ಸೌಜನ್ಯಾ ಪ್ರಕರಣದ ತನಿಖೆ ಎಸ್.ಐ.ಟಿ.ಗೆ ಒಪ್ಪಿಸಲು ಆಗ್ರಹ: 'ಚಲೋ ಬೆಳ್ತಂಗಡಿ'ಗೆ ಚಾಲನೆ

Update: 2023-08-28 06:51 GMT

ಬೆಳ್ತಂಗಡಿ, ಆ.28: ಸೌಜನ್ಯಾ ಅತ್ಯಾಚಾರ-ಹತ್ಯೆ ಪ್ರಕರಣದ ತನಿಖೆಯನ್ನು ಎಸ್.ಐ.ಟಿ.ಗೆ ಒಪ್ಪಿಸಬೇಕು ಎಂದು ಆಗ್ರಹಿಸಿ ಜನಪರ ಸಂಘಟನೆಗಳ ನೇತೃತ್ವದಲ್ಲಿ ಚಲೋ ಬೆಳ್ತಂಗಡಿ ಮಹಾಧರಣಿ ಆರಂಭಗೊಂಡಿದೆ.

ಜನಪರ ಸಂಘಟನೆಗಳ ಒಕ್ಕೂಟ ದ.ಕ. ಹಾಗೂ ಪ್ರಗತಿಪರ ಸಂಘಟನೆಗಳ ಹೋರಾಟ ಸಮಿತಿ, ಕರ್ನಾಟಕ ಇದರ ನೇತೃತ್ವದಲ್ಲಿ ನೂರಕ್ಕೂ ಹೆಚ್ಚು ಜನಪರ ಸಂಘಟನೆಗಳು ಒಟ್ಟಾಗಿ ಹಮ್ಮಿಕೊಂಡಿರುವ 'ಚಲೋ ಬೆಳ್ತಂಗಡಿ' ಧರಣಿಗೆ ಬೆಳ್ತಂಗಡಿ ಮಿನಿ ವಿಧಾನ ಸೌಧದ ಎದುರು ಜನಪರ ಸಂಘಟನೆಗಳ ಒಕ್ಕೂಟದ ಗೌರವಾಧ್ಯಕ್ಷ, ಮಾಜಿ ಶಾಸಕ ಕೆ.ವಸಂತ ಬಂಗೇರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ವಸಂತ ಬಂಗೇರ, 11 ವರ್ಷಗಳ ಹಿಂದೆ ನಡೆದ ಸೌಜನ್ಯಾ ಅತ್ಯಾಚಾರ-ಹತ್ಯೆ ಪ್ರಕರಣದ ತನಿಖೆಯನ್ನು ಆ ವೇಳೆ ಮುಖ್ಯಮಂತ್ರಿಯಾಗಿದ್ದ ಡಿ.ವಿ.ಸದಾನಂದ ಗೌಡರು ಸಿಐಡಿ ತನಿಖೆಗೆ ವಹಿಸಿದ್ದರು. ಆದರೆ ತನಿಖೆ ಹಳ್ಳ ಹಿಡಿಯಿತು. ಬಳಿಕ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿಯಾದರು. ಈ ವೇಳೆ ಮುಖ್ಯಮಂತ್ರಿಯವರನ್ನು ಒತ್ತಾಯಿಸಿ ಪ್ರಕರಣದ ತನಿಖೆಯನ್ನು ಸಿಬಿಐಗೆ ವಹಿಸುವಲ್ಲಿ ತಾನು ಸಫಲನಾಗಿದ್ದೆ ಎಂದು ಹೇಳಿದರು.

ಆ ವೇಳೆ ಕೇಂದ್ರದಲ್ಲೂ ಕಾಂಗ್ರೆಸ್ ಸರಕಾರವಿದ್ದು, ಮೊದಲ ಆರು ತಿಂಗಳು ಮುರುಗನ್ ಎಂಬ ಅಧಿಕಾರಿಯ ನೇತೃತ್ವದಲ್ಲಿ ಸಿಬಿಐ ತನಿಖೆ ಚೆನ್ನಾಗಿಯೇ ನಡೆದಿತ್ತು. ಆದರೆ ಬಳಿಕ ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂತು. ಈ ವೇಳೆ ತನಿಖಾಧಿಕಾರಿ ಮುರುಗನ್ ರನ್ನು ಬದಲಾಯಿಸಲಾಯಿತು. ತನಿಖೆ ಮತ್ತೆ ಹಳ್ಳ ಹಿಡಿಯಿತು. ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದ್ದ ತನಿಖಾಧಿಕಾರಿಯನ್ನು ಏಕಾಏಕಿ ಬದಲಾಯಿಸಿದ್ದು ಯಾಕೆ ಎಂದು ವಸಂತ ಬಂಗೇರ ಪ್ರಶ್ನಸಿದರು.

