ಅತಿಥಿ ಉಪನ್ಯಾಸಕರ ಗೌರವಧನ ಕಡಿತಗೊಳಿಸಲು ಮುಂದಾಗಿರುವ ಮಂಗಳೂರು ವಿವಿ

Update: 2024-06-10 05:52 GMT

ಮಂಗಳೂರು: ಮಂಗಳೂರು ವಿಶ್ವವಿದ್ಯಾ ನಿಲಯ ಮತ್ತು ಅದರ ಘಟಕ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರ ಗೌರವಧನ ಮೊತ್ತವನ್ನು ಕಡಿತ ಮಾಡಲು ವಿವಿ ಆಡಳಿತ ಮುಂದಾಗಿರುವ ಘಟನೆ ಬೆಳಕಿಗೆ ಬಂದಿದೆ.

ತೀವ್ರ ಹಣಕಾಸಿನ ಬಿಕ್ಕಟ್ಟನ್ನು ಎದುರಿಸುತ್ತಿರುವ ಮಂಗಳೂರು ವಿಶ್ವವಿದ್ಯಾನಿಲಯವು ಹಿಂದಿನ ಕುಲಪತಿ ಅವರ ಅವಧಿಯಲ್ಲಿ ತಾತ್ಕಾಲಿಕವಾಗಿ ನೇಮಕಗೊಂಡಿದ್ದ ಸುಮಾರು 120 ಸಿಬ್ಬಂದಿಯನ್ನು ಈಗಾಗಲೇ ಕರ್ತವ್ಯದಿಂದ ಬಿಡುಗಡೆಗೊಳಿಸಿದೆ. ಇದೀಗ ವೆಚ್ಚ ಕಡಿಮೆ ಮಾಡುವ ಉದ್ದೇಶಕ್ಕಾಗಿ ಅತಿಥಿ ಉಪನ್ಯಾಸಕರ ವೇತನದ ಮೇಲೆ ಕತ್ತರಿ ಹಾಕುವ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ. ಇದರಿಂದ ಆತಂಕಗೊಂಡಿರುವ ಉಪನ್ಯಾಸಕರು ರಾಜ್ಯದ ಉನ್ನತ ಶಿಕ್ಷಣ ಸಚಿವರಿಗೆ, ಕುಲಪತಿ ಮತ್ತು ಸ್ಥಳೀಯ ಶಾಸಕರು ಹಾಗೂ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಅವರಿಗೆ ಮನವಿ ಸಲ್ಲಿಸಿ ತಮಗೆ ನ್ಯಾಯ ಒದಗಿಸುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿದು ಬಂದಿದೆ.

ಮಂಗಳೂರು ವಿಶ್ವವಿದ್ಯಾನಿಲಯವು ಪದವಿ ಹಾಗೂ ಸ್ನಾತಕೋತ್ತರ ಪದವಿ ವಿಭಾಗಗಳ ಅತಿಥಿ ಉಪನ್ಯಾಸಕರ 2024ರ ಫೆಬ್ರವರಿ, ಮಾರ್ಚ್, ಎಪ್ರಿಲ್ ಹಾಗೂ ಮೇ ತಿಂಗಳ ಗೌರವಧನ ಸೇರಿದಂತೆ ಒಟ್ಟು ನಾಲ್ಕು ತಿಂಗಳ ವೇತನವನ್ನು ಈ ತನಕ ಪಾವತಿಸಿಲ್ಲ. ಈ ರೀತಿಯ ಗೌರವಧನ ವಿಳಂಬದಿಂದಾಗಿ ಅತಿಥಿ ಉಪನ್ಯಾಸಕರು ಬಹಳಷ್ಟು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇತ್ತೀಚೆಗೆ ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿಗಳು ಮುಂದಿನ ದಿನಗಳಲ್ಲಿ ಅತಿಥಿ ಉಪನ್ಯಾಸಕರ ಗೌರವಧನ ಕಡಿತಗೊಳಿಸಲಾಗುವುದು ಎಂಬ ಹೇಳಿಕೆ ನೀಡಿರುವುದು ಅವರಲ್ಲಿ ಇನ್ನಷ್ಟು ಅಭದ್ರತೆ ಕಾಡುವಂತೆ ಮಾಡಿದೆ ಎಂದು ಅತಿಥಿ ಉಪನ್ಯಾಸಕರು ಅಭಿಪ್ರಾಯಪಟ್ಟಿದ್ದಾರೆ.

