ಕೋಸ್ಟ್‌ಗಾರ್ಡ್ ಶೌರ್ಯದ ಅಣುಕು ಪ್ರದರ್ಶನ: ‘ಡೇ ಎಟ್ ಸೀ’ ಕಸರತ್ತಿಗೆ ರಾಜ್ಯಪಾಲರ ಉಪಸ್ಥಿತಿ

Update: 2025-02-02 14:42 IST
ಕೋಸ್ಟ್‌ಗಾರ್ಡ್ ಶೌರ್ಯದ ಅಣುಕು ಪ್ರದರ್ಶನ: ‘ಡೇ ಎಟ್ ಸೀ’ ಕಸರತ್ತಿಗೆ ರಾಜ್ಯಪಾಲರ ಉಪಸ್ಥಿತಿ
  • whatsapp icon

ಮಂಗಳೂರು, ಫೆ.2: ಸಮುದ್ರ ಮಧ್ಯೆ ಹಡಗುಗಳಲ್ಲಿ ಸಂಭವಿಸುವ ಅನಾಹುತ, ಕಡಲ್ಗಳ್ಳರ ಪತ್ತೆ, ಅಪಾಯಕ್ಕೆ ಸಿಲುಕುವ ಮೀನುಗಾರಿಕಾ ಬೋಟು ಹಾಗೂ ಮೀನುಗಾರರ ರಕ್ಷಣೆಯ ನಿಟ್ಟಿನಲ್ಲಿ ಕರಾವಳಿ ರಕ್ಷಣಾ ಪಡೆ (ಕೋಸ್ಟ್ ಗಾರ್ಡ್)ಯಿಂದ ನಡೆಸಲಾಗುವ ಕ್ಷಿಪ್ರ ಕಾರ್ಯಾಚರಣೆಯ ಅಣುಕು ಪ್ರದರ್ಶನ ನವಮಂಗಳೂರು ಬಂದರು ಬಳಿಯ ಅರಬಿ ಸಮುದ್ರದಲ್ಲಿ ರವಿವಾರ ನಡೆಯಿತು.

ಭಾರತೀಯ ಕೋಸ್ಟ್‌ಗಾರ್ಡ್‌ನ 49ನೆ ರೈಸಿಂಗ್ ಡೇ (ಸ್ಥಾಪನಾ ದಿನ)ಯ ಅಂಗವಾಗಿ ನಡೆದ ‘ಡೇ ಎಟ್ ಸೀ’ ಎಂಬ ಕೋಸ್ಟ್ ಗಾರ್ಡ್‌ನ ಕಸರತ್ತಿಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಉಪಸ್ಥಿತರಿದ್ದರೆ, ಕೋಸ್ಟ್ ಗಾರ್ಡ್‌ನ ಸುಮಾರು 400 ಸಿಬ್ಬಂದಿ ಈ ಅಣುಕು ಪ್ರದರ್ಶನದಲ್ಲಿ ಭಾಗವಹಿಸಿದ್ದರು.

ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಪೊಲೀಸ್ ಆಯುಕ್ತ ಅನುಪಮ್ ಆಗ್ರವಾಲ್ ಸೇರಿದಂತೆ ಇತರ ಗಣ್ಯರು, ಮಾಧ್ಯಮ ಪ್ರತಿನಿಧಿಗಳು ಹಾಗೂ ಇತರರನ್ನು ಹೊತ್ತ ಭಾರತೀಯ ಕೋಸ್ಟ್ ಗಾರ್ಡ್‌ನ ಮಂಗಳೂರು ಮೂಲದ ಹಡಗಾದ ವರಾಹ ನವ ಮಂಗಳೂರು ಬಂದರಿನಿಂದ ಹೊರಟು 20 ನಾಟಿಕಲ್ ಮೈಲ್ (1 ನಾಟಿಕಲ್ ಅಂದರೆ 1.8 ಕಿ.ಮೀ. ದೂರ) ದೂರದಲ್ಲಿ ಸಮುದ್ರ ನಡುವೆ ನಡೆದ ಕೋಸ್ಟ್‌ಗಾರ್ಡ್‌ನ ವೈವಿಧ್ಯಮಯ ಕಸರತ್ತಿನ ಅಣುಕು ಪ್ರದರ್ಶನ ವೀಕ್ಷಣೆಗೆ ವೇದಿಕೆ ಕಲ್ಪಿಸಿತು. ಕಡಲ ಗಸ್ತು ಹಡಗು (ಆಫ್‌ಶೋರ್ ಪ್ಯಾಟ್ರೋಲ್ ವೆಸೆಲ್- ಒಪಿವಿ) ವರಾಹ ಸುತ್ತ ಇನ್ನೊಂದು ಕೊಚ್ಚಿ ಮೂಲದ ಇನ್ನೊಂದು ಕೋಸ್ಟ್ ಗಾರ್ಡ್ ಒಪಿವಿ ಹಡಗು ಕ್ಷಕ್ಷಮ್, ಮೂರು ವೇಗದ ಗಸ್ತು ಹಡಗು (ಎಫ್‌ಪಿವಿ- ಫಾಸ್ಟ್ ಪ್ಯಾಟ್ರೋಲ್ ವೆಸೆಲ್) ಗಳಾದ ಅಮಾರ್ತ್ಯ, ರಾಜ್‌ದೂತ್ ಹಾಗೂ ಸಾವಿತ್ರಿಭಾಯಿ ಫುಲೆ, ಎರಡು ಇಂಟರ್‌ಸೆಪ್ಟರ್ ಬೋಟುಗಳು ಹಾಗೂ ಚೇತಕ್ ಹೆಸರಿನ ಹೆಲಿಕಾಪ್ಟರ್ ಈ ಕಾರ್ಯಾರಣೆಯಲ್ಲಿ ಭಾಗವಹಿಸಿದ್ದವು.

