ದ.ಕ.ದಲ್ಲಿ ಮತೀಯ ಶಕ್ತಿ ಹತ್ತಿಕ್ಕಿ ಶಾಂತಿಯ ತೋಟ ನಿರ್ಮಿಸಿ: ಪೊಲೀಸ್ ಇಲಾಖೆಗೆ ಗೃಹ ಸಚಿವ ಡಾ.ಪರಮೇಶ್ವರ್ ನಿರ್ದೇಶನ

Update: 2024-11-30 09:39 GMT

ಮಂಗಳೂರು, ನ.30: ಮುಂಬೈ ಮಹಾನಗರಕ್ಕೆ ಸಮಾನವಾಗಿ ಬೆಳೆಯುವ ಎಲ್ಲಾ ಅರ್ಹತೆಯೂ ದ.ಕ. ಜಿಲ್ಲೆಗಿದೆ. ಆದರೆ ಅದಕ್ಕೆ ತೊಡಕಾಗಿರುವ ಮತೀಯ ಶಕ್ತಿಗಳನ್ನು ಹತ್ತಿಕ್ಕಿ ಶಾಂತಿಯ ತೋಟ ನಿರ್ಮಾಣ ಮಾಡುವಲ್ಲಿ ಪೊಲೀಸ್ ಇಲಾಖೆ ಕ್ರಮ ವಹಿಸಬೇಕು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ನಿರ್ದೇಶನ ನೀಡಿದ್ದಾರೆ.

ನಗರದ ಪೊಲೀಸ್ ಲೇನ್ ನಲ್ಲಿ ಶನಿವಾರ ಮಂಗಳೂರು ನಗರ ಮತ್ತು ಬೆಳ್ಳಾರೆ ಪೊಲೀಸ್ ನೂತನ ವಸತಿ ಗೃಹ ಸಮುಚ್ಚಯಗಳ ಉದ್ಘಾಟನೆ ಮತ್ತು ಸುಬ್ರಹ್ಮಣ್ಯ ಪೊಲೀಸ್ ಠಾಣೆ ಹಾಗೂ ಪಾಣೆಮಂಗಳೂರು ಸಂಚಾರಿ ಪೊಲೀಸ್ ಠಾಣೆಗಳ ಉದ್ಘಾಟನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಗೃಹ ಸಚಿವನಾಗಿ ಅಧಿಕಾರ ಸ್ವೀಕರಿಸಿ ಪ್ರಥಮ ಭೇಟಿ ನೀಡಿದ ಜಿಲ್ಲೆ ದಕ್ಷಿಣ ಕನ್ನಡ. ಆ ಸಂದರ್ಭ ಇಲ್ಲಿನ ವಿವಿಧ ವೃತ್ತಿಪರರರು, ಕೈಗಾರಿಕೋದ್ಯಮಿಗಳು, ಇಲ್ಲಿ ಸಾಕಷ್ಟು ಶಿಕ್ಷಣ ಸಂಸ್ಥೆಗಳಿದ್ದರೂ ಇಲ್ಲಿನ ಮಕ್ಕಳು ಬೇರೆ ಕಡೆ ಹೋಗುತ್ತಿರುವ ಬಗ್ಗೆ, ಹೂಡಿಕೆಗೆ ಹೊರಗಿನವರು ಆಸಕ್ತಿ ತೋರದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ತಮ್ಮ ಸ್ನೇಹಿತೆಯರ ಜತೆ ಕಾಫಿ ಕುಡಿಯಲು ಹೋಗುವುದು ತಪ್ಪು ಎನ್ನುವ ಪರಿಸ್ಥಿತಿ ಇದೆ. ಹಾಗಾಗಿ ಇಲ್ಲಿನ ಕೋಮುವಾದಿ ಶಕ್ತಿಗಳನ್ನು ಹತ್ತಿಕ್ಕಲು ಕಮ್ಯೂನಲ್ ಟಾಸ್ಕ್ ಪೋರ್ಸ್ ರಚನೆ ಮಾಡಿದ್ದೆ. ಅದು ಪರಿಣಾಮಕಾರಿಯಾಗಿ ಕೆಲಸ ಮಾಡುತ್ತಿದೆ. ಇದರಿಂದಾಗಿ ಶೇ.50ರಷ್ಟು ಇಂತಹ ಕೋಮು ಸಂಘರ್ಷಗಳನ್ನು ಹತ್ತಿಕ್ಕಲು ಸಾಧ್ಯವಾಗಿದೆ. ಇಲ್ಲಿ ಶಾಂತಿಯಿಂದ ಜನ ಬದುಕುವ ವಾತಾವರಣ ನಿರ್ಮಾಣ ಆಗಬೇಕು. ಅದಕ್ಕೆ ಪೂರಕ ವಾತಾವರಣ ಸೃಷ್ಟಿಯಾಗಬೇಕು. ನಾನು ಚುನಾವಣಾ ಪ್ರಣಾಳಿಕೆ ಮಾಡುವ ಸಂದರ್ಭ ದ.ಕ. ಜಿಲ್ಲೆಯಲ್ಲಿ ಗೋಲ್ಡ್ ಆ್ಯಂಡ್ ಡೈಮಂಡ್ ಸೆಝ್ ಮಾಡಬೇಕು ಎಂದು ಹೇಳಿರುವಂತೆ ಅದನ್ನು ಮಾಡಬೇಕಿದೆ ಎಂದವರು ಹೇಳಿದರು.