ಖಾಯಂ ಉಪನ್ಯಾಸಕರಂತೆ ಕಾಲೇಜಿನ ಎಲ್ಲಾ ಅತಿಥಿ ಉಪನ್ಯಾಸಕರು ಪಠ್ಯ ಹಾಗೂ ಪಠ್ಯೇತರ ಕೆಲಸಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ. ಇಂದಿನ ಬೆಲೆ ಏರಿಕೆಯ ದಿನಗಳಲ್ಲಿ ಈಗ ಇರುವ ಗೌರವಧನವನ್ನು ಕಡಿತಗೊಳಿಸಿದರೆ ಮತ್ತಷ್ಟು ಸಂಕಷ್ಟಕ್ಕೆ ಸಿಲುಕುವ ಸಾಧ್ಯತೆ ಇದೆ. ಅಲ್ಲದೇ, ರಾಜ್ಯ ಸರಕಾರ ಇತ್ತೀಚೆಗೆ ಸರಕಾರ ಪ್ರಥಮ ದರ್ಜೆ ಕಾಲೇಜು ಅತಿಥಿ ಉಪನ್ಯಾಸಕರ ವೇತನವನ್ನು ಹೆಚ್ಚಳ ಮಾಡಿ, ಇತರೆ ಪ್ರಯೋಜನಗಳನ್ನು ನೀಡಿರುವುದರ ಜೊತೆಗೆ ಸೇವಾ ಭದ್ರತೆಯನ್ನು ನೀಡಿರುತ್ತದೆ. ಆದರೆ ವಿಶ್ವವಿದ್ಯಾನಿಲಯ ಇಂತಹ ಯಾವುದೇ ಪ್ರಯೋಜನವನ್ನು ನೀಡುತ್ತಿಲ್ಲ. ಬದಲಾಗಿ ಅತಿಥಿ ಉಪನ್ಯಾಸಕರ ವೇತನ ಕಡಿತಗೊಳಿಸಲು ಮುಂದಾಗುತ್ತಿರುವುದು ನಿಜಕ್ಕೂ ಶೋಚನೀಯ ಎಂದು ಉಪನ್ಯಾಸಕರು ಹೇಳಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯವು ಅತಿಥಿ ಉಪನ್ಯಾಸಕರಿಗೆ ಕೋವಿಡ್ ಸಮಯದಲ್ಲಿ 4 ತಿಂಗಳ ವೇತನವನ್ನು ನೀಡುವುದಾಗಿ ಭರವಸೆ ನೀಡಿತ್ತು. ಈ ಸಂಬಂಧ ಸಿಂಡಿಕೇಟ್ ಸಭೆಯಲ್ಲೂ ಅಂಗೀಕಾರ ನೀಡಲಾಗಿತ್ತು. ಆದರೆ, ಇದುವರೆಗೂ ಒಂದು ತಿಂಗಳ ವೇತನ ಮಾತ್ರವೇ ಪಾವತಿ ಮಾಡಿ ಉಳಿದ 3 ತಿಂಗಳ ವೇತನವನ್ನು ಇದುವರೆಗೂ ಪಾವತಿ ಮಾಡಿರುವುದಿಲ್ಲ. ತಮಗೆ ಬಾಕಿ ಇರುವ ಕೊರೋನ ಸಮಯದ ವೇತನ ಹಾಗೂ ಈಗ ಬಾಕಿ ಇರುವ 4 ತಿಂಗಳ ವೇತನ ಪಾವತಿಸಲು ಹಾಗೂ ವೇತನ ಕಡಿತ ಮಾಡದಂತೆ ಮಂಗಳೂರು ವಿವಿಗೆ ನಿರ್ದೇಶನ ನೀಡುವಂತೆ ಅತಿಥಿ ಉಪನ್ಯಾಸಕರು ಸರಕಾರವನ್ನು ಆಗ್ರಹಿಸಿದ್ದಾರೆ.

