ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್ ನಿಧನ
Update: 2025-03-08 09:38 IST

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಮಾಜಿ ಉಪಮೇಯರ್ ಮುಹಮ್ಮದ್ ಕುಂಜತ್ತಬೈಲ್ ಶನಿವಾರ ಬೆಳಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅವಿವಾಹಿತರಾಗಿದ್ದ ಅವರು ಸಾಮಾಜಿಕ ಕಾರ್ಯಕರ್ತರಾಗಿಯೂ ಗುರುತಿಸಿಕೊಂಡಿದ್ದರು. ಅಖಿಲ ಭಾರತ ಬ್ಯಾರಿ ಸಾಹಿತ್ಯ ಪರಿಷತ್ ಸಹಿತ ಹಲವು ಸಂಘಟನೆಗಳಲ್ಲಿ ಸಕ್ರಿಯರಾಗಿದ್ದರು.
ಮೃತದೇಹವು ಕುಂಜತ್ತಬೈಲಿನ ಅವರ ಮನೆಯಲ್ಲಿದೆ.
ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಪ್ರಮುಖರು,ಮಾರ್ಗದರ್ಶಕರು ಆಗಿದ್ದ ಮಾಜಿ ಉಪ ಮೇಯರ್ ಮುಹಮ್ಮದ್ ಕುಂಜತ್ತಬೈಲ್ ಅವರ ಅಕಾಲಿಕ ನಿಧನದಿಂದ ಹೋರಾಟ ಸಮಿತಿ ಆಘಾತಕ್ಕೊಳಗಾಗಿದೆ. ಸದಾ ಜನಪರ ವಾಗಿ ಆಲೋಚಿಸುತ್ತಿದ್ದ, ಭ್ರಷ್ಟಾಚಾರದ ಸೋಂಕು ತಗುಲಿಸಿಕೊಳ್ಳದ ಅವರಿಗೆ ಸಮಿತಿ ಭಾವಪೂರ್ಣ ಶ್ರದ್ದಾಂಜಲಿ ಸಲ್ಲಿಸುತ್ತದೆ ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ, ಸುರತ್ಕಲ್ ಇದರ ಸಂಚಾಲಕ ಮುನೀರ್ ಕಾಟಿಪಳ್ಳ ತಿಳಿಸಿದ್ದಾರೆ.