ಡಿ.16ರಂದು ಬಿಐಟಿ - ಬೀಡ್ಸ್ ಪದವಿ ಪ್ರದಾನ ಸಮಾರಂಭ
ಮಂಗಳೂರು, ಡಿ.15: ಬ್ಯಾರೀಸ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಬಿಐಟಿ)ಯ 11ನೇ ಮತ್ತು ಬ್ಯಾರೀಸ್ ಎನ್ವಿರೋ-ಆರ್ಕಿಟೆಕ್ಟರ್ ಡಿಸೈನ್ ಸ್ಕೂಲ್(ಬೀಡ್ಸ್)ನ 4ನೇ ಪದವಿ ಪ್ರದಾನ ಸಮಾರಂಭ ಮಂಗಳೂರಿನ ಇನೋಳಿ ಬ್ಯಾರೀಸ್ ನಾಲೆಡ್ಜ್ ಕ್ಯಾಂಪಸ್‌ನಲ್ಲಿ ಡಿ.16ರಂದು ಬೆಳಗ್ಗೆ 9:30ಕ್ಕೆ ಜರುಗಲಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಬಿಐಟಿ ಪ್ರಾಂಶುಪಾಲ ಡಾ.ಎಸ್.ಐ.ಮಂಜೂರ್ ಬಾಷಾ, ಸಮಾರಂಭವನ್ನು ಕಣ್ಣೂರು ಮತ್ತು ಕ್ಯಾಲಿಕಟ್ ವಿಶ್ವವಿದ್ಯಾನಿಲಯಗಳ ಮಾಜಿ ಉಪ ಕುಲಪತಿ ಪ್ರೊ.ಎಂ.ಅಬ್ದುಲ್ ರಹಿಮಾನ್ ಉದ್ಘಾಟಿಸಲಿದ್ದಾರೆ ಎಂದರು.
ಬೆಂಗಳೂರಿನ ಮಾನವ ಸಂಪನ್ಮೂಲ ತಜ್ಞ ಡಾ.ಸಂಪತ್ ಜೆ.ಎಂ. ಮುಖ್ಯ ಭಾಷಣ ಮಾಡಲಿದ್ದಾರೆ. ಮಂಗಳೂರು ವಿವಿಯ ಉಪ ಕುಲಪತಿ ಡಾ.ಜಯರಾಜ್ ಅಮೀನ್ ಪದವಿ ಪ್ರದಾನ ಭಾಷಣ ನೆರವೇರಿಸಲಿದ್ದಾರೆ. ಬೆಂಗಳೂರಿನ ಆಕಿರ್ಟಟೆಕ್ಚರ್ ಪಾರಾಡೈಮ್‌ನ ಸಂಸ್ಥಾಪಕ ಪಾಲುದಾರ ಎ.ಆರ್.ಸಂದೀಪ್ ಜಗದೀಶ್ ‘ಆರ್ಕಿಟೆಕ್ಚರ್’ ಕುರಿತು ಭಾಷಣ ಮಾಡಲಿದ್ದಾರೆ. ಆಟಮ್ 360ಯ ಸಹ ಸಂಸ್ಥಾಪಕಿ ಮತ್ತು ಬಿಐಟಿ ಹಳೆ ವಿದ್ಯಾರ್ಥಿನಿ ರಿಝ್ಮಾ ಬಾನು ‘ಉದ್ಯೋಗದ ಆಚೆಗಿನ ಜೀವನ’ ವಿಷಯ ಕುರಿತು ಮಾತನಾಡಲಿದ್ದಾರೆ.
ಸಮಾರಂಭದಲ್ಲಿ ‘ಮಾಸ್ಟರ್ ಶೆಫ್ ಇಂಡಿಯಾ-2023’ರ ವಿಜೇತ ಮುಹಮ್ಮದ್ ಆಶಿಕ್‌ರನ್ನು ಅಭಿನಂದಿಸಲಾಗುವುದು. ಬ್ಯಾರೀಸ್ ಅಕಾಡಮಿ ಆಫ್ ಲರ್ನಿಂಗ್ ಅಧ್ಯಕ್ಷ ಸೈಯದ್ ಮುಹಮ್ಮದ್ ಬ್ಯಾರಿ ಅಧ್ಯಕ್ಷತೆ ವಹಿಸಲಿದ್ದಾರೆ ಎಂದವರು ತಿಳಿಸಿದರು.
ಬಿಐಟಿ ಮಂಗಳೂರು ಇಸಿಇ ವಿಭಾಗದ ಮುಖ್ಯಸ್ಥ ಡಾ.ಅಬ್ದುಲ್ಲಾ ಗುಬ್ಬಿ ಮಾತನಾಡಿ, ಸಮಾರಂಭದಲ್ಲಿ 2019ನೇ ಬ್ಯಾಚ್‌ನ ಸ್ನಾತಕಪೂರ್ವ ವಿದ್ಯಾರ್ಥಿಗಳು ಹಾಗೂ 2021ನೇ ಬ್ಯಾಚ್‌ನ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವೀಧರರಿಗೆ ಪದವಿ ಪ್ರದಾನ ನಡೆಯಲಿದೆ. ಇದು ಸಿವಿಲ್, ಮೆಕ್ಯಾನಿಕಲ್, ಸಿಎಸ್‌ಇ ಮತ್ತು ಇಸಿಇಯ ಪದವಿ ವಿದ್ಯಾರ್ಥಿಗಳನ್ನು, ಆರ್ಕಿಟೆಕ್ಚರ್ ಶಾಖೆಯ ಪದವಿ ವಿದ್ಯಾರ್ಥಿಗಳ ನಾಲ್ಕನೇ ಬ್ಯಾಚ್ ಮತ್ತು ಡಿಪ್ಲೊಮಾ ಸಿವಿಲ್ ಹಾಗೂ ಮೆಕ್ಯಾನಿಕಲ್ ಪದವೀಧರರನ್ನು ಒಳಗೊಂಡಿರುತ್ತದೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಬೀಡ್ಸ್ ಪ್ರಾಂಶುಪಾಲ ಆರ್.ಖಲೀಲ್ ರಝಾಕ್, ಬಿಐಟಿ-ಪಾಲಿಟೆಕ್ನಿಕ್‌ನ ನಿರ್ದೇಶಕ ಪ್ರೊ. ಪೃಥ್ವಿರಾಜ್ ಉಪಸ್ಥಿತರಿದ್ದರು.