ಕೊಡಗನ್ನು ಮತ್ತೆ ಮಂಗಳೂರು ವಿವಿಗೆ ಸೇರಿಸಲು ಆಗ್ರಹ: ಕಳೆದ ವರ್ಷ ಮಂಗಳೂರು ವಿವಿಯಿಂದ ವಿಭಜನೆಗೊಂಡು ಪ್ರತ್ಯೇಕವಾಗಿ ಅಸ್ತಿತ್ವಕ್ಕೆ ಬಂದಿರುವ ಕೊಡಗು ವಿವಿ ಕೂಡಾ ಆರ್ಥಿಕವಾಗಿ ಸೊರಗುತ್ತಿದ್ದು, ಈ ಕಾರಣಕ್ಕಾಗಿ ಮತ್ತೆ ಮಂಗಳೂರು ವಿವಿಯಲ್ಲಿ ವಿಲೀನ ಮಾಡುವಂತೆ ಕೊಡಗು ವಿವಿಯಲ್ಲಿರುವ ಹಿರಿಯ ಪ್ರೊಫೆಸರ್‌ಗಳು ರಾಜ್ಯ ಸರಕಾರಕ್ಕೆ ಪತ್ರ ಬರೆದು ವಿನಂತಿಸಿದ್ದಾರೆ ಎಂದು ತಿಳಿದು ಬಂದಿದೆ.

ರಾಜ್ಯ ಸರಕಾರವು ಹೊಸ ವಿವಿಗೆ ಅನುದಾನ ಒದಗಿಸಿಲ್ಲ. ಹಣಕಾಸಿನ ಕೊರತೆಯಿಂದಾಗಿ ಸಂಕಷ್ಟದಲ್ಲಿರುವ ವಿವಿಯನ್ನು ಮತ್ತೆ ಮಂಗಳೂರು ವಿಶ್ವವಿದ್ಯಾನಿಲಯಕ್ಕೆ ಸೇರಿಸುವಂತೆ ಮಂಗಳೂರು ವಿವಿ ಕುಲಪತಿ ಅವರಿಗೂ ಕೊಡಗು ವಿವಿ ಹಿರಿಯ ಪ್ರಾಧ್ಯಾಪಕರು ಆಗ್ರಹಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಿಜೆಪಿ ನೇತೃತ್ವದ ಸರಕಾರ ರಾಜ್ಯದಲ್ಲಿ ಆಡಳಿತದಲ್ಲಿದ್ದಾಗ ಮಂಗಳೂರು ವಿವಿ ವಿಭಜನಗೊಂಡು ಪ್ರತ್ಯೇಕ ಕೊಡಗು ವಿವಿ ಆಗಿ ಅಸ್ತಿತ್ವಕ್ಕೆ ಬಂದಿತ್ತು. ಸರಕಾರ ಅನುದಾನ ಒದಗಿಸದ ಹಿನ್ನೆಲೆಯಲ್ಲಿ ಎರಡೂ ವಿವಿಗಳಿಗೂ ಕಷ್ಟ ಎದುರಾಗಿದೆ. ಆರ್ಥಿಕ ಬಲ ಇಲ್ಲದೆ ಸೊರಗುತ್ತಿದೆ.