ಠಾಣೆಗೆ ಬಂದವರನ್ನು ಉಪಚರಿಸಿ

ಜನರು ಪೊಲೀಸ್ ಠಾಣೆಗೆ ಬರುವವರನ್ನೆಲ್ಲಾ ಕಳ್ಳನೆಂದು ತಿಳಿಯುವ ಮನಸ್ಥಿತಿ ಬದಲಾಗಬೇಕು. ಜನಸ್ನೇಹಿ ಪೊಲೀಸ್ ಠಾಣೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಬರುವವರಿಗೆ ಚಹಾ, ಕಾಫಿ ಸಹಿತ ಆದರಿಸಬೇಕು. ಈ ವ್ಯವಸ್ಥೆಗೆ ತಲಾ 1 ಲಕ್ಷ ರೂ. ಈ ಹಿಂದೆ ನೀಡಲಾಗುತ್ತಿತ್ತು. ಅದನ್ನು ನಿಲ್ಲಿಸಲಾಗಿದೆ ಎಂದು ತಿಳಿಸಿದು ಬಂದಿದ್ದು, ಅದನ್ನು ಮತ್ತೆ ಮುಂದುವರಿಸಲಾಗುವುದು ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.

ಪೊಲೀಸರು ಸಮಾಜ ಚೆನ್ನಾಗಿರಬೇಕೆಂಬ ಆಶಯದೊಂದಿಗೆ ದಿನದ 24 ಗಂಟೆ ದುಡಿಯುತ್ತಾರೆ. ಸಮಾಜ ಅದನ್ನು ಗುರುತಿಸಬೇಕು ತಪ್ಪಾದಾಗ ಸುಲಭವಾಗಿ ಪೊಲೀಸ್ ವೈಫಲ್ಯ ಎನ್ನುವಂತೆ ಅವರ ಬದುಕಿಗೂ ನಾವು ಸಹಕಾರಿಯಾಗಬೇಕು ಎಂಬ ನಿಟ್ಟಿನಲ್ಲಿ ಮೊದಲ ಬಾರಿ ಸಚಿವನಾಗಿದ್ದಾಗ 2015ರಲ್ಲಿ ಪೊಲೀಸ್ ಕಾಲನಿಗೆ ಭೇಟಿ ನೀಡಿದ್ದಾಗ ಅಲ್ಲಿನ ಕೆಟ್ಟ ಪರಿಸ್ಥಿತಿ ಕಂಡು ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ತಿಳಿಸಿದ್ದೆ. ಬ್ರಿಟಿಷರ ಕಾಲದಲ್ಲಿ ಕಟ್ಟಿದ ಓಣಿಗಳಲ್ಲಿ ಜೀವನ ಮಾಡಲು ಅಸಾಧ್ಯವಾಗಿದ್ದು, ಅನುದಾನ ಒದಗಿಸುವಂತೆ ಕೋರಿದಾಗ ಅವರು ಒಪ್ಪಿದ್ದರು. ಅದರಂತೆ ಪೊಲೀಸರಿಗೆ ಕ್ವಾರ್ಟಸ್ಗಳ ನಿರ್ಮಾಣ ಕಾರ್ಯ ನಡೆದಿದ್ದು, ದೇಶದ ಯಾವುದೇ ರಾಜ್ಯದಲ್ಲಿ ಈ ರೀತಿಯ ಅತ್ಯಾಧುನಿಕ ಸೌಲಭ್ಯದಿಂದ ಕೂಡಿದ ಮನೆ ಕಟ್ಟಿರುವುದು ನೋಡಿಲ್ಲ. ಹಿಂದೆ ಸುಮಾರು 17 ಲಕ್ಷ ರೂ.ಗಳಿದ್ದ ಘಟಕ ವೆಚ್ಚ ಇದೀಗ 27 ಲಕ್ಷ ರೂ.ಗಳಾಗಿದೆ. ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ಪೊಲೀಸ್ ಸಿಬ್ಬಂದಿಯಿದ್ದು, ಶೇ. 45ರಷ್ಟು ಪೊಲೀಸರಿಗೆ ಕ್ವಾರ್ಟಸ್ ನೀಡುವ ಕಾರ್ಯ ಆಗಿದೆ. ಎಲ್ಲರಿಗೂ ಕ್ವಾರ್ಟಸ್ಗಳನ್ನು ಒದಗಿಸುವುದು ನಮ್ಮ ಉದ್ದೇಶವಾಗಿದೆ. ಇದಕ್ಕಾಗಿ ಕಳೆದ ಮೂರು ತಿಂಗಳ ಹಿಂದೆ ಕೇಂದ್ರ ಗೃಹ ಸಚಿವರನ್ನು ಭೇಟಿ ಮಾಡಿ ಇಲಾಖೆಗೆ ಬಂದೂಕು ಬೇಡ, ಆದರೆ ಮನೆ ನಿರ್ಮಾಣಕ್ಕೆ 5000 ಕೋಟಿ ರೂ. ಒದಗಿಸಿ ಎಂಬ ಬೇಡಿಕೆ ಇಟ್ಟಿರುವುದಾಗಿ ಡಾ. ಪರಮೇಶ್ವರ್ ಹೇಳಿದರು.

