ಕಾಂಗ್ರೆಸ್ ಫೀನಿಕ್ಸ್ ನಂತೆ ಎದ್ದು ಬರಲಿದೆ: ರಮಾನಾಥ ರೈ
ಮಂಗಳೂರು, ಫೆ.15: ಕಳೆದ ಹಲವು ವರ್ಷಗಳಿಂದ ಲೋಕಸಭಾ ಚುನಾವಣೆಯಲ್ಲಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹಿನ್ನಡೆಯಾಗಿದೆ. ಆದರೆ ಕಾಂಗ್ರೆಸ್ ಮತ್ತೆ ಫೀನಿಕ್ಸ್ ನಂತೆ ಎದ್ದು ಬರುವ ವಿಶ್ವಾಸ ನಮಗಿದೆ. ಅದಕ್ಕೆ ಪೂರಕವಾಗಿ ಅಡ್ಯಾರ್ ನಲ್ಲಿ ನಡೆಯುವ ರಾಜ್ಯಮಟ್ಟದ ಸಮಾವೇಶಕ್ಕೆ ಸಿದ್ಧತೆಗಳನ್ನು ನಡೆಸಲಾಗಿದೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದ್ದಾರೆ.
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.17ರಂದು ಅಡ್ಯಾರ್ ನ ಸಹ್ಯಾದ್ರಿ ಕಾಲೇಜಿನ ಮುಂಭಾಗದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಕಾಂಗ್ರೆಸ್ ಸಮಾವೇಶವು ಕಾರ್ಯಕರ್ತರಲ್ಲಿ ಹುಮ್ಮಸ್ಸು ತುಂಬಲಿದೆ ಎಂದರು.
ಈ ಹಿಂದೆಯೂ ಅವಿಭಜಿತ ದ.ಕ. ಜಿಲ್ಲೆಯು ಲೋಕಸಭಾ ಚುನಾವಣೆಗಳಲ್ಲಿ ಕಾಂಗ್ರೆಸ್ ಬಲಿಷ್ಠ ಪಕ್ಷವಾಗಿ ಹೊರಹೊಮ್ಮಿರುವ ಇತಿಹಾಸವಿದೆ. ಕಾಂಗ್ರೆಸ್ ಜತೆ ಜನತೆ ಕೈಜೋಡಿಸಿದ್ದರು. ಆದರೆ ಸಂಘ ಪರಿವಾರದ ಮತೀಯವಾದಿಗಳ ಪ್ರಯೋಗಶಾಲೆಯಾಗಿ ಜಿಲ್ಲೆ ಮಾರ್ಪಟ್ಟ ನಂತರ ಪಕ್ಷಕ್ಕೆ ಹಿನ್ನಡೆಯಾಗಿದೆ. ಮುಂದಿನ ಚುನಾವಣೆಯಲ್ಲಿ ಜನರೊಂದಿಗಿದ್ದು, ಸಕ್ರಿಯವಾಗಿ ಹೋರಾಟದಲ್ಲಿ ನಿರತವಾಗಿರುವ ಸಮರ್ಥ ನಾಯಕ ನಿಂತಾಗ ಗೆಲ್ಲುವ ಅವಕಾಶವಿದೆ ಎಂದವರು ಹೇಳಿದರು.
ಕಾಂಗ್ರೆಸ್ ಗ್ಯಾರಂಟಿ ಘೋಷಣೆ ಮಾಡಿದಾಗ ಅದು ಕೇವಲ ಬೋಗಸ್ ಎಂದು ಬಿಜೆಪಿ ಹೇಳಿತ್ತು. ಆದರೆ ಕೇಂದ್ರ ಸರಕಾರದ ಅಸಹಕಾರದ ನಡುವೆಯೂ ಗ್ಯಾರಂಟಿ ಸ್ಕೀಮ್ ಪರಿಣಾಮಕಾರಿಯಾಗಿ ಜಾರಿಯಾಗಿದೆ ಎಂದು ಹೇಳಿದ ರಮಾನಾಥ ರೈ, ಬಡವರಿಗೆ ಅಗತ್ಯವಾದ ಕಾರ್ಯಕ್ರಮ ಜಾರಿಗೊಳಿಸುವಲ್ಲಿ ಕಾಂಗ್ರೆಸ್ನ ಇತಿಹಾಸ ಬಲಿಷ್ಠವಾಗಿದೆ. ಇಂದಿರಾ ಗಾಂಧಿಯವರ 20 ಅಂಶಗಳ ಆರ್ಥಿಕ ಕಾರ್ಯಕ್ರಮ, ಭೂ ಮಸೂದೆ, ಬಗರ್ ಹುಕುಂ ಕಾಯ್ದೆಗಳಿಂದ ಹಿಂದೆ ಗ್ರಾಮಗಳಲ್ಲಿ ಒಂದಿಬ್ಬರು ಭೂ ಒಡೆತನ, ಹಕ್ಕುಪತ್ರ ಹೊಂದಿದ್ದರೆ ಪ್ರಸಕ್ತ ಸಾವಿರಾರು ಮಂದಿಯಾಗಿದ್ದಾರೆ. ಈ ಎಲ್ಲಾ ಸೌಲಭ್ಯಗಳು ಆಕಾಶದಿಂದ ಉದುರಿರುವುದಲ್ಲ. ಸೈದ್ಧಾಂತಿಕ ಕಾನೂನಿನ ಮೂಲಕ ಜಾರಿಯಾಗಿರುವುದು ಎಂದು ಅವರು ಹೇಳಿದರು.