ಬಿಜೆಪಿ ನೇತೃತ್ವದಲ್ಲಿ ಬೆಳ್ತಂಗಡಿಯಲ್ಲಿ ರವಿವಾರ ಧರಣಿ ನಡೆಯಿತು. ತಹಶೀಲ್ದಾರ್ ಕಚೇರಿ ಬಾಗಿಲು ಮುಚ್ಚಿರುವ ದಿನ ಧರಣಿ ನಡೆಸುವ ಸಂಸದ ನಳಿನ್ ಕುಮಾರ್ ಕಟೀಲು ಅವರಿಗೆ ಸಂಸತ್ ನಲ್ಲಿ ಮಾತನಾಡಲು ಪ್ರಧಾನಿ ಮೋದಿ ಮಾತನಾಡಲು ಅವಕಾಶ ನೀಡಲಿಲ್ಲವೇ? ಸಂಸತ್ ನಲ್ಲಿ ಮಾತನಾಡದೆ ಇಲ್ಲಿ ಮಾತನಾಡಿ ಏನು ಪ್ರಯೋಜನ ಎಂದು ಬಂಗೇರ ಪ್ರಶ್ನಿಸಿದರು.

ಅದೇರೀತಿ ಹರೀಶ್ ಪೂಂಜಾ ಬೆಳ್ತಂಗಡಿ ಶಾಸಕರಾಗಿ 6ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಈ ಅವಧಿಯಲ್ಲಿ ಅವರು ಸೌಜನ್ಯಾ ಪರವಾಗಿ ಒಂದಕ್ಷರ ಮಾತನಾಡಲಿಲ್ಲ ಏಕೆ ಎಂದರು.

ಹೋರಾಟ ಸಮಿತಿಯ ಸಂಚಾಲಕ ಬಿ‌ಎಂ ಭಟ್ ಮಾತನಾಡಿ, ಹೋರಾಟಗಾರರು ಯಾರಿಗೂ ಅಮಾನ ಮಾಡುತ್ತಿಲ್ಲ, ನಾವು ನ್ಯಾಯ ಕೇಳುತ್ತಿದ್ದೇವೆ ಸೌಜನ್ಯಾಳಿಗೆ ನ್ಯಾಯ ಸಿಗಬೇಕು ಎಂಬುದೇ ನಮ್ಮ ಬೇಡಿಕೆಯಾಗಿದೆ ಎಂದರು.

ಪ್ರೊ.ನರೇಂದ್ರ ನಾಯಕ್, ಕೆ.ನೀಲಾ, ಮೀನಾಕ್ಷಿ ಬಾಳಿ, ಸಬೀಹಾ ಭೂಮಿಗೌಡ, ಮುನೀರ್ ಕಾಟಿಪಳ್ಳ, ದೇವಿ, ಸುರೇಂದ್ರ ರಾವ್, ಗೌರಮ್ಮ, ಭರತ್ ರಾಜ್ ಮಂಡ್ಯ, ಯಾದವ ಶೆಟ್ಟಿ, ಬಸವರಾಜಪ್ಪ ಪೂಜಾರಿ, ಜನಾರ್ದನ್ ಜೆನ್ನಿ, ಪ್ರಭಾ ಬೆಳಮಂಗಲ, ಒಡನಾಡಿ ಸ್ಟಾನ್ಲಿ, ಪರಶು, ಸುನೀಲ್ ಕುಮಾರ್ ಬಜಾಲ್, ಇಮ್ತಿಯಾಝ್, ಸತೀಶ್ ಕಾಶಿಪಟ್ಣ, ನಾಗೇಶ್ ಕುಮಾರ್, ನೇಮಿರಾಜ ಕಿಲ್ಲೂರು, ಚಂದು ಎಲ್., ಶೇಖರ ಕುಕ್ಕೇಡಿ, ಜಯನ್ ಮಲ್ಪೆ, ಶಾಲೆಟ್ ಪಿಂಟೋ, ರೂಪಾ ಚೇತನ್, ಸಂಜೀವ ಬಾಳ್ಕೂರು, ರಘು ಎಕ್ಕಾರು, ಅಯಾಝ್ ಕೃಷ್ಣಾಪುರ, ಪ್ರೊ.ಕಾಳ ಚೆನ್ನೇಗೌಡ ಮೊದಲಾದವರು ಭಾಗವಹಿಸಿದ್ದಾರೆ.

ಮಹಾಧರಣಿಗೆ ರಾಜ್ಯದ ವಿವಿಧ ಭಾಗಗಳಿಂದ ಜನರು ಆಗಮಿಸಿದ್ದಾರೆ.

 

 

 

 

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News