ಈ ಬಾರಿ ರಾಜ್ಯದಲ್ಲಿ 1600 ಗೃಹಗಳ ನಿರ್ಮಾಣವಾಗಿದ್ದು, ಇದಕ್ಕಾಗಿ 500 ಕೋಟಿ ರೂ. ನೀಡಲಾಗಿದ್ದು, ಮುಂದಿನ ವರ್ಷವೂ ಸಾವಿರ ಕೋಟಿ ರೂ. ನೀಡುತ್ತೇವೆ. ದ.ಕ. ಜಿಲ್ಲೆಯಲ್ಲಿ 6 ಕೋಟಿ ರೂ. ವೆಚ್ಚದ ಪೊಲೀಸ್ ಕಟ್ಟಡ ಉದ್ಘಾಟನೆ ಮಾಡಲಾಗಿದೆ ಎಂದು ಅವರು ಹೇಳಿದರು.

ಇಡೀ ದೇಶದಲ್ಲೇ ಕರ್ನಾಟಕ ಪೊಲೀಸರು ಬೆಸ್ಟ್. ಆಧುನಿಕ ತಂತ್ರಜ್ಞಾನ ಇಲಾಖೆಯನ್ನು ಮತ್ತಷ್ಟು ಸದೃಢಗೊಳಿಸಿದೆ. ಇಲಾಖೆಯಲ್ಲಿ ಸಾಕಷ್ಟು ಪ್ರತಿಭಾವಂತರಿದ್ದು, ಆಧುನಿಕ ಜಗತ್ತಿಗೆ ತಕ್ಕಂತೆ ಇಲಾಖೆ ಬೆಳೆದಿದೆ. ಆರ್ಟಿಫಿಶಿಯಲ್ ಇಂಟೆಲೆಜೆನ್ಸಿ ಚಾಲಿತ ಕ್ಯಾಮರಾಗಳ ಮೂಲಕ ತನಿಖೆ ನಡೆಸಲಾಗುತ್ತಿದೆ. ಇದರಿಂದ ಪೊಲೀಸರು ಸ್ಮಾರ್ಟ್ ಆಗಿಸಿದೆ ಎಂದು ಹೇಳಿದ ಸಚಿವರು, ಕಾರ್ಯಕ್ರಮ ನಿರೂಪಣೆ ಮಾಡಿದ ಪೊಲೀಸ್ ಸಿಬ್ಬಂದಿ ವಿವೇಕ್ ರನ್ನು ಪ್ರಶಂಸಿಸಿದರು.

ಪೊಲೀಸರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಒದಗಿಸಿ ಐಪಿಎಸ್, ಐಎಎಸ್ ಸೇರಿದಂತೆ ಉನ್ನತ ಸ್ಥಾನಕ್ಕೇರಿಸುವಂತೆ ಕರೆ ನೀಡಿದ ಸಚಿವ ಡಾ.ಪರಮೇಶ್ವರ್, ಈ ಬಗ್ಗೆ ಪೋಷಕರು ಸಂಕಲ್ಪ ಮಾಡಬೇಕೆಂದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಮಾತನಾಡಿ, ಡ್ರಗ್ಸ್ ಮತ್ತು ಟ್ರಾಫಿಕ್ ಸಮಸ್ಯೆ ನಿಯಂತ್ರಣ ಮಂಗಳೂರಿನಲ್ಲಿ ಪೊಲೀಸರಿಗೆ ದೊಡ್ಡ ಸವಾಲಾಗಿದೆ ಎಂದರು.

