ಉಳ್ಳಾಲ | ನದಿ ಕಿನಾರೆಯಲ್ಲಿ ಸಾಮೂಹಿಕ ಅತ್ಯಾಚಾರ ಶಂಕೆ : ಮೂವರು ಆರೋಪಿಗಳ ಬಂಧನ

ಬಂಧಿತ ಆರೋಪಿಗಳು
ಉಳ್ಳಾಲ : ಪಶ್ಚಿಮ ಬಂಗಾಳ ಮೂಲದ ಯುವತಿಯೋರ್ವಳು ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯ ರಾಣಿಪುರ ಸಮೀಪದ ನೇತ್ರಾವತಿ ನದಿ ಕಿನಾರೆಯಲ್ಲಿ ಬುಧವಾರ ತಡರಾತ್ರಿ ನಡೆದಿದೆ.
ಯುವತಿಯ ಮೇಲೆ ಗ್ಯಾಂಗ್ ರೇಪ್ ನಡೆದಿರುವ ಶಂಕೆ ವ್ಯಕ್ತವಾಗಿದೆ. ತೀವ್ರ ಅಸ್ವಸ್ಥಗೊಂಡಿರುವ ಯುವತಿಯನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದು, ತನಿಖೆ ಮುಂದುವರಿದಿದೆ.
ಮುಲ್ಕಿ ಕಾರ್ನಾಡ್ ನಿವಾಸಿ ವೃತ್ತಿಯಲ್ಲಿ ಆಟೊ ಚಾಲಕನಾಗಿರುವ ಪ್ರಭುರಾಜ್(38), ವೃತ್ತಿಯಲ್ಲಿ ಚಾಲಕ, ಪೈಂಟರ್, ಇಲೆಕ್ಟ್ರಿಶಿಯನ್ ಆಗಿರುವ ಕುಂಪಲ ಚಿತ್ರಾಂಜಲಿ ನಗರ ನಿವಾಸಿ ಮಿಥುನ್ (37) ಹಾಗೂ ಡೆಲಿವರಿ ಬಾಯ್ ಆಗಿರುವ ಪಡೀಲ್ ಕೊಡಕ್ಕಲ್ ನಿವಾಸಿ ಮನೀಶ್(30) ಬಂಧಿತ ಆರೋಪಿಗಳೆಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ವಿವರ :
ಎ.16ರಂದು ಪಶ್ಚಿಮ ಬಂಗಾಳದ ಮೂಲದ 20ರ ಹರೆಯದ ಯುವತಿಯೊಬ್ಬಳು ಪರಿಚಿತ ವ್ಯಕ್ತಿಯೋರ್ವನೊಂದಿಗೆ ಉದ್ಯೋಗ ಹುಡುಕಿಕೊಂಡು ಮಂಗಳೂರಿಗೆ ರೈಲಿನಲ್ಲಿ ಬಂದಿದ್ದಳು ಎನ್ನಲಾಗಿದೆ. ಮಂಗಳೂರು ತಲುಪಿದ ನಂತರ ಆಕೆ ಮತ್ತು ಆಕೆಯ ಸಹಚರನ ನಡುವೆ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ. ಇದರಿಂದ ಆಕೆಯ ಮೊಬೈಲ್ ಫೋನ್ ಹಾಳಾಗಿತ್ತು. ಈ ಹಿನ್ನೆಲೆಯಲ್ಲಿ ಆಕೆ ಆಟೊ ರಿಕ್ಷಾ ಹತ್ತಿದ್ದಳು. ಅಟೊ ಚಾಲಕ ಆಕೆಯನ್ನು ಮೊಬೈಲ್ ರಿಪೇರಿ ಅಂಗಡಿಗೆ ಕರೆದೊಯ್ದು ಫೋನ್ ರಿಪೇರಿ ಮಾಡಲು ಸಹಾಯ ಮಾಡಿದ್ದ ಎನ್ನಲಾಗಿದೆ. ಬಳಿಕ ಆಕೆಗೆ ಆಹಾರವನ್ನೂ ನೀಡಿದ್ದ ಆಟೊ ಚಾಲಕ ಆಕೆಯ ವಿನಂತಿಯ ಮೇರೆಗೆ ಆಕೆಯನ್ನು ರೈಲ್ವೆ ನಿಲ್ದಾಣಕ್ಕೆ ಬಿಡಲು ಒಪ್ಪಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಮಧ್ಯೆ ಆಟೊ ಚಾಲಕನು ತನಗೆ ಮಾದಕ ವಸ್ತು ನೀಡಿದ್ದಾನೆ. ಇದರಿಂದ ತಾನು ಪ್ರಜ್ಞೆ ಕಳೆದುಕೊಂಡಿದ್ದೆ ಎಂದು ಯುವತಿ ತನಿಖೆ ವೇಳೆ ಪೊಲೀಸರಿಗೆ ತಿಳಿಸಿದ್ದಾಳೆ.
ತನಗೆ ಪ್ರಜ್ಞೆ ಬಂದಾಗ ಆಟೊ ಚಾಲಕ ಸಹಿತ ಮೂವರು ವ್ಯಕ್ತಿಗಳೊಂದಿಗೆ ತಾನು ಕಾರಿನಲ್ಲಿರುವುದು ತಿಳಿಯಿತು. ಈ ವೇಳೆ ತಾನು ಬೊಬ್ಬೆ ಹಾಕಿದ್ದರಿಂದ ಆರೋಪಿಗಳು ತನ್ನನ್ನು ರಸ್ತೆ ಬದಿ ಬಿಟ್ಟು ಹೋಗಿದ್ದಾರೆ. ಬಳಿಕ ತಾನು ಹತ್ತಿರದ ಮನೆಯೊಂದಕ್ಕೆ ತೆರಳಿ ನೀರು ಕೇಳಿದ್ದೆ. ಆ ಮನೆಯವರು ಪೊಲೀಸ್ ಸಹಾಯವಾಣಿ (112) ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ ಎಂದು ಆಕೆ ವಿಚಾರಣೆಯ ವೇಳೆ ಪೊಲೀಸರ ಬಳಿ ಹೇಳಿಕೊಂಡಿದ್ದಾಳೆ.
ಮಾಹಿತಿ ಪಡೆದ ಪೊಲೀಸರು ತಕ್ಷಣ ಘಟನಾ ಸ್ಥಳಕ್ಕೆ ತೆರಳಿ ಆಕೆಯನ್ನು ಪೊಲೀಸ್ ಠಾಣೆಗೆ ಕರೆದೊಯ್ದು, ಚಿಕಿತ್ಸೆಗಾಗಿ ದೇರಳಕಟ್ಟೆ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ವೈದ್ಯಕೀಯ ಚಿಕಿತ್ಸೆ ಪಡೆದು ಪ್ರಜ್ಞೆ ಮರಳಿದ ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದಾಗ ತನ್ನ ಮೇಲೆ ಲೈಂಗಿಕ ದೌರ್ಜನ್ಯ/ಅತ್ಯಾಚಾರ ನಡೆದಿರಬಹುದು ಎಂದು ಆಕೆ ಶಂಕಿಸಿದ್ದಾಳೆ. ಅದರಂತೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಮಗ್ರ ತನಿಖೆ ನಡೆಸಲು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಕಮಿಷನರ್ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.