ಮಂಗಳೂರಿನಲ್ಲಿ ಗುಂಪು ಹತ್ಯೆ ಪ್ರಕರಣ: 15 ಮಂದಿಯ ಬಂಧನ

Update: 2025-04-29 13:34 IST
ಮಂಗಳೂರಿನಲ್ಲಿ ಗುಂಪು ಹತ್ಯೆ ಪ್ರಕರಣ: 15 ಮಂದಿಯ ಬಂಧನ
  • whatsapp icon

ಮಂಗಳೂರು : ನಗರ ಹೊರವಲಯದ ಕುಡುಪು ಸಮೀಪ ರವಿವಾರ ವ್ಯಕ್ತಿಯೊಬ್ಬರನ್ನು ಸುಮಾರು 30ಕ್ಕೂ ಅಧಿಕವಿದ್ದ ಗುಂಪು ಹಲ್ಲೆ ನಡೆಸಿ ಹತ್ಯೆಗೈದಿರುವುದು ದೃಢಪಟ್ಟಿದೆ. ಪ್ರಕರಣಕ್ಕೆ ಸಂಬಂಧಿಸಿ 15 ಮಂದಿ ಆರೋಪಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ತಿಳಿಸಿದ್ದಾರೆ.

ಮಂಗಳವಾರ ಮಧ್ಯಾಹ್ನ ಆಯುಕ್ತರ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಅವರು, ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಕುಡುಪು ಮತ್ತು ಸುತ್ತಮುತ್ತಲಿನ ಸಚಿನ್ ಟಿ., ದೇವದಾಸ್, ಮಂಜುನಾಥ್, ಸಾಯಿದೀಪ್, ನಿತೀಶ್ ಕಮಾರ್ ಯಾನೆ ಸಂತೋಷ್, ದೀಕ್ಷಿತ್ ಕುಮಾರ್, ಸಂದೀಪ್, ವಿವಿಯನ್ ಅಲ್ವಾರಿಸ್, ಶ್ರೀದತ್ತ, ರಾಹುಲ್, ಪ್ರದೀಪ್ ಕುಮಾರ್, ಮನೀಶ್ ಶೆಟ್ಟಿ, ಧನುಷ್, ದೀಕ್ಷಿತ್, ಕಿಶೋರ್ ಕುಮಾರ್ ಎಂಬವರನ್ನು ಬಂಧಿಸಲಾಗಿದೆ ಎಂದು ತಿಳಿಸಿದರು.

ರವಿವಾರ ಪತ್ತೆಯಾದ ಅಪರಿಚಿತ ವ್ಯಕ್ತಿಯ ಮೃತದೇಹದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಅನುಮಾನದ ಆಧಾರದಲ್ಲಿ ಸೋಮವಾರ ಶವಪರೀಕ್ಷೆ ನಡೆಸಲಾಯಿತು. ಮರಣೋತ್ತರ ಪರೀಕ್ಷೆ ನಡೆಸಿದ ವೈದ್ಯರು ಪ್ರಾಥಮಿಕ ವರದಿ ಪ್ರಕಾರ ಮೃತರ ಬೆನ್ನು ಭಾಗದಲ್ಲಿ ಬಲವಾದ ಹೊಡೆತದ ಗಾಯಗಳ ಕಾರಣದಿಂದ ಉಂಟಾದ ರಕ್ತಸ್ರಾವ, ಶಾಕ್ ಮತ್ತು ಸೂಕ್ತ ಸಮಯದಲ್ಲಿ ಚಿಕಿತ್ಸೆ ಸಿಗದೆ ಮರಣ ಸಂಭವಿಸಿರುವುದು ಕಂಡು ಬಂದಿದೆ.

ಈವರೆಗಿನ ತನಿಖೆಯಲ್ಲಿ, ಎ.27ರಂದು ಮಧ್ಯಾಹ್ನ ಸುಮಾರು 3 ಗಂಟೆಗೆ ಭಟ್ರ ಕಲ್ಲುರ್ಟಿ ದೈವಸ್ಥಾನದ ಬಳಿಯ ಮೈದಾನದಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾವಳಿಯ ಸಂದರ್ಭ ಅಪರಿಚಿತ ವ್ಯಕ್ತಿಗೆ ಯಾವುದೋ ಮಾತಿಗೆ ಸಂಬಂಧಿಸಿ ಸಚಿನ್ ಟಿ. ಎಂಬಾತ ಜಗಳಕ್ಕೆ ಮುಂದಾದಾಗ ಸಹಚರರು ಕೂಡಾ ಜತೆ ಸೇರಿ ಹಲ್ಲೆ ನಡೆಸಿದ್ದಾರೆ. ಆತ ಓಡಿಹೋಗಲು ಯತ್ನಿಸಿದಾಗ ಸುಮಾರು 30 ಮಂದಿ ಸೇರಿ ಹಲ್ಲೆ ನಡೆಸಿದ್ದಾರೆ.

