ಗಾಂಧಿ ಜೀವನ ಅಧ್ಯಯನದ ಪಾಠಶಾಲೆ: ನಳಿನ್ ಕುಮಾರ್ ಕಟೀಲು

Update: 2023-10-02 05:55 GMT

 ಮಂಗಳೂರು, ಅ.2: ಅಹಿಂಸಾ ಚಳವಳಿಯ ಮೂಲಕ ದೇಶದ ಜನರನ್ನು ಒಗ್ಗೂಡಿಸಿ ಗುಲಾಮಗಿರಿಯಿಂದ ಹೊರತಂದ ಮಹಾತ್ಮ ಗಾಂಧಿ ಅವರ ಜೀವನ ಅಧ್ಯಯನದ ಪಾಠ ಶಾಲೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಸಂಸದ ನಳಿನ್ ಕುಮಾರ್ ಕಟೀಲು ಅಭಿಪ್ರಾಯಿಸಿದ್ದಾರೆ.

ಮಂಗಳೂರಿನ ಪುರಭವನದ ಎದುರಿನ ರಾಜಾಜಿ ಪಾರ್ಕ್ನಲ್ಲಿ ಜಿಲ್ಲಾಡಳಿತ ಹಾಗೂ ಭಾರತ್ ಸೇವಾದಳದ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಹಾತ್ಮ ಗಾಂಧಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡುತ್ತಿದ್ದರು.

ಗಾಂಧಿ ಎಂದರೆ ಒಂದು ಚಿಂತನೆ, ವಿಚಾರಧಾರೆ. ದೇಶದಲ್ಲಿ ರಾಮರಾಜ್ಯದ ಕನಸು ಕಂಡಿದ್ದ ಮಹಾತ್ಮ ಗಾಂಧಿ ದುಶ್ಚಟಗಳಿಂದ ದೇಶವನ್ನು ಮುಕ್ತಗೊಳಿಸುವ ಆಶಯ ಹೊಂದಿದ್ದರು. ರಾಷ್ಟ್ರದ ಉನ್ನತಿಯ ಕಲ್ಪನೆಯೊಂದಿಗೆ ಸ್ವದೇಶಿ ಪರಿಕಲ್ಪನೆಗೆ ಒತ್ತು ನೀಡಿದ್ದರು. ಸ್ವಚ್ಛತೆಯ ಮೂಲಕ ಆರೋಗ್ಯಕರ ರಾಷ್ಟ್ರ ನಿರ್ಮಾಣವನ್ನು ತಮ್ಮ ನಡವಳಿಕೆ ಮೂಲಕ ಪ್ರತಿಪಾದಿಸಿದವರು ಗಾಂಧೀಜಿ. ಲಾಲ್ ಬಹಾದ್ದೂರ್ ಶಾಸ್ತ್ರಿ ಅವರು ಜೈ ಜವಾನ್ ಜೈ ಕಿಸಾನ್ ಎಂದು ಹೇಳುವ ಮೂಲಕ ದೇಶದ ಆರ್ಥಿಕತೆಗೆ ಶಕ್ತಿ ತುಂಬಿದ್ದರು. ಪ್ರಸಕ್ತ ಭಾರತದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಈ ಪರಿಕಲ್ಪನೆಯಲ್ಲಿ ದೇಶವನ್ನು ಮುನ್ನಡೆಸುತ್ತಿದ್ದಾರೆ ಎಂದವರು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಶಾಸಕ ವೇದವ್ಯಾಸ ಕಾಮತ್ ಮಾತನಾಡಿ, ಶಾಂತಿಯ ಮೂಲಕ ಚಳವಳಿ ನಡೆಸಬಹುದು ಎಂಬುದನ್ನು ತೋರಿಸಿದವರು ಗಾಂಧೀಜಿ. ಸರಳತೆ, ಸತ್ಯದ ಮಾರ್ಗದಲ್ಲಿ ಭಯದ ಅಗತ್ಯವಿಲ್ಲ ಎಂಬುದನ್ನು ತೋರಿಸಿದ್ದ ಗಾಂಧೀಜಿಯವರ ಆಶಯದಂತೆ ನಡುರಾತ್ರಿಯಲ್ಲೂ ಮಹಿಳೆ ಒಬ್ಬಂಟಿಯಾಗಿ ತಿರುಗಾಡಲು ಸಾಧ್ಯವಾಗುವ ರಾಮರಾಜ್ಯದ ಕನಸನ್ನು ನನಸಾಗಿಸಬೇಕು ಎಂದರು.

ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಪ್ರಚಾರ ಇಲಾಖೆ ವತಿಯಿಂದ ಪ್ರೌಢಶಾಲೆ, ಪಿಯುಸಿ ಹಾಗೂ ಪದವಿ ವಿದ್ಯಾರ್ಥಿಗಳಿಗಾಗಿ ನಡೆಸಲಾದ ಜಿಲ್ಲಾ ಮಟ್ಟದ ಬಾಪೂಜಿ ಪ್ರಬಂಧ ಸ್ಪರ್ಧೆಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಈ ಸಂದರ್ಭ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಅಪರ ಜಿಲ್ಲಾಧಿಕಾರಿ ಡಾ.ಸಂತೋಷ್, ನಗರ ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್, ಜಿಪಂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಆನಂದ್, ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್, ಪಾಲಿಕೆ ಆಯುಕ್ತ ಆನಂದ್, ಸೇವಾದಳದ ಸುಧೀರ್ ಟಿ.ಕೆ., ಪ್ರಭಾಕರ ಶ್ರೀಯಾನ್ ಹಾಗೂ ಇತರರು ಉಪಸ್ಥಿತರಿದ್ದರು.

ಸೇವಾದಳದ ಬಶೀರ್ ಬೈಕಂಪಾಡಿ ಸ್ವಾಗತಿಸಿದರು. ವಾರ್ತಾಧಿಕಾರಿ ರವಿರಾಜ್ ವಂದಿಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News