ಫರಂಗಿಪೇಟೆ : ದಿಗಂತ್‌ ನಾಪತ್ತೆ ಪ್ರಕರಣ; ಕೂಂಬಿಂಗ್ ಕಾರ್ಯ ಆರಂಭಿಸಿದ ಜಿಲ್ಲಾ ಪೋಲೀಸ್ ತಂಡ

Update: 2025-03-08 12:27 IST
ಫರಂಗಿಪೇಟೆ : ದಿಗಂತ್‌ ನಾಪತ್ತೆ ಪ್ರಕರಣ; ಕೂಂಬಿಂಗ್ ಕಾರ್ಯ ಆರಂಭಿಸಿದ ಜಿಲ್ಲಾ ಪೋಲೀಸ್ ತಂಡ
  • whatsapp icon

ಬಂಟ್ವಾಳ : ನಿಗೂಢ ರೀತಿಯಲ್ಲಿ ನಾಪತ್ತೆಯಾದ ಫರಂಗಿಪೇಟೆ ಸಮೀಪದ ಕಿದೆಬೆಟ್ಟು ನಿವಾಸಿ  ದಿಗಂತ್ ಗಾಗಿ ಶೋಧ ಕಾರ್ಯ ಮುಂದುವರಿದಿದ್ದು, ಮಾ.08 ಶನಿವಾರ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಯತೀಶ್ ‌ಎನ್.ನೇತೃತ್ವದ ಜಿಲ್ಲಾ ಪೋಲೀಸ್ ತಂಡ ನಾಪತ್ತೆ ಘಟನೆ ನಡೆದ ಸ್ಥಳದ ಸುತ್ತಲಿನ ಪ್ರದೇಶಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಕೂಂಬಿಂಗ್ ಕಾರ್ಯ ಆರಂಭಿಸಿದ್ದಾರೆ.

ಫೆ. 25 ರಂದು ಬಾಲಕ ದಿಗಂತ್ ನಿಗೂಡ ರೀತಿಯಲ್ಲಿ ನಾಪತ್ತೆಯಾಗಿದ್ದು, ಫರಂಗಿಪೇಟೆ ರೈಲ್ವೆ ಹಳಿಯಲ್ಲಿ ರಕ್ತದ ಕಲೆಯೊಂದಿಗೆ ಆತನ ಚಪ್ಪಲಿ ಹಾಗೂ ಮೊಬೈಲ್ ಫೋನ್ ಸ್ಥಳದಲ್ಲಿ ಪತ್ತೆಯಾಗಿತ್ತು. ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು.

ಕಳೆದ 12 ದಿನಗಳಿಂದ ದಿಗಂತ್ ನ ಪತ್ತೆಗಾಗಿ ವಿವಿಧ ರೀತಿಯ ಕಾರ್ಯಚರಣೆಗಳನ್ನು ನಡೆಸಿರುವ ಪೊಲೀಸ್ ತಂಡಕ್ಕೆ ಈ ಪ್ರಕರಣ ಸವಾಲಾಗಿ ಪರಿಣಮಿಸಿದೆ . ಹಾಗಾಗಿ ವಿವಿಧ ಆಯಾಮಗಳಲ್ಲಿ 40 ಕ್ಕೂ ಅಧಿಕ ಪೊಲೀಸರ ತಂಡ ಕೆಲಸ ಮಾಡಿದೆಯಾದರೂ ದಿಗಂತ್ ಪತ್ತೆಯಾಗದ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸ್ಥಳದಲ್ಲಿದ್ದು ಕೂಂಬಿಂಗ್ ಕಾರ್ಯ ಆರಂಭಿಸಿದ್ದಾರೆ.

ವಿಶೇಷ ತಂಡ ಕಾರ್ಯಚರಣೆ

ಬಂಟ್ವಾಳ ಸಬ್ ಡಿವಿಷನ್ ನ ಸುಮಾರು 9 ಪೋಲೀಸ್ ಠಾಣೆಯ ನಿರೀಕ್ಷಕರು, ಠಾಣಾಧಿಕಾರಿಗಳು ಹಾಗೂ ಸುಮಾರು 100 ಕ್ಕೂ ಅಧಿಕ ಪೋಲೀಸರ ತಂಡ ಬೆಳಿಗ್ಗೆಯಿಂದಲೇ ಕೂಂಬಿಂಗ್ ಕಾರ್ಯದಲ್ಲಿ ತೊಡಗಿಕೊಂಡಿದೆ.

ಡಿ‌ಎಆರ್ ತಂಡದ 30 ಪೋಲೀಸರು, ರೈಲ್ವೆ ಪೋಲೀಸ್, ಅಗ್ನಿಶಾಮಕ ದಳ, ಎಫ್.ಎಸ್.ಎಲ್ ತಂಡ, ಡಾಗ್ ಸ್ಕ್ವಾಡ್, ಡ್ರೋನ್ ಕ್ಯಾಮರಾಗಳನ್ನು ದಿಗಂತ್ ನಾಪತ್ತೆಯಾಗಿದ್ದ ಘಟನಾ ಸ್ಥಳದ ಸುತ್ತಮುತ್ತಲಿನ ಸುಮಾರು 5 ಕಿ.ಮೀ.ನ ಭಾಗದಲ್ಲಿ ಹುಡುಕಾಟ ನಡೆಸಲು ಯೋಜನೆ ತಯಾರಿಸಿ ಕಾರ್ಯ ಆರಂಭಿಸಿದೆ. ನೇತ್ರಾವತಿ ನದಿ ಭಾಗದ ಸುತ್ತಲಿನ ಭಾಗದಲ್ಲಿ ದೋಣಿ ಬಳಸಿಕೊಂಡು ‌ನದಿಯಲ್ಲಿ ಕೂಡ ಸರ್ಚ್ ಮಾಡಲಾಗುತ್ತಿದೆ.

ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಯತೀಶ್ ಎನ್. ಅಡಿಶನಲ್ ಎಸ್.ಪಿ.ರಾಜೇಂದ್ರ, ಡಿ.ವೈ.ಎಸ್.ಪಿ.ವಿಜಯಪ್ರಸಾದ್, ಇನ್ಸ್ ಪೆಕ್ಟರ್ ಗಳಾದ ಶಿವಕುಮಾರ್, ಅನಂತ ಪದ್ಮನಾಭ, ಎಚ್.ನಾಗಾರಾಜ್ , ಎಸ್‌.ಐ.ಗಳಾದ ನಂದಕುಮಾರ್, ಪ್ರಸನ್ನ, ಅವಿನಾಶ್, ಹರೀಶ್, ಉದಯರವಿ, ರಾಮಕೃಷ್ಣ, ಕಿಶೋರ್, ಸಮರ್ಥ್, ಅರ್ಜುನ್, ಮುರಳೀಧರ, ಆನಂದ ಮತ್ತು ಕೌಶಿಕ್ ಸಹಿತ ಅನೇಕ ಎಸ್ಐಗಳು ಹತ್ತು ತಂಡದಲ್ಲಿ ಪತ್ತೆ ಕಾರ್ಯ ನಡೆಸುತ್ತಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News