ಭಾರತೀಯ ನೌಕಾ ಪಡೆಯು ನೌಕಾ ದಿನಾಚರಣೆಯ ಅಂಗವಾಗಿ ಈ ರೀತಿಯ ಅಣುಕು ಪ್ರದರ್ಶನ ನಡೆಸುವಂತೆಯೇ, ಕೋಸ್ಟ್ ಗಾರ್ಡ್ ಕೂಡಾ ತನ್ನ ನೆಲೆಗಳನ್ನು ಹೊಂದಿರುವಲ್ಲಿ ಕೋಸ್ಟ್‌ಗಾರ್ಡ್ ಸ್ಥಾಪನಾ ದಿನದಂಗವಾಗಿ ಈ ಅಣುಕು ಪ್ರದರ್ಶವನ್ನು ನಡೆಸುತ್ತದೆ. ಆಳ ಸಮುದ್ರದಲ್ಲಿ ಗಸ್ತು ಕಾರ್ಯಾಚರಣೆಯ ಜತೆಗೆ ಪತ್ತೆ ಮತ್ತು ರಕ್ಷಣಾ ಕಾರ್ಯ, ಸಮುದ್ರ ಮಧ್ಯೆ 200 ನಾಟಿಕಲ್ ಮೈಲು (ಅಪಾಯಕ್ಕೀಡಾಗುವ ಹಡಗು ಅಥವಾ ಮೀನುಗಾರಿಕಾ ದೋಣಿಯಲ್ಲಿರುವವರ ರಕ್ಷಣೆ, ಅಕ್ರಮ ಚಟುವಟಿಕೆಗಳ ನಿಗಾ ಹಾಗೂ ತುರ್ತು ವೈದ್ಯಕೀಯ ನೆರವು ನೀಡುವ ಕಾರ್ಯವನ್ನು ಕೋಸ್ಟ್‌ಗಾರ್ಡ್ ನಿರ್ವಹಿಸುತ್ತದೆ. ಆ ಕಾರ್ಯಾಚರಣೆಯ ಕುರಿತಾದ ಅಣುಕು ಪ್ರದರ್ಶನ ಇಂದು ನೀಡಲಾಗಿದ್ದು, ಇದಕ್ಕೆ ಪೂರ್ವಭಾವಿಯಾಗಿ ಜ.28 ಮತ್ತು 29ರಂದು ಪೂರ್ವಾಭ್ಯಾಸವನ್ನೂ ಮಾಡಲಾಗಿದೆ ಎಂದು ವರಾಹ ಎಸ್‌ಪಿವಿ ಹಡಗಿನ ಕಮಾಂಡರ್ ಕೆ.ವಿ. ಬೋನಿಮನ್ ಮಾಹಿತಿ ನೀಡಿದರು.

ಕಡಲ ಮಧ್ಯೆ ಫಯರಿಂಗ್

ಸಮುದ್ರದಲ್ಲಿ ಕಡ್ಗಳ್ಳರು ಅಥವಾ ಅಕ್ರಮ ನುಸುಳುಕೋರರ ಹಡಗು ಪ್ರವೇಶ ಮಾಡಿದಾಗ ಅವುಗಳ ವಿರುದ್ಧ ಎಚ್ಚರಿಕೆಯ ಗುಂಡು ಹಾರಿಸುವ ಮೂಲಕ ತಡೆಯುವ ಅಣುಕು ಕಾರ್ಯಾಚರಣೆಯನ್ನು ಅಮಾರ್ತ್ಯ, ರಾಜ್‌ದೂತ್ ಹಾಗೂ ಸಾವಿತ್ರಿಭಾಯಿ ಫುಲೆ ಎಂಬ ಎಫ್‌ಪಿವಿಗಳು, ಎರಡು ಇಂಟರ್‌ಸೆಪ್ಟರ್ ಬೋಟುಗಳು ಹಾಗೂ ಹೆಲಿಕಾಪ್ಟರ್ ಮೂಲಕ ಪ್ರದರ್ಶಿಸಲಾಯಿತು.