ಗುಂಪು ಸೇರಿ ಕೈಯಿಂದ ಮತ್ತು ಕಟ್ಟಿಗೆಯಿಂದ ಹೊಡೆದು ಕಾಲಿನಿಂದ ಯದ್ವಾತದ್ವ ತುಳಿದು ಹಲ್ಲೆ ನಡೆಸಿದ್ದರು. ಈ ಸಮಯ ಕೆಲವರು ತಡೆಯಲು ಯತ್ನಿಸಿದರೂ ನಿರಂತರ ಹಲ್ಲೆ ನಡೆಸಿದ ಕಾರಣ ಅಪರಿಚಿತ ವ್ಯಕ್ತಿ ಮೃತಪಟ್ಟಿರುವುದು ಕಂಡುಬಂದಿದೆ ಎಂದು ಪೊಲೀಸ್ ಕಮಿಷನರ್ ತಿಳಿಸಿದರು.

ದೀಪಕ್ ಕುಮಾರ್ ಎಂಬವರು 19 ಜನರು ಮತ್ತು ಇತರರ ವಿರುದ್ಧ ನೀಡಿದ ದೂರಿನ ಆಧಾರದಲ್ಲಿ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 37/2025, ಕಲಂ 102 (2), 189 (2),191 (1), 191(3), 240 ಭಾರತೀಯ ನ್ಯಾಯ ಸಂಹಿತೆ 2023 (ಬಿಎನ್‌ಎಸ್ 2023) ಅಡಿಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ. ಗುಂಪು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಪ್ರಥಮ ಬಾರಿಗೆ ಕಾನೂನಿನಡಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿಯ ಗುರುತು ಇನ್ನೂ ಪತ್ತೆಯಾಗಿಲ್ಲ. ಆತ ಉತ್ತರಭಾರತ ಮೂಲದ ಕಾರ್ಮಿಕ ಎಂದು ಹೇಳಲಾಗಿದ್ದರೂ ಆತ ಮಲಯಾಳಂ ಮಾತನಾಡುತ್ತಿದ್ದ ಎನ್ನಲಾಗಿದ್ದು, ಪತ್ತೆ ಕಾರ್ಯ ಮುಂದುವರಿದಿದೆ ಎಂದು ಅವರು ಹೇಳಿದರು.

ಗೋಷ್ಟಿಯಲ್ಲಿ ಡಿಸಿಪಿಗಳಾದ ಸಿದ್ಧಾರ್ಥ್ ಗೋಯಲ್, ರವಿಶಂಕರ್ ಉಪಸ್ಥಿತರಿದ್ದರು.

‘ಪ್ರಮುಖ ಆರೋಪಿ ಸಚಿನ್ ಆಟೋ ಚಾಲಕನಾಗಿದ್ದು, ಈ ಘಟನೆಯಲ್ಲಿ ಮಾಜಿ ಕಾರ್ಪೊರೇಟರ್ ಪತಿ ರವೀಂದ್ರ ನಾಯಕ್ ಎಂಬವರು ಭಾಗಿಯಾಗಿರುವ ಮಾಹಿತಿ ಇದೆ. ಈ ಬಗ್ಗೆ ಶೀಘ್ರವೇ ಮಾಹಿತಿ ನೀಡಲಾಗುವುದು.’

-ಅನುಪಮ್ ಅಗ್ರವಾಲ್, ಪೊಲೀಸ್ ಆಯುಕ್ತರು.

ಗುಂಪು ಹಲ್ಲೆ ನಡೆಸುವ ಸಂದರ್ಭ ವೀಡಿಯೋ ಚಿತ್ರೀಕರಣ ಮಾಡಲಾಗಿದ್ದು, ಆ ಸಾಕ್ಷ್ಯವನ್ನು ನಾಶ ಮಾಡಿಸಲಾಗಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅನುಪಮ್ ಅಗ್ರವಾಲ್, ತನಿಖೆಯ ವೇಳೆ ಆರೋಪಿಗಳಿಂದ ಎಲ್ಲಾ ರೀತಿಯ ಸಾಕ್ಷ್ಯಗಳನ್ನು ಹೊರತರಲಾಗುವುದು ಎಂದು ಕಮಿಷನರ್ ಅನುಪಮ್ ಅಗ್ರವಾಲ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ashik

contributor

Byline - ವಾರ್ತಾಭಾರತಿ

contributor

Similar News