಳನಕಾರಿಯಾಗಿ ಚಿತ್ರಿಸಿ ತಾಲೂಕಿನಾದ್ಯಂತ ಶಾಂತಿ ಕದಡಿ ಕೋಮು ಗಲಭೆ ನಡೆಸಲು ಹುನ್ನಾರ ನಡೆಸುತ್ತಿರುವವರ ಮೇಲೆ ಕಾನೂನು ಕ್ರಮ ಕೈಗೊಳ್ಳುವಂತೆ ಕೋರಿ ದ.ಕಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿಯನ್ನು ಬೆಳ್ತಂಗಡಿ ತಾಲೂಕು ಮುಸ್ಲಿಮ್ ಮುಖಂಡರ ನಿಯೋಗ ಬೇಟಿ ಮಾಡಿ ಮನವಿ ಸಲ್ಲಿಸಿತು.
ವೇಣೂರು ಠಾಣಾ ವ್ಯಾಪ್ತಿಯ ಪೆರಾಡಿ ಪುರುಷ ಕಟ್ಟುವ ಸಂಪ್ರದಾಯದಲ್ಲಿ ಸಮುದಾಯವನ್ನು ಅವಹೇಳನಕಾರಿಯಾಗಿ ನಟನೆ ಮಾಡಿ ಪ್ರವಾದಿಯವರನ್ನು ನಿಂದಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಹರಿಯ ಬಿಟ್ಟ ಬಗ್ಗೆ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆದರೆ ಪೋಲಿಸರು ಗಂಭೀರ ಸೆಕ್ಸನ್ ಗಳಡಿ ಪ್ರಕರಣ ದಾಖಲಿಸಿಲ್ಲ. 20ಕ್ಕಿಂತ ಹೆಚ್ಚು ಆರೋಪಿಗಳಿದ್ದರೂ ಕೇವಲ ಆರು ಜನರಿಗೆ ಮಾತ್ರ ನೋಟಿಸು ನೀಡಿ ಜಾಮೀನು ನೀಡಲಾಗಿದೆ. ಇನ್ನುಳಿದ ಆರೋಪಿಗಳನ್ನು ಬ೦ದಿಸದೇ ತಾರತಮ್ಯ ವೆಸಗುತ್ತಿದ್ದು, ಆರೋಪಿಗಳು ಮತ್ತೊಮ್ಮೆ ಶಾಂತಿ ಕದಡಲು ಪ್ರಯತ್ನಿಸುತ್ತಿದ್ದಾರೆ.
ಚಕ್ರವರ್ತಿ ಸೂಲಿಬೆಲೆ ಸಮುದಾಯವನ್ನು ಟಾರ್ಗೆಟ್ ಮಾಡಿ ಕೋಮು ಪ್ರಚೋದಿತ ಭಾಷಣ ಮಾಡಿ ಕೋಮುಗಲಭೆ ಸೃಷ್ಟಿಸಲು ಹೊರಟಿದ್ದಾರೆ. ಅವರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಬೇಕು. ಉಜಿರೆಯಲ್ಲಿ ವಾಲಿಬಾಲ್ ತರಬೇತುದಾರನಿಗೆ ನೈತಿಕ ಪೋಲಿಸ್ ಗಿರಿ ನಡೆಸಿ ತೀವ್ರ ಹಲ್ಲೆ ನಡೆಸಿದ ಬಗ್ಗೆ ಹಾಗೂ ತಾಲೂಕಿನಲ್ಲಿ ವಿವಿಧ ಪ್ರದೇಶಗಳಲ್ಲಿ ಶಾಂತಿ ಕದಡುವರ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಕ್ರಮ ಕೈಗೊಳ್ಳುವಂತೆ ಅಧೀಕ್ಷಕರಿಗೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ದ.ಕ. ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾದ್ಯಕ್ಷ ಕೆ.ಕೆ.ಶಾಹುಲ್ ಹಮೀದ್, ನಾಗರಿಕ ಯುವಜನ ವೇದಿಕೆ ಬೆಳ್ತಂಗಡಿಯ ಗೌರವಾದ್ಯಕ್ಷ ನಝೀರ್ ಅಝ್ ಹರಿ ಬೊಳ್ಮಿನಾರ್, ಅಬ್ದುಲ್ ಅಜೀಜ್ ಝುಹ್ರಿ ಕಿಲ್ಲೂರು, ಅಕ್ಷರ್ ಬೆಳ್ತಂಗಡಿ, ನವಾಝ್ ಶರೀಫ್, ಅಬ್ದುಲ್ ಕರೀಮ್ ಗೇರುಕಟ್ಟೆ, ಖಾಲಿದ್ ಪುಲಾಬೆ, ಹನೀಫ್, ಮಹಮ್ಮದ್ ಹನೀಫ್ ಉಜಿರೆ, ಆಲಿಯಬ್ಬ ಪುಲಾಬೆ, ಹಕೀಮ್ ಕೊಕ್ಕಡ, ಖಾಲಿದ್ ಕಕ್ಯಾನ ಮತ್ತಿತರರು ಉಪಸ್ಥಿತರಿದ್ದರು.