ಇದೇ ವೇಳ ಹಡಗು ಅಥವಾ ಮೀನುಗಾರಿಕಾ ಬೋಟ್‌ಗಳಿಗೆ ಬೆಂಕಿ ಹತ್ತಿದಾಗ ಕೋಸ್ಟ್‌ಗಾರ್ಡ್‌ನ ಒಪಿವಿ ಹಾಗೂ ಎಫ್‌ಪಿವಿ ಹಡಗಿನ ಮೂಲಕ ಕೋಸ್ಟ್‌ಗಾರ್ಡ್ ಸಿಬ್ಬಂದಿ ಸಣ್ಣ ತೇಲುವ ಟ್ಯೂಬ್ ಬೋಟ್ (ಲೈಫ್ ರಾಫ್ಟ್)ಗಳ ಮೂಲಕ ನಡೆಸುವ ರಕ್ಷಣಾ ಕಾರ್ಯಾಚರಣೆಯ ಅಣುಕು ಪ್ರದರ್ಶನ ನಡೆಯಿತು. ಗಸ್ತು ಹಡಗುಗಳು ಇಂತಹ ಲೈಫ್ ರಾಫ್ಟ್‌ಗಳನ್ನು ಹೊಂದಿದ್ದು, ಇದು ತಲಾ 20 ಮಂದಿಯನ್ನು ಏಕಕಾಲದಲ್ಲಿ ರಕ್ಷಿಸಿ ಸಾಗಿಸುವ ಸಾಮರ್ಥ್ಯದ ಜತೆಗೆ ಅಗತ್ಯ ಆಹಾರ, ವೈದ್ಯಕೀಯ ಕಿಟ್‌ಗಳನ್ನು ಹೊಂದಿರುತ್ತವೆ. ಹೆಲಿಕಾಪ್ಟರ್ ಮೂಲಕ ಹಗ್ಗ, ರಕ್ಷಣಾ ತೊಟ್ಟಿಲನ್ನಿಸಿ ನಡೆಸುವ ರಕ್ಷಣಾ ಕಾರ್ಯ, ನೌಕಾ ಫಿರಂಗಿಗಳಿಂದ ಫಯರಿಂಗ್ ಕಾರ್ಯಾಚರಣೆಯನ್ನೂ ಅಣುಕು ಪ್ರದರ್ಶನದ ವೇಳೆ ಪ್ರದರ್ಶಿಸಲಾಯಿತು. ವರಾಹ ಹಡಗನ್ನು ಕ್ಯಾಪ್ಟನ್ ಶಹನವಾಝ್ ಮುನ್ನಡೆಸಿದರು.


ರಾಜ್ಯಪಾಲ, ಸ್ಪೀಕರ್‌ಗೆ ಗೌರವ ರಕ್ಷಣೆ

‘ಡೇ ಎಟ್ ಸೀ’ ಅಣುಕು ಕಾರ್ಯಾಚರಣೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಜತೆ ವಿಧಾನ ಸಭಾ ಸ್ಪೀಕರ್ ಯು.ಟಿ.ಖಾದರ್ ಕೂಡಾ ನವಮಂಗಳೂರು ಬಂದರು ತೀರಕ್ಕೆ ಆಗಮಿಸಿ ಕೋಸ್ಟ್‌ಗಾರ್ಡ್‌ನ ಎಸ್‌ಪಿವಿ ಹಡಗು ‘ವರಾಹ’ ಮೇಲೇರಿದರು. ಕೋಸ್ಟ್‌ಗಾರ್ಡ್ ಅಧಿಕಾರಿ, ಸಿಬ್ಬಂದಿಯಿಂದ ಗೌರವ ರಕ್ಷೆ ಸ್ವೀಕಾರದ ಬಳಿಕ ಸ್ಪೀಕರ್ ಅವರು ಕೆಲ ನಿಮಿಷಗಳಲ್ಲೇ ವರಾಹದಿಂದ ತೆರಳಿದರು. ಬಳಿಕ ನವಮಂಗಳೂರು ತೀರದಿಂದ 20 ನಾಟಿಕಲ್ ಮೈಲು ದೂರದ ಸಮುದ್ರ ಮಧ್ಯೆ ಸುಮಾರು ನಾಲ್ಕು ಗಂಟೆಗಳವರೆಗೆ ನಡೆದ ಅಣುಕು ಕಾರ್ಯಾಚರಣೆಯನ್ನು ರಾಜ್ಯಪಾಲರು ವರಾಹದಲ್ಲಿ ಕುಳಿತು ವೀಕ್ಷಿಸಿದರು. ಕೋಸ್ಟ್‌ಗಾರ್ಡ್ ಜಿಲ್ಲಾ ಹೆಡ್‌ಕ್ವಾಟರ್‌ನ ಡಿಐಜಿ ಪ್ರವೀಣ್ ಕುಮಾರ್ ಮಿಶ್ರಾ ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News