ಡಿ.31ರ ಒಳಗೆ ನಾರಾಯಣ ಗುರು ನಿಗಮ ರಚನೆಗೆ ಒತ್ತಾಯ

Update: 2023-12-14 09:28 GMT

ಮಂಗಳೂರು, ಡಿ.14: ಬಿಲ್ಲವ ಸಮುದಾಯದ ಬಹುದೊಡ್ಡ ಬೇಡಿಕೆಯಾಗಿರುವ ಬ್ರಹ್ಮಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ರಚನೆ ಮಾಡಿ 500 ಕೋಟಿ ರು. ಅನುದಾನವನ್ನು ಮೀಸಲಿಡಲು ಶ್ರೀ ನಾರಾಯಣ ಗುರು ವಿಚಾರ ವೇದಿಕೆಯು ರಾಜ್ಯ ಸರಕಾರಕ್ಕೆ ಡಿ.31ರ ಗಡುವು ನೀಡಿದೆ.

ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾತನಾಡಿದ ವೇದಿಕೆಯ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್, ಈ ಹಿಂದೆ ಮುಖ್ಯಮಂತ್ರಿ ಅವರನ್ನು ಭೇಟಿಯಾದಾಗ ಅಧಿವೇಶನದ ಸಮಯದಲ್ಲಿ ನಿಗಮ ರಚನೆ ಮಾಡಲು ತೊಡಕಾಗುತ್ತದೆ. ಅದರ ಬಳಿಕ ಮಾಡುವುದಾಗಿ ಭರವಸೆ ನೀಡಿದ್ದರು. ಇದೀಗ ಅಧಿವೇಶನ ಮುಗಿದು 15 ದಿನಗಳ ಒಳಗಾಗಿ ನಿಗಮ ರಚನೆ ಮಾಡಬೇಕು. ಇಲ್ಲದಿದ್ದರೆ ಜ.1ರ ನಂತರ ಸಮಾಜದ ಎಲ್ಲ ಸ್ವಾಮೀಜಿಗಳು, ಸಂಘ ಸಂಸ್ಥೆಗಳು, ಸಂಘಟನೆಗಳು, ಕ್ಷೇತ್ರದ ಪ್ರಮುಖರನ್ನು ಒಗ್ಗೂಡಿಸಿ ಬೀದಿಗಿಳಿದು ಜನಾಂದೋಲನ ರೂಪಿಸುವುದು ಅನಿವಾರ್ಯವಾಗಲಿದೆ ಎಂದು ಎಚ್ಚರಿಸಿದರು.

ಜಾತಿಗಣತಿ ಮತ್ತು ಸಾಮಾಜಿಕ, ಆರ್ಥಿಕ ಸ್ಥಿತಿಗತಿಯ ಕಾಂತರಾಜು ಆಯೋಗದ ವರದಿಯನ್ನು ಕೂಡಲೆ ಜಾರಿಗೊಳಿಸಬೇಕು. ಪ್ರವರ್ಗ 2ಎ ಅಡಿಯಲ್ಲಿ ಈಗಿರುವ 102 ಜಾತಿ ಸಮುದಾಯಗಳಿಗೆ ಇರುವ ಶೇ.15 ಮೀಸಲಾತಿಯಲ್ಲಿ ಯಾವುದೇ ವ್ಯತ್ಯಾಸ ಮಾಡಬಾರದು ಎಂದು ಸತ್ಯಜಿತ್ ಸುರತ್ಕಲ್ ಆಗ್ರಹಿಸಿದರು.

ಜತೆಗೆ ಮುಳುಗಡೆ ಸಂತ್ರಸ್ತರು, ಸಿಗಂದೂರು ಕ್ಷೇತ್ರದ ಗೊಂದಲ ನಿವಾರಣೆ, ಮಂಗಳೂರು- ಶಿವಮೊಗ್ಗ ವಿಮಾನ ನಿಲ್ದಾಣಗಳಿಗೆ ನಾಮಕರಣ, ಜಿಲ್ಲಾ ತಾಲೂಕು ಕೇಂದ್ರಗಳಲ್ಲಿ ಅಧ್ಯಯನ ಪೀಠ, ಹಾಸ್ಟೆಲ್ ನಿರ್ಮಾಣಗಳಿಗೆ ಸ್ಥಳ ಮೀಸಲು ಮುಂತಾದ ಬೇಡಿಕೆಗಳ ಬಗ್ಗೆಯೂ ಇನ್ನು 15 ದಿನದೊಳಗೆ ಸ್ಪಷ್ಟ ತೀರ್ಮಾನವನ್ನು ಸರಕಾರ ತೆಗೆದುಕೊಳ್ಳಬೇಕು. ಹಿಂದಿನ ಸರಕಾರ ಚುನಾವಣೆಗೆ ಒಂದೇ ತಿಂಗಳು ಇರುವಾಗ ಬ್ರಹ್ಮಶ್ರೀ ನಾರಾಯಣ ಗುರು ನಿಗಮದ ಆದೇಶ ಮಾಡಿತ್ತೇ ಹೊರತು ಯಾವುದೇ ಹಣಕಾಸು ನೆರವು ಒದಗಿಸಿರಲಿಲ್ಲ. ಬಳಿಕ ಹೊಸ ಸರ್ಕಾರ ರಚನೆಯಾಗಿ ಆರು ತಿಂಗಳು ಕಳೆದರೂ ಈ ನಿಟ್ಟಿನಲ್ಲಿ ಯಾವುದೇ ಪ್ರಗತಿ ಕಂಡಿಲ್ಲ. ಕಾಂಗ್ರೆಸ್‌ನ ಚುನಾವಣಾ ಪ್ರಣಾಳಿಕೆಯಲ್ಲೂ ನಿಗಮ ರಚನೆ ಘೋಷಿಸಿದ್ದರೂ ಜಾರಿಗೊಳಿಸದೆ ಹೋರಾಟ ಅನಿವಾರ್ಯವಾಗಿದೆ ಎಂದು ಸತ್ಯಜಿತ್ ಸುರತ್ಕಲ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಪ್ರಮುಖರಾದ ರಾಕೇಶ್ ಪೂಜಾರಿ, ಶಶಿಧರ್ ಅಮೀನ್, ನವೀನ್ ಪೂಜಾರಿ ಮತ್ತಿತರರಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News