ಕುಡುಪು ಗುಂಪುಥಳಿತದಿಂದ ಹತ್ಯೆ ಪ್ರಕರಣ: ಮೃತದೇಹವನ್ನು ಕೊಂಡೊಯ್ದ ಅಶ್ರಫ್ ಮನೆಮಂದಿ

Update: 2025-04-30 10:26 IST
ಕುಡುಪು ಗುಂಪುಥಳಿತದಿಂದ ಹತ್ಯೆ ಪ್ರಕರಣ: ಮೃತದೇಹವನ್ನು ಕೊಂಡೊಯ್ದ ಅಶ್ರಫ್ ಮನೆಮಂದಿ
  • whatsapp icon

ಮಂಗಳೂರು: ನಗರ ಹೊರವಲಯದ ಕುಡುಪು ಸಮೀಪ ಎ.27ರಂದು ದುಷ್ಕರ್ಮಿಗಳ ಗುಂಪೊಂದು ಥಳಿಸಿ ಹತ್ಯೆಗೈದ ವ್ಯಕ್ತಿಯ ಗುರುತುಪತ್ತೆಯಾಗಿದ್ದು, ಕೇರಳದಿಂದ ವಯನಾಡಿನಿಂದ ಆಗಮಿಸಿದ ಆತನ ಮನೆಮಂದಿ ಮೃತದೇಹವನ್ನು ಇಂದು(ಎ.30) ಬೆಳಗ್ಗಿನ ಜಾವ ಕೊಂಡೊಯ್ದಿದ್ದಾರೆ.

 

ಕೇರಳದ ವಯನಾಡ್ ಜಿಲ್ಲೆಯ ಪುಲ್ಪಳ್ಳಿ ನಿವಾಸಿ ಕುಂಞಾಯಿ ಎಂಬವರ ಪುತ್ರ ಅಶ್ರಫ್ ಕೊಲೆಯಾದ ವ್ಯಕ್ತಿ. ಈ ಬಗ್ಗೆ ಮಾಹಿತಿ ಪಡೆದಿದ್ದ ಅಶ್ರಫ್ ಕುಟುಂಬಸ್ಥರು ಮಂಗಳವಾರ ತಡರಾತ್ರಿ 12:30ರ ಸುಮಾರಿಗೆ ಮಂಗಳೂರಿಗೆ ಆಗಮಿಸಿದ್ದರು. ಅಶ್ರಫ್ ಅವರ ಸಹೋದರ ಸೇರಿದಂತೆ ಆಗಮಿಸಿದ್ದ ಮೂವರು ವೆನ್ಲಾಕ್ ಶವಾಗಾರದಲ್ಲಿರಿಸಿದ್ದ ಮೃತದೇಹ ಅಶ್ರಫ್ ಅವರದ್ದೆಂದು ಗುರುತಿಸಿದರು. ಈ ಹಿನ್ನೆಲೆಯಲ್ಲಿ ಕಾನೂನು ಪ್ರಕ್ರಿಯೆಯನ್ನು ಮುಗಿಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು.

 

ಬಳಿಕ ಮೃತದೇಹವನ್ನು ಬಂದರ್ ನ ಝೀನತ್ ಭಕ್ಷ್ ಕೇಂದ್ರ ಜುಮಾ ಮಸೀದಿಗೆ ಕೊಂಡೊಯ್ಯಲಾಯಿತು. ಅಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಿ ಮಯ್ಯಿತ್ ನಮಾಝ್ ನಿರ್ವಹಿಸಿದ ಬಳಿಕ ಮುಂಜಾನೆ 4:30ರ ಸುಮಾರಿಗೆ ಮೃತದೇಹವನ್ನು ಆಂಬುಲೆನ್ಸ್ ಮೂಲಕ ಮಲಪ್ಪುರಂಗೆ ಕೊಂಡೊಯ್ಯಲಾಯಿತು.

 

ಈ ಸಂದರ್ಭ ಮಾಜಿ ಮೇಯರ್ ಕೆ.ಅಶ್ರಫ್, ಸುಹೈಲ್ ಕಂದಕ್, ಕೆ.ಕೆ.ಶಾಹುಲ್ ಹಮೀದ್, ಬಿ.ಕೆ.ಇಮ್ತಿಯಾಝ್, ಸಂತೋಷ್ ಬಜಾಲ್, ಜಲೀಲ್ ಕೃಷ್ಣಾಪುರ, ರಿಯಾಝ್ ಕಡಂಬು ಮತ್ತಿತರರು ಉಪಸ್ಥಿತರಿದ್ದರು.

ಮೂಲತಃ ಮಲಪ್ಪುರಂ ಜಿಲ್ಲೆಯವರಾದ ಅಶ್ರಫ್ ಕುಟುಂಬ ಕೆಲವು ವರ್ಷಗಳ ಹಿಂದೆ ವಯನಾಡ್ ಜಿಲ್ಲೆಗೆ ಬಂದು ನೆಲೆಸಿದೆ. ತಂದೆ, ಇಬ್ಬರು ಸಹೋದರರು ಮತ್ತು ಇಬ್ಬರು ಸಹೋದರಿಯರನ್ನು ಹೊಂದಿದ್ದ ಅಶ್ರಫ್ ವ್ಯಾಪಾರದಲ್ಲಿ ನಷ್ಟ ಅನುಭವಿಸಿದ ನಂತರ ಮಾನಸಿಕ ಸಮಸ್ಯೆಗೆ ಒಳಗಾಗಿದ್ದರೆನ್ನಲಾಗಿದೆ.

ಮಾನಸಿಕ ಸಮಸ್ಯೆಯಿಂದ ಬಳಲುತ್ತಿದ್ದ ಅಶ್ರಫ್ ಮನೆ ಬಿಟ್ಟು ಇದೇರೀತಿ ಆಗಾಗ್ಗೆ ಹೋಗುತ್ತಿದ್ದರು. ಸದ್ಯ ಅವರ ಮಂಗಳೂರಿನಲ್ಲಿ ಇರುವ ಬಗ್ಗೆ ತಮಗೆ ಮಾಹಿತಿ ಇತ್ತು ಎಂದು ಕೊಲೆಯಾದ ಅಶ್ರಫ್ ರ ತಮ್ಮ ಜಬ್ಬಾರ್ 'ವಾರ್ತಾಭಾರತಿ'ಗೆ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Haneef

contributor

Byline - ವಾರ್ತಾಭಾರತಿ

contributor

Similar News