ಲೋಕಸಭೆಗೆ ನೀವು ಓರ್ವ ಅಭ್ಯಥಿಯೇ ಎಂಬ ಸುದ್ದಿಗಾರರ ಪ್ರಶ್ನೆಗೆ, ಕಾಂಗ್ರೆಸ್ ನನ್ನ ಧರ್ಮ ಎಂಬ ತಮ್ಮ ಮಾತನ್ನು ಪುನರುಚ್ಚರಿಸಿದ ರಮಾನಾಥ ರೈ, ವಿಧಾನಸಭಾ ಚುನಾವಣೆಯಲ್ಲಿ ಒಂಭತ್ತು ಬಾರಿ ಸ್ಪರ್ಧಿಸಲು ಕಾಂಗ್ರೆಸ್ ನಿಂದ ಅವಕಾಶ ದೊರೆತ ರಾಜಕಾರಣಿಗಳಲ್ಲಿ ನಾನೂ ಓರ್ವ. ಯಾವತ್ತೂ ಸ್ಥಾನಕ್ಕಾಗಿ ಅಪೇಕ್ಷೆ ಪಟ್ಟಿಲ್ಲ ಎಂದರು.
ಕಳೆದ ಮೂರು ದಶಕಗಳಲ್ಲಿ ಲೋಕಸಭೆಯಲ್ಲಿ ಕಾಂಗ್ರೆಸ್ ಗೆ ಹಿನ್ನಡೆಯಾಗಲು ಏನು ಕಾರಣ ಎಂಬ ಪ್ರಶ್ನೆಗೆ, ಆ ವಿಷಯದಲ್ಲಿ ಎಲ್ಲಿ ಎಡವಿದ್ದೇವೆ ಎಂದು ಪರಾಮರ್ಶೆ ಮಾಡಿ ನಾಯಕರ ಗಮನಕ್ಕೆ ತರಲಿದ್ದೇವೆ ಎಂದರು.
ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಪಿ.ವಿ.ಮೋಹನ್, ಪ್ರಧಾನ ಕಾರ್ಯದರ್ಶಿ ಪದ್ಮರಾಜ್ ಆರ್., ಮಮತಾ ಗಟ್ಟಿ, ಎಂ.ಎ.ಗಫೂರ್, ಕೃಪಾ ಆಳ್ವ, ಸತ್ಯನಾರಾಯಣ, ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು, ಶಶಿಧರ ಹೆಗ್ಡೆ, ಯು.ಟಿ.ಫರ್ಝಾನಾ, ಶಾಲೆಟ್ ಪಿಂಟೋ, ಅಪ್ಪಿ, ನವೀನ್ ಡಿಸೋಜ, ವಿಶ್ವಾಸ್ ದಾಸ್, ಭಾಸ್ಕರ್ ಕೆ., ಮಂಗಳೂರು ವಿಶ್ವವಿದ್ಯಾನಿಲಯದ ಸಿಂಡೀಕೇಟ್ ಸದಸ್ಯ ಸವಾದ್ ಸುಳ್ಯ, ಸುರೇಂದ್ರ ಕಂಬಳಿ, ತೇಜಸ್ವಿ, ಜಯಶೀಲ ಅಡ್ಯಂತಾಯ, ಫಾರೂಕ್ ಬಯಬೇ, ಶಬೀರ್, ನಝೀರ್ ಬಜಾಲ್ ಉಪಸ್ಥಿತರಿದ್ದರು.