ಮಂಗಳೂರು: ತಡರಾತ್ರಿ ಅಸ್ವಸ್ಥ ಸ್ಥಿತಿಯಲ್ಲಿ ಯುವತಿ ಪತ್ತೆ; ಸಾಮೂಹಿಕ ಅತ್ಯಾಚಾರ ಶಂಕೆ

ಉಳ್ಳಾಲ: ಪಶ್ಚಿಮ ಬಂಗಾಳ ಮೂಲದ ಯುವತಿಯೋರ್ವಳು ತೀವ್ರ ಅಸ್ವಸ್ಥಗೊಂಡ ಸ್ಥಿತಿಯಲ್ಲಿ ಸ್ಥಳೀಯರಿಗೆ ಸಿಕ್ಕಿರುವ ಘಟನೆ ರಾಣಿಪುರ ಸಮೀಪದ ನೇತ್ರಾವತಿ ನದಿ ಬಳಿ ಬುಧವಾರ ತಡರಾತ್ರಿ ನಡೆದಿದೆ. ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿರುವ ಬಗ್ಗೆ ಶಂಕಿಸಲಾಗಿದೆ.
ತೀವ್ರ ಅಸ್ವಸ್ಥಗೊಂಡಿರುವ ಯುವತಿಯನ್ನು ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ಘಟನೆ ಕುರಿತು ತನಿಖೆ ನಡೆಸುತ್ತಿದ್ದಾರೆ.
ರಿಕ್ಷಾ ಚಾಲಕ ಸೇರಿ ಮೂವರು ವ್ಯಕ್ತಿಗಳು ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ದೂರಲಾಗಿದ್ದು, ಸಂಶಯದ ಮೇರೆಗೆ ರಿಕ್ಷಾ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.
ಯುವಕರ ತಂಡ ಯುವತಿಯನ್ನು ರಾಣಿಪುರದ ನೇತ್ರಾವತಿ ನದಿ ತಟದ ಬಳಿಯ ಮನೆಗೆ ಕರೆತಂದು ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಉದ್ಯೋಗ ಅರಸಿ ಬಂದಿದ್ದ ಪಶ್ಚಿಮ ಬಂಗಾಳ ಮೂಲದ ಯುವತಿ ಕೇರಳದ ಉಪ್ಪಳ ಎಂಬಲ್ಲಿ ವಾಸವಾಗಿದ್ದು, ಸ್ನೇಹಿತನ ಜೊತೆಗೆ ಮಂಗಳೂರಿಗೆ ಬಂದಿದ್ದ ವೇಳೆ ಇಬ್ಬರ ನಡುವೆ ಗಲಾಟೆಯಾಗಿದೆ. ಈ ವೇಳೆ ಆಕೆ ಒಬ್ಬಳೇ ಮಧ್ಯರಾತ್ರಿ ಹೊರಗೆ ಬಂದಿದ್ದಾಳೆ. ಈ ವೇಳೆ ಸಿಕ್ಕ ರಿಕ್ಷಾ ಚಾಲಕನ ಬಳಿ ಸಹಾಯ ಕೇಳಿದ್ದಾಳೆ. ಸಹಾಯ ಮಾಡುವ ನೆಪದಲ್ಲಿ ತನ್ನ ವಾಹನದಲ್ಲಿ ಕುಳ್ಳಿರಿಸಿದ ಚಾಲಕ ಆಕೆಗೆ ಅಮಲು ಪದಾರ್ಥ ನೀಡಿ ಸ್ನೇಹಿತರ ಜೊತೆಗೆ ಸೇರಿ ಕೃತ್ಯವೆಸಗಿದ್ದಾನೆ ಎಂದು ತಿಳಿದು ಬಂದಿದೆ.
ಮೈಪೂರ್ತಿ ಗಾಯವಾಗಿದ್ದ ಯುವತಿ ತಡರಾತ್ರಿ ವೇಳೆ ಸ್ಥಳೀಯರೊಬ್ಬರ ಮನೆ ಬಾಗಿಲು ಬಡಿದಿದ್ದಾಳೆ. ನೀರು ಕೇಳುತ್ತಿದ್ದಂತೆ ಅಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಈ ವೇಳೆ ಮನೆಮಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಯುವತಿಯನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳಕ್ಕೆ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಭೇಟಿ ನೀಡಿದ್ದಾರೆ.