ಪೊಲೀಸರ ನೂತನ ಕ್ವಾರ್ಟಸ್ ಶಾಸಕರ ಭವನದಷ್ಟೇ ಉತ್ತಮವಾಗಿದೆ. ಪರಮೇಶ್ವರ್ ಗೃಹ ಸಚಿವರಾದ ಬಳಿಕ ಪೊಲೀಸ್ ಇಲಾಖೆಯಲ್ಲಿ ಅಮೂಲಾಗ್ರ ಬದಲಾವಣೆಗಳಾಗಿವೆ ಎಂದು ಐವನ್ ಡಿಸೋಜ ಹೇಳಿದರು.

ಪುತ್ತೂರು ಶಾಸಕ ಅಶೋಕ್ ರೈ ಮಾತನಾಡಿ, ಪುತ್ತೂರಿನಲ್ಲಿ ಮಹಿಳಾ ಪೊಲೀಸ್ ಠಾಣೆಗೆ 9 ಸೆಂಟ್ಸ್ ಜಾಗ ಮೀಸಲಿಡಲಾಗಿದೆ. ಅನುದಾನದ ಅಗತ್ಯವಿದೆ. ಪುತ್ತೂರಿಗೆ ಎಸ್ಪಿ ಕಚೇರಿ ಸ್ಥಳಾಂತರಿಸಬೇಕು. ಇಲ್ಲವಾದಲ್ಲಿ ಡಿಎಎರ್ ಘಟಕವನ್ನಾದರೂ ಸ್ಥಳಾಂತರಿಸಬೇಕು ಎಂದು ಆಗ್ರಹಿಸಿದರು.

ಸಂಸದ ಕ್ಯಾ. ಬ್ರಿಜೇಶ್ ಚೌಟ, ಪಶ್ಚಿಮ ವಲಯ ಐಜಿಪಿ ಅಮಿತ್ ಸಿಂಗ್, ಎಸ್ಪಿ ಯತೀಶ್ ಎನ್., ಡಿಸಿಪಿಗಳಾದ ಸಿದ್ಧಾರ್ಥ್ ಗೋಯಲ್, ರವಿಶಂಕರ್, ಕೋಸ್ಟ್ಗಾರ್ಡ್ ಕಮಾಂಡರ್ ಎಂ.ಎ. ಅಗರವಾಲ್ ಉಪಸ್ಥಿತರಿದ್ದರು.

ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಜೇಂದ್ರ ವಂದಿಸಿದರು. ವಿವೇಕ್ ಕಾರ್ಯಕ್ರಮ ನಿರೂಪಿಸಿದರು.

 

 

 

 

ಪುತ್ತೂರು ಬಿ ಕೆಟಗರಿ ಮಹಿಳಾ ಠಾಣೆಗೆ ಒಂದು ಕೋಟಿ ರೂ.

ಪುತ್ತೂರಿನಲ್ಲಿ ಮಹಿಳಾ ಪೊಲೀಸ್ ಠಾಣೆಗೆ ಜಾಗವಿದ್ದು, ಠಾಣೆ ನಿರ್ಮಾಣಕ್ಕೆ ಅನುದಾನ ಒದಗಿಸಬೇಕೆಂಬ ಶಾಸಕ ಅಶೋಕ್ ರೈಯವರ ಬೇಡಿಕೆಗೆ ಸ್ಪಂದಿಸಿದ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಬಿ ಕೆಟಗರಿಯಡಿ ಮಹಿಳಾ ಠಾಣೆ ನಿರ್ಮಾಣಕ್ಕೆ ಒಂದು ಕೋಟಿ ರೂ. ಒದಗಿಸುವುದಾಗಿ ಹೇಳಿದರು.

ಡಿಎಆರ್ ಕಚೇರಿ ಸ್ಥಳಾಂತರದ ಬೇಡಿಕೆಯ ಬಗ್ಗೆ ಅಧಿಕಾರಿಗಳಲ್ಲಿ ಪರಿಶೀಲನೆಗೆ ತಿಳಿಸುವುದಾಗಿ ಸಚಿವರು ಭರವಸೆ ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News