ಮಂಗಳೂರು | ಎ.19, 20ರಂದು ಬ್ಯಾರೀಸ್ ಬಹುಭಾಷಾ ಸೌಹಾರ್ದ ಉತ್ಸವ

ಮಂಗಳೂರು : ಕರ್ನಾಟಕ ಬ್ಯಾರೀಸ್ ಸೋಶಿಯಲ್ ಮತ್ತು ಕಲ್ಚರಲ್ ಫೋರಂ ವತಿಯಿಂದ ಬ್ಯಾರಿ ಬಹುಭಾಷಾ ಸೌಹಾರ್ದ ಉತ್ಸವವು ಎ.19 ಮತ್ತು 20ರಂದು ನಡೆಯಲಿದ್ದು, ಇದರ ಪ್ರಮುಖ ಕಾರ್ಯಕ್ರಮವಾದ ಉದ್ಯೋಗ ಮೇಳದಲ್ಲಿ ದೇಶ ವಿದೇಶಗಳ 100ಕ್ಕೂ ಅಧಿಕ ಕಂಪನಿಗಳು ಭಾಗವಹಿಸಲಿವೆ.
ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಉತ್ಸವದ ಪ್ರಮುಖರಾದ ಜಿ.ಎ.ಬಾವ, ಉದ್ಯೋಗ ಮೇಳಕ್ಕಾಗಿ ಈಗಾಗಲೇ 2,700ಕ್ಕೂ ಅಧಿಕ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ. 5,000ಕ್ಕೂ ಅಧಿಕ ಮಂದಿ ಭಾಗವಹಿಸುವ ನಿರೀಕ್ಷೆ ಇದೆ ಎಂದರು.
ಎ.19ರಂದು ಬೆಳಗ್ಗೆ 10ಕ್ಕೆ ಮಂಗಳೂರಿನ ಕರಾವಳಿ ಉತ್ಸವ ಮೈದಾನದಲ್ಲಿ ಉದ್ಘಾಟನೆಗೊಳ್ಳಲಿದ್ದು, ಶೈಕ್ಷಣಿಕ ಹಾಗೂ ವೃತ್ತಿ ಮಾರ್ಗದರ್ಶನ, ವೈದ್ಯಕೀಯ ಮತ್ತು ರಕ್ತದಾನ ಶಿಬಿರವನ್ನು ಆಯೋಜಿಸಲಾಗಿದೆ.
ಉದ್ಯಮಿಗಳ ಸಮಾಗಮವೂ ನಡೆಯಲಿದ್ದು, ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ ನಡೆಯಲಿದೆ ಎಂದು ಅವರು ಹೇಳಿದು.
ಉದ್ಯೋಗಾಕಾಂಕ್ಷಿಗಳನ್ನು ತಾಲೂಕು ಮಟ್ಟ ಹಾಗೂ ಶೈಕ್ಷಣಿಕ ನೆಲೆಯಲ್ಲಿ ಅವರಿಗೆ ಪೂರಕವಾದ ಉದ್ಯೋಗ ಒದಗಿಸುವಲ್ಲಿ ಕ್ರಮ ವಹಿಸಲಾಗುತ್ತದೆ. ಎಲ್ಲಾ ವರ್ಗದವರೂ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ. ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರತಿಭಾನ್ವಿತ 600 ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ ಎಂದು ಕಾರ್ಯಕ್ರಮದ ಸಂಯೋಜಕರಾದ ಫರ್ಝಾನ ಮಾಹಿತಿ ನೀಡಿದರು.
ಯುವಕರಿಗೆ ಭವಿಷ್ಯದ ಕುರಿತಾಗಿ ಮಾರ್ಗದರ್ಶನ ನೀಡುವ ಮತ್ತು ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದ್ದು, ಎ.20ರಂದು ಸಂಜೆ 7ಕ್ಕೆ ಸಮಾರೋಪ ಸಮಾರಂಭ ನಡೆಯಲಿದೆ ಎಂದು ಅವರು ಹೇಳಿದರು.
ಗೋಷ್ಟಿಯಲ್ಲಿ ಮುಖಂಡರಾದ ಹೈದರ್ ಪರ್ತಿಪ್ಪಾಡಿ, ಸಂಶೀರ್ ಉಪಸ್ಥಿತರಿದ್ದರು.