ಪರೀಕ್ಷಾ ಶುಲ್ಕ ಪಾವತಿಸಿದರೂ ಮಂಗಳೂರು ವಿವಿಯಲ್ಲಿ ಹಾಲ್ ಟಿಕೆಟ್ ಕೊಡುತ್ತಿಲ್ಲ: ಆರೋಪ
ಮಂಗಳೂರು, ಡಿ.9: ಪದವಿ ಶಿಕ್ಷಣದ ಪರೀಕ್ಷಾ ಶುಲ್ಕವನ್ನು ಪಾವತಿಸಿದರೂ, ಆಡಳಿತ ಮಂಡಳಿ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ: ಶುಲ್ಕ ಪಾವತಿ ಸ್ವೀಕೃತಿಯಾಗಿಲ್ಲ ಎನ್ನುವ ಕಾರಣ ನೀಡಿ ಮತ್ತೆ ಶುಲ್ಕ ಕಟ್ಟುವಂತೆ ಒತ್ತಡ ಹೇರಿದೆ. ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ ಬಳಿಕ ಕಾಲೇಜು ಆಡಳಿತ ಮಂಡಳಿ ಶುಲ್ಕ ಪಾವತಿಯಾಗಿದೆ ಎಂದು ಹೇಳುತ್ತಿದ್ದು, ಹಾಲ್ ಟಿಕೆಟ್ ಬೇಕಾದರೆ ದೂರು ಹಿಂಪಡೆಯುವಂತೆ ಒತ್ತಾಯಿಸುತ್ತಿದೆ ಎಂದು ವಿದ್ಯಾರ್ಥಿಗಳು ಮತ್ತು ಹೆತ್ತವರು ಆರೋಪಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೊಣಾಜೆಯ ಪಿ.ಎ. ಕಾಲೇಜಿನ ವಿದ್ಯಾರ್ಥಿ ಆಯಿಷಾ ಅಫ್ನಾ, ತಾನು ದ್ವಿತೀಯ ವರ್ಷದ ಬಿಎಸ್ಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ. ನ.18ರಂದು ಸಮಗ್ರ ವಿಶ್ವವಿದ್ಯಾನಿಯ ಹಾಗೂ ಕಾಲೇಜು ನಿರ್ವಹಣ ವ್ಯವಸ್ಥೆ (ಯುಯುಸಿಎಂಎಸ್) ಪೋರ್ಟಲ್‌ನಲ್ಲಿ ಪರೀಕ್ಷಾ ಶುಲ್ಕ 3,200 ರೂ. ಪಾವತಿಸಿದ್ದು, ಅದು ಯಶಸ್ವಿಯಾಗಿ ಸ್ವೀಕೃತಿಯಾಗಿದೆ. ಆದರೆ ಕಾಲೇಜು ಆಡಳಿತ ಮಂಡಳಿ ಕಾಲೇಜಿನ ಒಟ್ಟು 26 ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕ ಪಾವತಿಯಾಗಿಲ್ಲ ಮತ್ತೊಮ್ಮೆ ಪಾವತಿಸುವಂತೆ ಒತ್ತಡ ಹೇರಿದೆ. ಈ ಬಗ್ಗೆ ಪರಿಶೀಲಿಸಿದಾಗ ವಿದ್ಯಾರ್ಥಿಗಳು ಕಟ್ಟಿದ ಹಣ ಕಂಪ್ಯೂಟರ್‌ನಲ್ಲಿ ‘ಇನಿಶಿಯೇಟೆಡ್’ ಎಂದು ತೋರಿಸುತ್ತಿತ್ತು ಎಂದು ತಿಳಿಸಿದರು.
ಈ ಬಗ್ಗೆ ಡಿ.3ರಂದು ಕೊಣಾಜೆ ಠಾಣೆಗೆ ದೂರು ನೀಡಿದ್ದು, ಅದರ ಪ್ರತಿಯನ್ನು ಉನ್ನತ ಶಿಕ್ಷಣ ಸಚಿವರು, ಸ್ಥಳೀಯ ಶಾಸಕರಾದ ಯು.ಟಿ.ಖಾದರ್ ಮತ್ತು ಪೊಲೀಸ್ ಆಯುಕ್ತರಿಗೆ ನೀಡಲಾಗಿತ್ತು. ಈ ವಿಚಾರ ತಿಳಿಯುತ್ತಿದ್ದಂತೆ ಆಡಳಿತ ಮಂಡಳಿಯಿಂದ ದೂರು ವಾಪಾಸು ಪಡೆಯುವಂತೆ ಒತ್ತಡ ಹೇರಲಾಗಿತ್ತು. ಈ ನಡುವೆ ಡಿ.7ರಂದು ಮಧ್ಯಾಹ್ನ ಬಳಿಕ ಪೋರ್ಟಲ್‌ನಲ್ಲಿ ಹಣ ಪಾವತಿ ‘ಸಕ್ಸಸ್’ ಎಂದು ತೋರಿಸಿದೆ. ಡಿ.12ರಂದು ಸೆಮಿಸ್ಟರ್ ಪರೀಕ್ಷೆಯಿದ್ದು, ಇಲ್ಲಿಯ ವರೆಗೆ ಹಾಲ್ ಟಿಕೇಟ್ ನೀಡಿಲ್ಲ ಎಂದು ಆರೋಪಿಸಿದರು.
ವಿದ್ಯಾರ್ಥಿಗಳ ಪರ ವಕೀಲ ಸಹೀದ್ ಬಡ್ಡೂರು ಅವರು ಮಾತನಾಡಿ, ವಿದ್ಯಾರ್ಥಿಗಳಿಂದ ಮತ್ತೊಮ್ಮೆ ಹಣ ಪಡೆಯುವ ವ್ಯವಸ್ಥಿತ ಜಾಲ ಕಾರ್ಯಾಚರಿಸುತ್ತಿದೆ. ಆದ್ದರಿಂದ ಸಂಬಂಧಪಟ್ಟ ಇಲಾಖೆ ಹಾಗೂ ಸರಕಾರ ಈ ಬಗ್ಗೆ ತನಿಖೆ ನಡೆಸಿ, ಬಡ ವಿದ್ಯಾರ್ಥಿಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಒತ್ತಾಯಿಸಿದರು.
ವಿದ್ಯಾರ್ಥಿನಿ ರೇಷ್ನಾ ಮಿಸ್ರಿಯಾ, ವಿದ್ಯಾರ್ಥಿನಿಯ ತಂದೆ ಅಬ್ದುಲ್ ಖಾದರ್ ಕೆ.ಎಚ್. ಉಪಸ್ಥಿತರಿದ್ದರು.