ವಿವಿ ಕಾಲೇಜ್ ನಿರ್ವಹಣೆಗೆ ಸರಕಾರಕ್ಕೆ ಪ್ರಸ್ತಾವ

ಮಂಗಳೂರು ವಿವಿಯ ಮಂಗಳಗಂಗೋತ್ರಿ ಕ್ಯಾಂಪಸ್‌ನಲ್ಲಿರುವ ವಿವಿ ಪ್ರಥಮ ದರ್ಜೆ ಕಾಲೇಜನ್ನು ರಾಜ್ಯ ಸರಕಾರ ವಹಿಸಿಕೊಂಡು ಕಾಲೇಜು ಶಿಕ್ಷಣ ಇಲಾಖೆ ಮೂಲಕ ನಿರ್ವಹಿಸುವಂತೆ ಆಗ್ರಹಿಸಿ ಶುಕ್ರವಾರ ನಡೆದ ಸಿಂಡಿಕೇಟ್ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಾಲೇಜಿಗೆ ಪ್ರಥಮ ವರ್ಷದ ಪದವಿ ತರಗತಿಗೆ ಇನ್ನೂ ಪ್ರವೇಶಾತಿ ನಡೆದಿಲ್ಲ. ಕಾಲೇಜನ್ನು ಮುಚ್ಚುವುದಕ್ಕಾಗಿ ಪ್ರವೇಶವನ್ನು ಸ್ಥಗಿತಗೊಳಿಸಲಾಗಿದೆ ಎಂದು ಹೇಳಲಾಗಿತ್ತು. ವಿವಿ ಕ್ಯಾಂಪಸ್‌ನಲ್ಲಿರುವ ಕಾಲೇಜನ್ನು ಬಂದ್ ಮಾಡದಂತೆ ಸಿಂಡಿಕೇಟ್ ಸಭೆಯಲ್ಲೂ ಸಲಹೆ ವ್ಯಕ್ತವಾಗಿದೆ.

ವಿವಿ ಕ್ಯಾಂಪಸ್‌ನ ಕಾಲೇಜಿನ ನಿರ್ವಹಣೆಗೆ ಪ್ರತಿವರ್ಷ ಕೋಟ್ಯಾಂತರ ರೂ. ಹಣ ಅಗತ್ಯವಿದೆ. ಆದರೆ ಕಾಲೇಜಿಗೆ ಬರುವ ಆದಾಯ 18 ಲಕ್ಷ ರೂ. ಈ ಕಾರಣದಿಂದಾಗಿ ವಿವಿಗೆ ಕಾಲೇಜಿನ ನಿರ್ವಹಣೆ ಸವಾಲಾಗಿ ಪರಿಣಮಿಸಿದೆ. ವಿವಿ ವ್ಯಾಪ್ತಿಯಲ್ಲಿರುವ ಎಲ್ಲ ಘಟಕ ಕಾಲೇಜುಗಳನ್ನು ಕಾಲೇಜು ಶಿಕ್ಷಣ ಇಲಾಖೆಗೆ ಹಸ್ತಾಂತರಿಸುವ ನಿಟ್ಟಿನಲ್ಲಿ ಸರಕಾರಕ್ಕೆ ಪ್ರಸ್ತಾವ ಸಲ್ಲಿಸುವ ಬಗ್ಗೆ ಸಿಂಡಿಕೇಟ್ ಸಭೆ ನಿರ್ಣಯ ಕೈಗೊಂಡಿದೆ ಎಂದು ಮೂಲಗಳು ತಿಳಿಸಿವೆ.

ತರಗತಿಗೆ ಪ್ರವೇಶ ಸ್ಥಗಿತಗೊಂಡ ಬಗ್ಗೆ ವರದಿ ಮಾಡಿದ್ದ ‘ವಾರ್ತಾಭಾರತಿ’

ಮಂಗಳೂರು ವಿಶ್ವವಿದ್ಯಾನಿಲಯದ ಮಂಗಳಗಂಗೋತ್ರಿ ಕ್ಯಾಂಪಸ್‌ನಲ್ಲಿರುವ ವಿವಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮೊದಲ ವರ್ಷದ ಪದವಿ ತರಗತಿಗೆ ಪ್ರವೇಶ ಸ್ಥಗಿತಗೊಂಡ ವಿಚಾರದ ಬಗ್ಗೆ ‘ವಾರ್ತಾಭಾರತಿ’ ಈ ಹಿಂದೆ ವರದಿ ಮಾಡಿತ್ತು. ವರದಿಯನ್ನು ಆಧರಿಸಿ ಹಲವು ವಿದ್ಯಾರ್ಥಿ ಸಂಘಟನೆಗಳು ಕಾಲೇಜು ಮುಚ್ಚದಂತೆ ಸ್ಪೀಕರ್ ಯು.ಟಿ.ಖಾದರ್, ವಿವಿ ಕುಲಪತಿ ಧರ್ಮ ಅವರಿಗೆ ಮನವಿಯನ್ನು ಸಲ್ಲಿಸಿತ್ತು. ಅಲ್ಲದೆ ವಿವಿಧ ಸಂಘಟನೆಗಳಿಂದ ಧರಣಿ ನಡೆದಿತ್ತು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News